ಐಎಎಸ್ ಗಳ ವರ್ಗಾವಣೆಯ ಅಧಿಕಾರ ತನ್ನದಾಗಿಸುವ ಕೇಂದ್ರದ ಕ್ರಮದ ಹಿಂದೆ ಆರೆಸ್ಸೆಸ್ ಅಜೆಂಡಾ: ಪ್ರಕಾಶ್ ಅಂಬೇಡ್ಕರ್

Update: 2022-01-20 13:29 GMT
ಪ್ರಕಾಶ್ ಅಂಬೇಡ್ಕರ್ (PTI)

ಮುಂಬೈ: ಐಎಎಸ್ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸಂಪೂರ್ಣ ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಳ್ಳುವ ಕೇಂದ್ರದ ಪ್ರಸ್ತಾವಿತ ಕ್ರಮವು, ಸಂವಿಧಾನಾತ್ಮಕವಾಗಿ ರಾಜ್ಯಗಳಿಗೆ ಪ್ರದತ್ತವಾದ ಹಕ್ಕುಗಳನ್ನು ಕಸಿಯುವ ಇನ್ನೊಂದು ಯತ್ನವಾಗಿದೆ ಎಂದು ವಂಚಿತ್ ಬಹುಜನ್ ಅಘಾಟಿ ಅಧ್ಯಕ್ಷ ಹಾಗೂ ಸಂವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.

ರಾಜ್ಯ ಸರಕಾರಗಳು ಪಕ್ಷಾತೀತವಾಗಿ ಈ ಪ್ರಸ್ತಾವನೆಯನ್ನು ವಿರೋಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.  ಕೇಂದ್ರ ಸರಕಾರವು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸತತವಾಗಿ ರಾಜ್ಯಗಳ ಅಧಿಕಾರಗಳನ್ನು ಕಸಿಯುತ್ತಿರುವ ಕುರಿತು ಗಂಭೀರ ಕಳವಳವನ್ನು ಅವರು ವ್ಯಕ್ತಪಡಿಸಿದ್ದಾರೆ.

ಸರಕಾರವು ಆರೆಸ್ಸೆಸ್ ಅಜೆಂಡಾ ಜಾರಿಗೆ ತರಲು ಯತ್ನಿಸುತ್ತಿದೆ ಎಂಬುದು ಸ್ಪಷ್ಟ. ಇದು ಐಎಎಸ್/ಐಪಿಎಸ್ ಕೇಡರ್ ನ ಜಾತ್ಯತೀತ ಸ್ವರೂಪವನ್ನು ನಾಶಗೊಳಿಸುವತ್ತ ಒಂದು ಹೆಜ್ಜೆಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

ಈ ತಿದ್ದುಪಡಿಗೆ ಯಾರೂ ವಿರೋಧಿಸದೇ ಇದ್ದರೆ ಇದು ಆಡಳಿತಾತ್ಮಕವಾಗಿ ಬಹುದೊಡ್ಡ ಪರಿಣಾಮ ಬೀರಲಿದೆ ಹಾಗೂ ರಾಜ್ಯಗಳು ಮತ್ತು ಕೇಂದ್ರದ ನಡುವಿನ ಜಗ್ಗಾಟಕ್ಕಿಂತ ಹೆಚ್ಚಿನ ಸಮಸ್ಯೆ ಸೃಷ್ಟಿಸಲಿದೆ ಎಂದು ಅವರು ಹೇಳಿದರು. ``ಅಧಿಕಾರಿಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ ತನ್ನ ಕಾರ್ಯ ಸಾಧಿಸುವ ಅಥವಾ ನಿರ್ದಿಷ್ಟ ನೀತಿಗಳಿಗೆ ಒಪ್ಪದವರಿಗೆ ಕಿರುಕುಳ ನೀಡುವ ಹುನ್ನಾರ ಕೇಂದ್ರಕ್ಕೆ ಇದೆ,'' ಎಂದು ಅವರು ಹೇಳಿದರು.

ಜನವರಿ 12ರಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಎಲ್ಲಾ ರಾಜ್ಯ ಸರಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ಐಎಎಸ್ (ಕೇಡರ್) ನಿಯಮ 1954ಗೆ ತಿದ್ದುಪಡಿಗಳಿಗೆ ಪ್ರಸ್ತಾವನೆ ಎಂಬ ಶೀರ್ಷಿಕೆಯ ಸುತ್ತೋಲೆ ಕಳುಹಿಸಿತ್ತು. ಕೇಂದ್ರ ಯಾವುದೇ ಅಧಿಕಾರಿಯನ್ನು ಡೆಪ್ಯುಟೇಶನ್ ಮೇಲೆ ಕರೆಸಿದರೆ ಅವರು ತಮ್ಮ ಕೇಡರ್‍ನ ಸೇವೆಯಿಂದ ಹೊರಬರುತ್ತಾರೆ. ರಾಜ್ಯ ಸರಕಾರಗಳು ಒಪ್ಪದೇ ಇದ್ದರೂ ಹಾಗೂ ಅನುಮತಿಸದೇ ಇದ್ದರೂ ಕೇಂದ್ರ ಡೆಪ್ಯುಟೇಶನ್ ಅನ್ನು ಅಧಿಕಾರಿಗಳು ಒಪ್ಪಬೇಕು ಎಂದು ತಿದ್ದುಪಡಿ ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News