ಮುಂಬೈ ಬಹುಮಹಡಿ ವಸತಿ ಕಟ್ಟಡದಲ್ಲಿ ಅಗ್ನಿ ಅವಘಡ: ಮೃತರ ಸಂಖ್ಯೆ 7ಕ್ಕೇರಿಕೆ, ಹಲವರಿಗೆ ಗಾಯ

Update: 2022-01-22 06:18 GMT
Photo: ANI

ಮುಂಬೈ: ಮಹಾನಗರದ  20 ಅಂತಸ್ತಿನ ವಸತಿ ಕಟ್ಟಡದಲ್ಲಿ ಶನಿವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡು ಕನಿಷ್ಠ  ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು NDTV ವರದಿ ಮಾಡಿದೆ.

ಮುಂಬೈನ ತಾರ್ ದೇವ್ ಪ್ರದೇಶದ ಗೋವಾಲಿಯಾ ಟ್ಯಾಂಕ್‌ನಲ್ಲಿರುವ ಗಾಂಧಿ ಆಸ್ಪತ್ರೆಯ ಎದುರಿನ ಕಮಲಾ ಕಟ್ಟಡದ 18 ನೇ ಮಹಡಿಯಲ್ಲಿ ಬೆಳಿಗ್ಗೆ 7 ರ ಸುಮಾರಿಗೆ ಕಾಣಿಸಿಕೊಂಡ ಬೃಹತ್ ಬೆಂಕಿಯಲ್ಲಿ ಕನಿಷ್ಠ 15 ಜನರು ಗಾಯಗೊಂಡಿದ್ದಾರೆ.

ಆರು ವೃದ್ಧರಿಗೆ ಆಮ್ಲಜನಕದ ಬೆಂಬಲದ ಅಗತ್ಯವಿದೆ ಹಾಗೂ  ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬೆಂಕಿ ನಿಯಂತ್ರಣದಲ್ಲಿದೆ.  ಆದರೆ ಹೊಗೆ ದಟ್ಟವಾಗಿ ಹರಡಿದೆ. ಎಲ್ಲಾ ಜನರನ್ನು ರಕ್ಷಿಸಲಾಗಿದೆ ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಸುದ್ದಿ ಸಂಸ್ಥೆ ಎಎನ್‌ಐಗೆ ಹೇಳಿದರು.

ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

13 ಅಗ್ನಿಶಾಮಕ ಇಂಜಿನ್‌ಗಳು ಮತ್ತು ಏಳು ನೀರಿನ ಜೆಟ್ಟಿಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಬಿಎಂಸಿ  ಅಧಿಕಾರಿಯೊಬ್ಬರು ತಿಳಿಸಿದ್ದಾರೆ,

ಗಾಯಾಳುಗಳನ್ನು ಹತ್ತಿರದ ಭಾಟಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಂತರ ಅವರಲ್ಲಿ 12 ಜನರ ಸ್ಥಿತಿ ಸ್ಥಿರವಾಗಿರುವ ಕಾರಣ ಸಾಮಾನ್ಯ ವಾರ್ಡ್‌ಗೆ ದಾಖಲಿಸಲಾಯಿತು ಹಾಗೂ  ಮೂವರನ್ನು ಅವರ ಸ್ಥಿತಿ ಗಂಭೀರವಾದ ಕಾರಣ ಐಸಿಯುಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News