ಕಾಶ್ಮೀರದಲ್ಲಿ ಯುದ್ಧಾಪರಾಧಗಳನ್ನು ಆರೋಪಿಸಿ ಬ್ರಿಟಿಷ್ ಸಂಸ್ಥೆಯಿಂದ ಅಮಿತ್ ಶಾ, ನರವಣೆ ಬಂಧನ ಕೋರಿ ಅರ್ಜಿ ಸಲ್ಲಿಕೆ

Update: 2022-01-21 17:45 GMT
ಅಮಿತ್ ಶಾ / ಜ.ಎಂ.ಎಂ.ನರವಣೆ  (Photo credit: PTI) 

ಹೊಸದಿಲ್ಲಿ,ಜ.21: ಕಾಶ್ಮೀರದಲ್ಲಿ ಯುದ್ಧಪರಾಧಗಳು ನಡೆಯುತ್ತಿವೆ ಎಂದು ಆರೋಪಿಸಿ ಬ್ರಿಟನ್ನಿನ ಕಾನೂನು ಸಂಸ್ಥೆ ಸ್ಟೋಕ್ ವೈಟ್ ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆ ಅವರನ್ನು ಬಂಧಿಸುವಂತೆ ಕೋರಿ ಯು.ಕೆ. ಪೊಲೀಸರಿಗೆ ಅರ್ಜಿಯನ್ನು ಸಲ್ಲಿಸಿದೆ ಎಂದು ವರದಿಯಾಗಿದೆ.

ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಮತ್ತು ನಾಗರಿಕರಿಗೆ ಹಿಂಸೆ, ಅಪಹರಣ ಮತ್ತು ಹತ್ಯೆಗಳಿಗೆ ಭಾರತೀಯ ಪಡೆಗಳು ಹೇಗೆ ಹೊಣೆಯಾಗಿವೆ ಎನ್ನುವುದನ್ನು ತೋರಿಸುವ ಸಾಕ್ಷ್ಯಾಧಾರಗಳನ್ನು ಸ್ಟೋಕ್ ವೈಟ್ ಪೊಲೀಸರಿಗೆ ಸಲ್ಲಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ತನ್ನ ವರದಿಯು 2020-21ರ ಸಂದರ್ಭ 2,000ಕ್ಕೂ ಅಧಿಕ ಜನರಿಂದ ಸಂಗ್ರಹಿಸಲಾಗಿದ್ದ ಹೇಳಿಕೆಗಳನ್ನು ಆಧರಿಸಿದೆ ಎಂದಿರುವ ಸಂಸ್ಥೆಯು ಎಂಟು ಹಿರಿಯ ಭಾರತೀಯ ಸೇನಾಧಿಕಾರಿಗಳು ಅಪರಾಧಗಳು ಮತ್ತು ಹಿಂಸೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಈ ವರದಿಯ ಬಗ್ಗೆ ತಿಳಿದಿಲ್ಲ ಮತ್ತು ಹೇಳಿಕೆಯನ್ನು ನೀಡಲು ನಿರಾಕರಿಸಿದೆ, ಗೃಹಸಚಿವ ಅಮಿತ್ ಶಾ ಕೂಡ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ಮಾಧ್ಯಮಗಳು ತಿಳಿಸಿವೆ.

ಸಂಸ್ಥೆಯು ‘ಸಾರ್ವತ್ರಿಕ ನ್ಯಾಯವ್ಯಾಪ್ತಿ’ ನೀತಿಯಡಿ ಬ್ರಿಟಿಷ್ ಪೊಲೀಸರಿಗೆ ಅರ್ಜಿಯನ್ನು ಸಲ್ಲಿಸಿದೆ ಎಂದು ವರದಿಗಳು ತಿಳಿಸಿವೆ. ಈ ನೀತಿಯು ವಿಶ್ವಾದ್ಯಂತ ಎಲ್ಲಿಯೇ ಮಾನವತೆಯ ವಿರುದ್ಧ ಅಪರಾಧಗಳ ಆರೋಪಿಗಳ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಲು ದೇಶಗಳಿಗೆ ಅಧಿಕಾರ ನೀಡಿದೆ. ಜಿನಿವಾ ನಿರ್ಣಯಗಳ ಕಾಯ್ದೆ 1957ರಡಿ ಯುದ್ಧಾಪರಾಧಗಳು ಕುರಿತು ಸಾರ್ವತ್ರಿಕ ನ್ಯಾಯವ್ಯಾಪ್ತಿಯನ್ನು ಬ್ರಿಟನ್ ಹೊಂದಿದೆ.

‘ತಮ್ಮ ಕರ್ತವ್ಯ ನಿರ್ವಹಿಸುವಂತೆ ಹಾಗೂ ನಾವು ಒದಗಿಸಿರುವ ಸಾಕ್ಷಾಧಾರಗಳ ಆಧಾರದಲ್ಲಿ ತನಿಖೆಯನ್ನು ನಡೆಸಿ, ಅಪರಾಧಗಳನ್ನು ಎಸಗಿದ್ದಕ್ಕಾಗಿ ಅವರನ್ನು (ಶಾ ಮತ್ತು ನರವಣೆ) ಬಂಧಿಸುವಂತೆ ನಾವು ಬ್ರಿಟನ್ ಸರಕಾರವನ್ನು ಆಗ್ರಹಿಸುತ್ತಿದ್ದೇವೆ ’ ಎಂದು ಸ್ಟೋಕ್ ವೈಟ್ನ ಅಂತರರಾಷ್ಟ್ರೀಯ ಕಾನೂನು ನಿರ್ದೇಶಕ ಹಕನ್ ಕಾಮುಝ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News