ಕೊಹ್ಲಿಗೆ ಶೋಕಾಸ್ ನೋಟಿಸ್ ಕಳುಹಿಸಲು ಬಯಸಿದ್ದೆ ಎಂಬ ವರದಿಗಳ ಕುರಿತು ಗಂಗುಲಿ ಪ್ರತಿಕ್ರಿಯಿಸಿದ್ದು ಹೀಗೆ...

Update: 2022-01-22 09:50 GMT

ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ವಿರಾಟ್ ಕೊಹ್ಲಿಗೆ ಶೋಕಾಸ್ ನೋಟಿಸ್ ಕಳುಹಿಸಲು ಸೌರವ್ ಗಂಗುಲಿ ಬಯಸಿದ್ದಾರೆ ಎಂಬ ವರದಿಗಳು ಹೊರಬಂದ  ಮರುದಿನ ಪ್ರತಿಕ್ರಿಯೆ ನೀಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಗಂಗುಲಿ ಅಂತಹ ವರದಿಗಳು "ನಿಜವಲ್ಲ" ಎಂದು ಹೇಳಿದ್ದಾರೆ.

ವರದಿಗಳ ಕುರಿತು ಪ್ರತಿಕ್ರಿಯೆಗಾಗಿ ಗಂಗುಲಿಯವರನ್ನು ANI ಸಂಪರ್ಕಿಸಿದಾಗ, ಆ ವರದಿ "ನಿಜವಲ್ಲ’’ ಎಂದರು.

 ಮಾಜಿ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ತನ್ನನ್ನು ಏಕದಿನ ಕ್ರಿಕೆಟ್  ನಾಯಕತ್ವದಿಂದ ತೆಗೆದು ಹಾಕಲು ಕಾರಣವಾದ ಘಟನೆಗಳ ಬಗ್ಗೆ ಮಾತನಾಡಿದ ನಂತರ ಗಂಗುಲಿ  ಅವರು ಕೊಹ್ಲಿಗೆ ಶೋಕಾಸ್ ನೋಟಿಸ್ ಕಳುಹಿಸಲು ಬಯಸಿದ್ದರು ಎಂದು ಗುರುವಾರ ಕೆಲವು ಮಾಧ್ಯಮ ವರದಿಗಳು ಹೇಳಿವೆ.

ಕಳೆದ ವರ್ಷ ಕೊಹ್ಲಿ ಟ್ವೆಂಟಿ-20 ನಾಯಕತ್ವದಿಂದ ಕೆಳಗಿಳಿದಿದ್ದರು ಮತ್ತು ಆಯ್ಕೆದಾರರು ಸೀಮಿತ  ಓವರ್ ಕ್ರಿಕೆಟ್ ಗೆ ಒಬ್ಬನೇ ನಾಯಕನನ್ನು ಬಯಸಿದ್ದರಿಂದ ಕೊಹ್ಲಿ ಅವರನ್ನು ಏಕದಿನ ಕ್ರಿಕೆಟ್  ನಾಯಕನ ಸ್ಥಾನದಿಂದ ತೆಗೆದುಹಾಕಿತ್ತು.

ಕೊಹ್ಲಿಯನ್ನು ಏಕದಿನ ಕ್ರಿಕೆಟ್ ನಾಯಕತ್ವದಿಂದ ತೆಗೆದುಹಾಕಿದ ಒಂದು ದಿನದ ನಂತರ ANI ಯೊಂದಿಗೆ ಮಾತನಾಡಿದ್ದ ಗಂಗುಲಿ, ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ನಾನು ವಿರಾಟ್ ಅವರೊಂದಿಗೆ ಮಾತನಾಡಿದ್ದೇನೆ. ಕೊಹ್ಲಿ ಟ್ವೆಂಟಿ-20 ನಾಯಕತ್ವವನ್ನು ಬಿಟ್ಟುಕೊಡದಂತೆ ತಾನು ವಿನಂತಿಸಿದ್ದೆ'' ಎಂದಿದ್ದರು.

ಆದಾಗ್ಯೂ, ದಕ್ಷಿಣ ಆಫ್ರಿಕಾಕ್ಕೆ ಟೀಮ್ ಇಂಡಿಯಾ ನಿರ್ಗಮಿಸುವ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ಟ್ವೆಂಟಿ-20 ಕ್ರಿಕೆಟ್ ನಾಯಕತ್ವವನ್ನು ತೊರೆಯದಂತೆ ನನಗೆ ಯಾರೂ ವಿನಂತಿಸಲಿಲ್ಲ ಎಂದು ಹೇಳಿದ್ದರು.

ಕಳೆದ ವಾರ ಕೊಹ್ಲಿ ಭಾರತದ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದರು. ಟೀಂ ಇಂಡಿಯಾದ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯುವ ವಿರಾಟ್ ಕೊಹ್ಲಿ ಅವರ ನಿರ್ಧಾರವು "ವೈಯಕ್ತಿಕ" . ಕೊಹ್ಲಿ ನಿರ್ಧಾರವನ್ನು ಮಂಡಳಿ ಗೌರವಿಸುತ್ತದೆ ಎಂದು ಬಿಸಿಸಿಐ ಅಧ್ಯಕ್ಷರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News