ನಾರಾಯಣ ಗುರುಗಳ ಸ್ತಬ್ಧಚಿತ್ರ ವಿವಾದ; ಸಿದ್ದರಾಮಯ್ಯರಿಗಿರುವಷ್ಟು ಗೌರವ ಸುನೀಲ್‌ ಗಿಲ್ಲ: ಹರೀಶ್ ಕುಮಾರ್

Update: 2022-01-21 15:15 GMT

ಮಂಗಳೂರು, ಜ.21: ಸಮಾಜ ಸುಧಾರಕ, ವಿಶ್ವಮಾನವ ನಾರಾಯಣ ಗುರುಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇರುವಷ್ಟು ಗೌರವ ಸಚಿವ ಸುನೀಲ್ ಕುಮಾರ್‌ಗೆ ಇಲ್ಲ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಿಂದುಳಿದ ವರ್ಗದವರಿಗೆ ದೇವಾಲಯ ಸ್ಥಾಪಿಸಿ, ಪೂಜಿಸಲು ಅವಕಾಶ ಮಾಡಿ ಕೊಟ್ಟ ನಾರಾಯಣ ಗುರುಗಳ ಜನ್ಮ ಜಯಂತಿಯನ್ನು ರಾಜ್ಯದಲ್ಲಿ ಸರಕಾರಿ ಕಾರ್ಯಕ್ರಮವಾಗಿ ರೂಪಿಸಿದವರು ಸಿದ್ದರಾಮಯ್ಯ ಎಂಬುದನ್ನು ಸುನೀಲ್ ಕುಮಾರ್ ಮರೆತಂತಿದೆ. ಕೇರಳ ರಾಜ್ಯದಲ್ಲಿ ಹಿಂದುಳಿದ ಮಹಿಳೆಯರು ಎದೆ ಮೇಲೆ ಬಟ್ಟೆ ಧರಿಸಲು ಅವಕಾಶವಿಲ್ಲದಿದ್ದಾಗ ಈ ಕಂದಾಚಾರದ ವಿರುದ್ಧ ಹೋರಾಡಿದವರು ನಾರಾಯಣ ಗುರುಗಳು. ಇದರ ವಿರುದ್ಧ ನಿಯಮ ರೂಪಿಸಿ ಜಾರಿಗೊಳಿಸಿರುವುದು ಟಿಪ್ಪುಸುಲ್ತಾನ್ ಎಂಬ ಸತ್ಯ ಸುನೀಲ್ ಕುಮಾರ್ ಅರಿಯಬೇಕಿದೆ. ಗುರುಗಳಿಗಾದ ಅವಮಾನದ ವಿರುದ್ಧ ಧ್ವನಿ ಎತ್ತುವುದು ಬಿಟ್ಟು ಗುರುಗಳಿಗೆ ಮತ್ತೆ ಅವಮಾನದ ಮಾತನ್ನಾಡುತ್ತಿರುವುದು ಸಚಿವರಿಗೆ ಶೋಭೆ ತರುವುದಿಲ್ಲ. ಇಲ್ಲಿ ಸಿದ್ದರಾಮಯ್ಯ, ಟಿಪ್ಪುಸುಲ್ತಾನ್ ಹೆಸರು ಯಾಕೆ ಬಳಕೆ ಮಾಡುತ್ತೀರಿ ? ನೀವು ಒಬ್ಬ ನಾರಾಯಣ ಗುರುಗಳ ಅನುಯಾಯಿ ಹೌದಾದರೆ ಕೋಟಿ ಚೆನ್ನಯರ ಕೆಚ್ಚು ನಿಮ್ಮಲ್ಲಿದ್ದರೆ ಧೈರ್ಯದಿಂದ ಕೇಂದ್ರ ಸರಕಾರದ ನಡೆಯನ್ನು ಖಂಡಿಸಿ ಗುರುಗಳ ಅನುಯಾಯಿಗಳ ಜತೆ ಸೇರಿಕೊಳ್ಳಿ. ಮನುವಾದಿ ಧೋರಣೆಯಿಂದ, ರಾಜಕೀಯದ ಪರಿಧಿಯಿಂದ ಹೊರಬನ್ನಿ. ಸಮಸ್ತ ಗುರುಗಳ ಅನುಯಾಯಿಗಳ ನೋವಿನಲ್ಲಿ ಪಾಲ್ಗೊಳ್ಳಿ ಎಂದು ಹರೀಶ್ ಕುಮಾರ್ ಸವಾಲು ಹಾಕಿದ್ದಾರೆ. ಹಿಂದುಳಿದ ವರ್ಗದವರಿಗೆ ಮೀಸಾಲಾತಿ ವಿರೋಧಿಸಿದವರು ಮಂಡಲ ಆಯೋಗ ವರದಿ ಜಾರಿ ವಿರುದ್ಧ ಕಮಂಡಲ ಹಿಡಿದು ದೇಶಾದ್ಯಂತ ಗಲಭೆ ಎಬ್ಬಿಸಿ ಹಿಂದುಳಿದವರ ವಿರೋಧ ನಿಂತವರು ಯಾವ ಪಕ್ಷದವರು ಎಂದು ತಮಗೆ ತಿಳಿದಿದೆ. ಈ ಸಂದರ್ಭ ಹಿಂದುಳಿದವರ ಪರವಾಗಿ ಧ್ವನಿ ಎತ್ತಿದವರಲ್ಲಿ ಸಿದ್ದರಾಮಯ್ಯ ಕೂಡಾ ಒಬ್ಬರು ಎಂದು ನೆನಪಿಸಿಕೊಳ್ಳಿ. ಇದು ರಾಜಕೀಯ ಮಾಡುವ ವಿಚಾರ ಅಲ್ಲ. ಸಮಸ್ತ ಗುರುಗಳ ಅನುಯಾಯಿಗಳ ನೋವಿನ ವಿಚಾರ. ಗುರುಗಳಿಗೆ ಅವಮಾನಿಸಿದ ವಿಚಾರ. ಆದುದರಿಂದ ತಾವು ಯಾವುದೋ ಒತ್ತಡಕ್ಕೆ ಮಣಿದು ಗುರುಗಳನ್ನು ಮತ್ತೆ ಅವಮಾನಿಸದೆ ಸತ್ಯ ಒಪ್ಪಿಕೊಂಡು ಸಂಚನ್ನು ಖಂಡಿಸಿ ಎಂದು ಹರೀಶ್ ಕುಮಾರ್ ತಿಳಿಸಿದ್ದಾರೆ.

ಇಲ್ಲಸಲ್ಲದ ಕಾರಣಗಳನ್ನು ಹೇಳಬೇಡಿ. ಇಲ್ಲಿ ತಾಂತ್ರಿಕ ದೋಷವು ಆಗಿಲ್ಲ. ಮೂರು ವರ್ಷಕ್ಕೊಮ್ಮೆ ಒಂದಾವರ್ತಿ ಅವಕಾಶ ಎನ್ನುವುದು ಸುಳ್ಳು. ಒಂದು ತಪ್ಪನ್ನು ಸರಿಪಡಿಸಲು ನೂರು ಸುಳ್ಳು ಸೃಷ್ಟಿಸುವುದರಿಂದ ಯಾರಿಗೂ ಒಳಿತಾಗದು ಎನ್ನುವುದನ್ನು ತಿಳಿಯಿರಿ ಎಂದು ಹರಿಶ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News