'ವೆಲ್ ನೆಸ್ಸ್ ಹೆಲ್ಪ್ ಲೈನ್ ಕಾಲ್ ಸೆಂಟರ್' ಮಾಹಿತಿ ಅಭಿಯಾನಕ್ಕೆ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಚಾಲನೆ

Update: 2022-01-21 16:33 GMT

ಮಂಗಳೂರು : 'ವೆಲ್ ನೆಸ್ಸ್ ಹೆಲ್ಪ್ ಲೈನ್ ಕಾಲ್ ಸೆಂಟರ್' ಮಾಹಿತಿ ಅಭಿಯಾನಕ್ಕೆ ಉಡುಪಿ ಖಾಝಿ ಝೈನುಲ್ ಉಲೆಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಚಾಲನೆ ನೀಡಿದರು.

ವೆಲ್ ನೆಸ್ಸ್ ಹೆಲ್ಪ್ ಲೈನ್, ಈಗಾಗಲೇ ಹತ್ತು ಸಾವಿರಕ್ಕಿಂತ ಹೆಚ್ಚು ರೋಗಿಗಳಿಗೆ ಆರೋಗ್ಯ ಮಾಹಿತಿ ಮತ್ತು ಸೇವೆ ನೀಡಿರುವ ಸಂಸ್ಥೆ. ರೋಗಿಗಳಿಗೆ ಆಸ್ಪತ್ರೆ, ತಜ್ಞ ವೈದ್ಯರು, ಆಕ್ಸಿಜನ್, ಆರೋಗ್ಯ ಸೇವಾ ಕಾರ್ಡ್ ಮತ್ತು ತುರ್ತು ಚಿಕಿತ್ಸೆಯಲ್ಲಿ ನೆರವಾಗುತ್ತಿರುವ ವೆಲ್ ನೆಸ್ಸ್ ಹೆಲ್ಪ್ ಲೈನ್ ರೋಗಿಗಳ ಸೇವೆಗಾಗಿ ಕಾಲ್ ಸೆಂಟರನ್ನು ಅಭಿವೃದ್ಧಿಪಡಿಸಿದೆ. ಈ ಕಾಲ್ ಸೆಂಟರ್ ನಂಬರ್ ಹೆಚ್ಚಿನವರಿಗೆ ತಿಳಿದಿಲ್ಲ. ಈ ನಿಟ್ಟಿನಲ್ಲಿ ಇದರ ಕುರಿತು ಮಾಹಿತಿ ನೀಡುವ ಪೊಸ್ಟರ್ ಗಳನ್ನು ಮಸೀದಿ ಮತ್ತು ಗ್ರಾಮಗಳಲ್ಲಿ ಅಳವಡಿಸಲು ಸಂಸ್ಥೆ ನಿರ್ಧರಿಸಿದೆ. ಜಿಲ್ಲೆಯ ಪ್ರತೀ ಮಸೀದಿಯಲ್ಲೂ ಇಂತಹ ಪೊಸ್ಟರ್ ಗಳು ಆರೋಗ್ಯ ಸೇವೆಗೆ ಮಾರ್ಗದರ್ಶಿ ಸೂಚನೆ ಮತ್ತು ನೆರವನ್ನು ಒದಗಿಸಲಿದೆ ಎಂದು ವಿವರಿಸಿದರು.

ಆರೋಗ್ಯ ಕ್ಷೇತ್ರದಲ್ಲಿ ವ್ಯವಸ್ಥಿತ ಸೇವಾ ಪದ್ಧತಿಯನ್ನು ರೂಪಿಸಿರುವ ವೆಲ್ ನೆಸ್ಸ್ ಹೆಲ್ಪ್ ಲೈನ್ ಸೇವೆಗೆ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು, ಆಸ್ಪತ್ರೆಯ ವೈದ್ಯರುಗಳು ಪ್ರಶಂಸೆ ವ್ಯಕ್ತಪಡಿಸಿದ್ದು, ರೋಗಿಗಳು ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನ ಇಲ್ಲದೇ ಅಲೆದಾಡುವುದು, ಕೊನೆಗೆ ಸಿಕ್ಕಿದ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ವೆಚ್ಚಕ್ಕಾಗಿ ಅಂಗಲಾಚುವುದನ್ನು ತಪ್ಪಿಸುತ್ತಿರುವ ವೆಲ್ ನೆಸ್ಸ್ ಹೆಲ್ಪ್ ಲೈನ್ ಈಗಾಗಲೇ ಹತ್ತು ಕೋಟಿಗಿಂತ ಹೆಚ್ಚು ಹಣವನ್ನು ರೋಗಿಗಳಿಗೆ ಉಳಿತಾಯ ಮಾಡಿಕೊಟ್ಟ ಅಂಕಿ ಅಂಶವನ್ನು ಹೊಂದಿದೆ.

