ರೀಏಜೆಂಟ್ ಗಳ ಖರೀದಿಗೆ ಹಣದ ಕೊರತೆ ಜಿನೋಮ್ ಸೀಕ್ವೆನ್ಸಿಂಗ್ ವಿಳಂಬಕ್ಕೆ ಕಾರಣ: ವರದಿ

Update: 2022-01-20 12:55 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜ.20: ಪ್ರತಿ ಪ್ರಕರಣದಲ್ಲಿ ವೈರಸ್ ನ ತಳಿಯನ್ನು ಗುರುತಿಸಲು ಕೋವಿಡ್ ರೋಗಿಗಳ ಸ್ಯಾಂಪಲ್ ಗಳ ಜಿನೋಮ್ ಸೀಕ್ವೆನ್ಸಿಂಗ್ ವಿಳಂಬವಾಗುತ್ತಿರುವುದಕ್ಕೆ ರೀಏಜೆಂಟ್‌ಗಳು ಅಥವಾ ರಾಸಾಯನಿಕ ಕಾರಕ (ರಾಸಾಯನಿಕ ವಿಶ್ಲೇಷಣೆಗೆ ಬಳಸುವ ಮಿಶ್ರಣ ಅಥವಾ ಪ್ರತಿಕ್ರಿಯಾತ್ಮಕ ವಸ್ತು)ಗಳ ಖರೀದಿಗೆ ಹಣದ ಕೊರತೆ ಕಾರಣವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದಲ್ಲಿನ ಉನ್ನತ ಮೂಲಗಳು ತಿಳಿಸಿವೆ. ಜಿನೋಮ್ ಸೀಕ್ವೆನ್ಸಿಂಗ್ ನಡೆಸಲು ನೇಮಕಗೊಳಿಸಿದ್ದ 38 ಲ್ಯಾಬ್ ಗಳ ಜಾಲ ಭಾರತೀಯ ಸಾರ್ಸ್-ಕೋವ್-2 ಜೆನೆಟಿಕ್ಸ್ ಕನ್ಸಾರ್ಟಿಯಮ್ (ಐಎನ್ಎಸ್ಎಸಿಒಜಿ)ನ ಐದು ಲ್ಯಾಬ್ ಗಳು ಈ ಕಾರಣದಿಂದ ಮುಚ್ಚಲ್ಪಟ್ಟಿವೆ ಎಂದು ಮೂಲಗಳು ಹೇಳಿವೆ ಎಂದು ndtv.com ವರದಿ ಮಾಡಿದೆ.

ವೈರಸ್ ಅನ್ನು ಪ್ರತ್ಯೇಕಿಸಿ ಅದನ್ನು ನಿಯಂತ್ರಿಸುವಂತಾಗಲು ಹೆಚ್ಚು ಸಾಂಕ್ರಾಮಿಕವಾಗಿರುವ ಒಮೈಕ್ರಾನ್ ಪ್ರಭೇದದ ಪ್ರಕರಣಗಳನ್ನು ಗುರುತಿಸಲು ಸರಕಾರವು ಪ್ರಯತ್ನಿಸುತ್ತಿರುವುದರಿಂದ ಕಾರಕಗಳ ಕೊರತೆಯು ಸಮಸ್ಯೆಯನ್ನುಂಟು ಮಾಡಿದೆ ಎಂದು ಅವು ತಿಳಿಸಿವೆ.

ಈ ತಿಂಗಳ ಆರಂಭದಲ್ಲಿ ದೇಶದಲ್ಲಿ ಕೋವಿಡ್ ಸ್ಥಿತಿಯನ್ನು ಪರಾಮರ್ಶಿಸಲು ಕರೆಯಲಾಗಿದ್ದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜಿನೋಮ್ ಸೀಕ್ವೆನ್ಸಿಂಗ್ ನ ಪ್ರಾಮುಖ್ಯವನ್ನು ಒತ್ತಿ ಹೇಳಿದ್ದರು.

ಆದಾಗ್ಯೂ ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ನಡೆಸಲಾದ ಜಿನೋಮ್ ಸೀಕ್ವೆನ್ಸಿಂಗ್ ಪ್ರಮಾಣ ಸುಮಾರು ಶೇ.40ರಷ್ಟು ಕುಸಿದಿದೆ ಮತ್ತು ಭಾರತದಲ್ಲಿ ಮೂರನೇ ಅಲೆಗೆ ಪ್ರಮುಖ ಕಾರಣವಾಗಿರುವ ಒಮೈಕ್ರಾನ್ ತಳಿ ನವೆಂಬರ್ ನಲ್ಲಿ ಮೊದಲು ಕಾಣಿಸಿಕೊಂಡಾಗಿನಿಂದ ಕೇವಲ ಸುಮಾರು 25,000 ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗಳನ್ನು ನಡೆಸಲಾಗಿದೆ.

ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಆರಂಗೊಂಡಾಗಿನಿಂದ 1.6 ಲ.ಕ್ಕೂ ಅಧಿಕ ಸ್ಯಾಂಪಲ್ ಗಳ ಜಿನೋಮ್ ಸೀಕ್ವೆನ್ಸಿಂಗ್ ನಡೆಸಲಾಗಿದೆ.

ಪ್ರತಿಯೊಂದೂ ಕೋವಿಡ್ ಸ್ಯಾಂಪಲ್ ನ ಜಿನೋಮ್ ಸೀಕ್ವೆನಿಂಗ್ ನಡೆಸಲು ಸಾಧ್ಯವಿಲ್ಲ ಎಂದು ಕಳೆದ ಡಿಸೆಂಬರ್ ನಲ್ಲಿ ಸರಕಾರವು ಒಪ್ಪಿಕೊಂಡಿತ್ತು. ಮಹಾರಾಷ್ಟ್ರ ಸೇರಿದಂತೆ ರಾಜ್ಯ ಸರಕಾರಗಳೂ ಇದನ್ನು ಪ್ರತಿಧ್ವನಿಸಿದ್ದವು.

ಕೊರೋನವೈರಸ್ ನ ತಿಳಿದಿರುವ ಪ್ರಭೇದಗಳನ್ನು ಖಚಿತವಾಗಿ ಗುರುತಿಸಲು ಜಿನೋಮ್ ಸೀಕ್ವೆನ್ಸಿಂಗ್ ಏಕೈಕ ಮಾರ್ಗವಾಗಿದೆ ಮತ್ತು ಕೊರೋನವೈರಸ್ ನ ಜೈವಿಕ ವಿಕಾಸದ ಮೇಲೆ ನಿಗಾಯಿರಿಸುವಲ್ಲಿ ನಿರ್ಣಾಯಕವಾಗಿದೆ.

ಈ ನಡುವೆ ಬುಧವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ ಮೂರು ಲಕ್ಷಕ್ಕೂ ಅಧಿಕ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು,ಇವುಗಳಲ್ಲಿ 2,700ಕ್ಕೂ ಅಧಿಕ ಒಮೈಕ್ರಾನ್ ಪ್ರಕರಣಗಳೂ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News