ದ್ವಿತೀಯ ಏಕದಿನ: ದಕ್ಷಿಣ ಆಫ್ರಿಕಾ ಜಯಭೇರಿ, ಸರಣಿಯಲ್ಲಿ 2-0 ಮುನ್ನಡೆ

Update: 2022-01-21 16:46 GMT
Photo: PTI

 ಪಾರ್ಲ್,ಜ.21: ಜನ್ನೆಮನ್ ಮಲನ್(91 ರನ್, 108 ಎಸೆತ, 8 ಬೌಂಡರಿ,1 ಸಿಕ್ಸರ್)ಹಾಗೂ ಕ್ವಿಂಟನ್ ಡಿಕಾಕ್(78 ರನ್, 66 ಎಸೆತ, 7 ಬೌಂ. 3 ಸಿ.)ಭರ್ಜರಿ ಜೊತೆಯಾಟದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಭಾರತ ವಿರುದ್ಧದ 2ನೇ ಏಕದಿನ ಪಂದ್ಯವನ್ನು 7 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಗೆದ್ದುಕೊಂಡಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು 288 ರನ್ ಗುರಿ ಪಡೆದ ದಕ್ಷಿಣ ಆಫ್ರಿಕಾ 48.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿತು. 3ನೇ ಅರ್ಧಶತಕ ಸಿಡಿಸಿದ ಮಲನ್ ಹಾಗೂ 36 ಎಸೆತಗಳಲ್ಲಿ 28ನೇ ಅರ್ಧಶತಕ ಪೂರೈಸಿದ ಡಿಕಾಕ್ ಮೊದಲ ವಿಕೆಟ್‌ಗೆ 132 ರನ್ ಸೇರಿಸಿ ತಂಡದ ಗೆಲುವಿಗೆ ಮುನ್ನುಡಿ ಬರೆದರು.

ಮರ್ಕ್ರಮ್(ಔಟಾಗದೆ 37)ಹಾಗೂ ವಾನ್‌ಡರ್ ಡುಸ್ಸೆನ್(37)4ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 74 ರನ್ ಗಳಿಸಿ ಸೇರಿಸಿ ಗೆಲುವಿನ ವಿಧಿವಿಧಾನ ಪೂರೈಸಿದರು.

ಇದಕ್ಕೂ ಮೊದಲು ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತವು ಜೀವನಶ್ರೇಷ್ಠ ಇನಿಂಗ್ಸ್ ಆಡಿದ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಹಾಗೂ ನಾಯಕ ಕೆ.ಎಲ್.ರಾಹುಲ್ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News