×
Ad

ಕೇಂದ್ರ -ರಾಜ್ಯ ಸರಕಾರವನ್ನು ಟೀಕಿಸಲು ಕಾಂಗ್ರೆಸ್‌ಗೆ ಬೇರೆ ಅಸ್ತ್ರವಿಲ್ಲ: ಸಚಿವ ಕೋಟ

Update: 2022-01-22 20:04 IST

ಮಂಗಳೂರು, ಜ.22: ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರವನ್ನು ಟೀಕೆ ಮಾಡಲು ಕಾಂಗ್ರೆಸ್‌ನವರಿಗೆ ಬೇರೆ ಅಸ್ತ್ರವಿಲ್ಲದ ಕಾರಣ ನಾರಾಯಣಗುರು ಪ್ರತಿಕೃತಿ ನಿರಾಕರಣೆಯನ್ನು ವಿವಾದ ಮಾಡುತ್ತಿದ್ದಾರೆ ಎಂದು ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ನಾರಾಯಣು ಗುರು ಸಾಮಾಜಿಕ ನ್ಯಾಯದ ಕಲ್ಪನೆ ಕೊಟ್ಟವರು. ಪ್ರಧಾನಿ ಮೋದಿ ಶಿವಗಿರಿಗೆ ತೆರಳಿ ನಾರಾಯಣಗುರು ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ನಾರಾಯಣ ಗುರು ಪ್ರತಿಕೃತಿ ನಿರಾಕಣೆ ವಿಚಾರದಲ್ಲಿ ಕೇರಳ ಸರಕಾರ ಕೇಂದ್ರ ಮತ್ತು ಪ್ರಧಾನ ಮಂತ್ರಿ ಅವರನ್ನು ದೂಷಿಸುತ್ತಿರುವುದು ಸರಿಯಲ್ಲ. ಕೇರಳದಲ್ಲಿ ಕಮ್ಯುನಿಸ್ಟ್, ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ವಿವಾದ ಮಾಡುತ್ತಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದರು.

ಸಚಿವ ಸುನೀಲ್ ಕುಮಾರ್ ಹಾಗೂ ನನ್ನ ರಾಜೀನಾಮೆಯನ್ನು ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಕೇಳಿದ್ದಾರೆ. ಆದರೆ ನಾರಾಯಣ ಗುರುಗಳು ಪ್ರತಿಷ್ಠಾಪನೆ ಮಾಡಿದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾಕ್ಕೆ ಸಿದ್ಧರಾಮಯ್ಯ ಅವರನ್ನು ಹೋಗದಂತೆ ತಡೆದವರು ಯಾರು ಎನ್ನ್ನುವುದಕ್ಕೆ ಐವನ್ ಡಿಸೋಜ ಉತ್ತರಿಸಬೇಕು ಎಂದು ಸಚಿವ ಕೋಟ ಸವಾಲೆಸೆದರು.

ಶೀಘ್ರ ಜನಾರ್ದನ ಪೂಜಾರಿ ಭೇಟಿ: ನಾರಾಯಣ ಗುರು ಹೆಸರಿನಲ್ಲಿ ಒಳ್ಳೆಯ ಕೆಲಸಕ್ಕೆ ನಮ್ಮ ಬೆಂಬಲವಿದೆ. ಆದರೆ ರಾಜಕಾರಣಕ್ಕೋಸ್ಕರ ತಪ್ಪು ಮಾಹಿತಿ ನೀಡಿದರೆ ಅದನ್ನು ಜನರು ಜಾಗೃತೆಯಿಂದ ಗಮನಿಸಬೇಕು. ಬಿಲ್ಲವ ಸಮಾಜದ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರನ್ನು ಶೀಘ್ರದಲ್ಲೇ ಭೇಟಿ ಮಾಡಿ ವಾಸ್ತವಾಂಶವನ್ನು ತಿಳಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಈ ಸಂದರ್ಭ ದೇವಸ್ಥಾನದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿ ಹಾಗೂ ಮುಡಾ ಅಧ್ಯಕ್ಷ ರವಿಶಂಕರ್ ಮೂಡುಬಿದಿರೆ, ಅಭಿವೃದ್ಧಿ ಸಮಿತಿ ಸದಸ್ಯ ರಾಧಾಕೃಷ್ಣ, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ, ಮೇಯರ್ ದಿವಾಕರ್, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಮಾಜಿ ಕಾರ್ಪೊರೇಟರ್ ಭಾಸ್ಕರ್‌ಚಂದ್ರ ಶೆಟ್ಟಿ, ಮನಪಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸಂದೀಪ್ ಗರೋಡಿ, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಪ್ರಕಾಶ್ ಗರೋಡಿ, ಬಿಜೆಪಿ ದಕ್ಷಿಣ ವಿಭಾಗ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ಬಿಜೆಪಿ ಮುಖಂಡ ಸತೀಶ್ ಕುಂಪಲ, ಕುದ್ರೋಳಿ ಗೋಕರ್ಣನಾಥ ಬ್ಯಾಂಕ್ ಅಧ್ಯಕ್ಷ ಎಂ. ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News