ವೆಲ್ ನೆಸ್ಸ್ ಹೆಲ್ಪ್ ಲೈನ್ ಗೆ ಕರೆ ಮಾಡಿದರೆ, ತಕ್ಷಣ ರೋಗಿಯ ಮಾಹಿತಿ, ರೋಗದ ಮಾದರಿ, ರೋಗದ ಲಕ್ಷಣಗಳು, ರೋಗಿಯ ಪ್ರಸ್ತುತ ಸ್ಥಿತಿ, ಪ್ರಯಾಣದ ದೂರ, ಬೇಕಾಗಿರುವ ನೆರವನ್ನು ಸಂಗ್ರಹಿಸಿ, ಕೆಲವೇ ಕ್ಷಣದಲ್ಲಿ ಅವರಿಗೆ ಅಗತ್ಯ ಇರುವ ಸೇವೆಯನ್ನು ನೀಡುತ್ತದೆ. ಅನಂತರ ರೋಗಿಯು ಡಿಸ್ಚಾರ್ಜ್ ಆಗುವವರೆಗೂ ನಿಗಾ ಇರಿಸಿ ಅವರನ್ನು ವೀಕ್ಷಿಸುತ್ತದೆ. ವೆಲ್ ನೆಸ್ಸ್ ತಜ್ಞ ವೈದ್ಯರು, ಆಸ್ಪತ್ರೆ, ಎನ್ ಜಿ ಒ, ಆರೋಗ್ಯ ಸೇವಾ ಕಾರ್ಯಕರ್ತರ ನೆಟ್ ವರ್ಕ್ ಅನ್ನು ಹೊಂದಿದ್ದು ಇದೊಂದು ಬೃಹತ್ತ್ ಆರೋಗ್ಯ ಸೇವೆಯ ಕೊಂಡಿಯಾಗಿ ಈಗ ಅಭಿವೃದ್ಧಿ ಹೊಂದಿ ನಾಡಿನ ಸಾವಿರಾರು ರೋಗಿಗಳಿಗೆ ನೆರವು ನೀಡುತ್ತಿದೆ.

ಈ ನೆಟ್ ವರ್ಕ್ ನ ಪ್ರಯೋಜ ಎಲ್ಲಾ ಧರ್ಮೀಯರು, ಎಲ್ಲಾ ವರ್ಗದ ಜನರೂ ಪಡೆಯುತ್ತಿದ್ದು, ಕೊರೋನ ಭೀತಿಯ ಸಂದರ್ಭ ಸಂಸ್ಥೆಯ ಸೇವೆಯು ಜಿಲ್ಲೆಯಲ್ಲಿ ಎಲ್ಲರಿಗೂ ಮಾದರಿಯಾಗಿ ಪ್ರಶಂಸೆಗೆ ಒಳಗಾಗಿತ್ತು. ಕೊರೋನ ಸಂದರ್ಭದಲ್ಲಿ ರೋಗಿಗಳಿಗೆ ಮಾರ್ಗದರ್ಶನ, ಕೌನ್ಸಿಲಿಂಗ್, ಆಸ್ಪತ್ರೆ ಮಾಹಿತಿ, ಬೆಡ್ಡ್, ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ಸೇರಿದಂತೆ ಆಂಬುಲೆನ್ಸ್ ಸೇವೆಯನ್ನು ನೀಡಿ ಸಾವಿರಾರು ರೋಗಿಗಳ ಜೀವ ಉಳಿಸುವ ಪ್ರಯತ್ನದಲ್ಲಿ ಜಿಲ್ಲಾಡಳಿತ ಮತ್ತು ಸರಕಾರದೊಂದಿಗೆ ಸ್ಪಂದಿಸಿದೆ ಎಂದು ಈ ಸಂದರ್ಭದಲ್ಲಿ ವಿವರಿಸಲಾಯಿತು.

ಹಿದಾಯ ಪೌಂಡೇಶನ್ ಅಧ್ಯಕ್ಷರಾದ ಹನೀಫ್ ಹಾಜಿ ಗೊಲ್ತಮಜಲು, ಪುತ್ತೂರು ಕಮ್ಯೂನಿಟಿ ಸೆಂಟರ್ ನ ಇಮ್ತಿಯಾಝ್ ಪಾರ್ಲೆ, ವೆಲ್ ನೆಸ್ಸ್ ನ ಹನೀಫ್ ಹಾಗು ಇತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News