ಮಂಗಳೂರು; ಆ್ಯಂಬುಲೆನ್ಸ್‌ಗೆ ಅಡ್ಡಿಪಡಿಸಿದ ಆರೋಪ: ಕಾರು ಚಾಲಕ ಸೆರೆ

Update: 2022-01-20 14:17 GMT

ಮಂಗಳೂರು, ಜ.20: ರೋಗಿಯನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್‌ಗೆ ದಾರಿ ಬಿಟ್ಟು ಕೊಡದೆ ಸತಾಯಿಸಿದ ಕಾರು ಚಾಲಕ ಮೊನಿಷ್ ರಹ್ಮಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಸಂಚಾರ ಉತ್ತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ರೋಗಿಯನ್ನು ಬುಧವಾರ ಸಂಜೆ ಭಟ್ಕಳಕ್ಕೆ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸೇರಿದ ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯುಲಾಗುತ್ತಿತ್ತು. ಈ ಆ್ಯಂಬುಲೆನ್ಸನ್ನು ಬೆಳ್ತಂಗಡಿಯ ಅಯ್ಯೂಬ್ ಎಂಬವರು ಚಲಾಯಿಸುತ್ತಿದ್ದರು.

ಮಂಗಳೂರಿನಿಂದ ಹೊರಟ ಆ್ಯಂಬುಲೆನ್ಸ್ ಮುಲ್ಕಿ ತಲುಪಿದಾಗ ಶೆವರ್ಲೆ ಬೀಟ್ ಕಾರು ಓವರ್‌ ಟೇಕ್ ಮಾಡಿತು. ಆ ಬಳಿಕ ಎಲ್ಲೂ ಸೈಡ್ ಬಿಟ್ಟುಕೊಡದೆ ಉಡುಪಿಯವರೆಗೂ ಕಾರು ಚಾಲಕ ಸತಾಯಿಸಿದ್ದ. ಇದನ್ನು ಆ್ಯಂಬುಲೆನ್ಸ್‌ನಲ್ಲಿದ್ದವರು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಕಾರು ಚಾಲಕನ ಈ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಾರಿನಲ್ಲಿದ್ದ ಇನ್ನೊಬ್ಬನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News