×
Ad

ಒರಿಸ್ಸಾ ಪೊಲೀಸರ ಅಸಹಕಾರ ಆರೋಪ; 3 ದಿನಗಳ ಬಳಿಕ ಯುವಕನ ಮೃತದೇಹ ಪಡೆದ ಕಾರ್ಕಳದ ಕುಟುಂಬ

Update: 2022-01-22 21:51 IST

ಕಾರ್ಕಳ, ಜ.22: ಒರಿಸ್ಸಾದಲ್ಲಿ ಆತ್ಮಹತ್ಯೆಗೆ ಯತ್ನಿಸಿ ಕಾರ್ಕಳದಲ್ಲಿ ಮೃತಪಟ್ಟ ಯುವಕನ ಮೃತದೇಹವನ್ನು ಅಲ್ಲಿನ ಪೊಲೀಸರ ಅಸಹಕಾರದಿಂದಾಗಿ ಮೂರು ದಿನಗಳ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಯಿತು ಎನ್ನಲಾದ ಘಟನೆ ನಡೆದಿದೆ.

ಐದು ವರ್ಷಗಳಿಂದ ಮಂಗಳೂರು ಪ್ಲಾನ್‌ಟೆಕ್ ಕಂಪನಿಯಲ್ಲಿ ಸೇಫ್ಟಿ ಸುಪರ್ ವೈಸರ್ ಆಗಿ ಆಯ್ಕೆಯಾಗಿದ್ದ ಕಾರ್ಕಳ ಬಂಗ್ಲೆಗುಡ್ಡೆಯ ಕಾರ್ತಿಕ್ (25), 2 ತಿಂಗಳಿನಿಂದ ಒರಿಸ್ಸಾದ ಪಾರಾದೀಪ್‌ನಲ್ಲಿ ಪ್ಲಾನ್ ಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಜ.13ರಂದು ಕಾರ್ತಿಕ್ ವೈಯಕ್ತಿಕ ವಿಚಾರಕ್ಕೆ ಮನನೊಂದು ತನ್ನ ರೂಮಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡಿದ್ದರು.

ಒರಿಸ್ಸಾದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಾರ್ತಿಕ್ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಸೂಚನಾ ಪತ್ರ ಕಳುಹಿಸಿದರೂ ಅಲ್ಲಿನ ಪೊಲೀಸರು ಯಾವುದೇ ಸಹಕಾರ ನೀಡಿರಲಿಲ್ಲ ಮತ್ತು ದೂರು ಕೂಡ ದಾಖಲಿಸಿಕೊಂಡಿರಲಿಲ್ಲ ಎನ್ನಲಾಗಿದ್ದು, ಖಾಸಗಿ ಆಸ್ಪತ್ರೆಯ ಹಣ ಕಟ್ಟಲು ಸಾಧ್ಯವಾಗದ ಕಾರಣ ಕಾರ್ತಿಕ್ ಸಂಬಂಧಿಕರು ಒರಿಸ್ಸಾಗೆ ತೆರಳಿ ಜ.17ರಂದು ಕಾರ್ತಿಕ್‌ರನ್ನು ಆ್ಯಂಬುಲೆನ್ಸ್ ನಲ್ಲಿ  ಉಡುಪಿಗೆ ಕರೆದುಕೊಂಡು ಬಂದರು. ಜ.19ರಂದು ಕಾರ್ಕಳ ಬಳಿ ತೀವ್ರ ಅಸ್ವಸ್ಥಗೊಂಡ ಕಾರ್ತಿಕ್ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆತಂದಾಗ ಸಂಜೆ ವೇಳೆ ಮೃತಪಟ್ಟರು.

ಘಟನೆ ಬಗ್ಗೆ ಮಾಹಿತಿ ಪಡೆದ ಕಾರ್ಕಳ ನಗರ ಪೊಲೀಸರು, ಒರಿಸ್ಸಾ ರಾಜ್ಯದ ಪಾರಾದೀಪ್ ಲಾಕ್ ಪೊಲೀಸ್ ಠಾಣೆಗೆ ಸೂಚನಾ ಪತ್ರ ಕಳುಹಿಸಿ ಮಾಹಿತಿ ನೀಡಿದರು. ಅಲ್ಲದೆ ಪ್ಲಾನ್ ಟೆಕ್ ಕಂಪನಿಯ ಮ್ಯಾನೇಜರ್ ಪಾರಾದೀಪ್ ಲಾಕ್ ಠಾಣೆಗೆ ಹೋದಾಗಲೂ ಸ್ಪಂದಿಸದೆ ಈ ಬಗ್ಗೆ ದೂರು ಸ್ವೀಕರಿಸಿರುವುದಿಲ್ಲ. ಕಾರ್ತಿಕ್ ಮೃತದೇಹವನ್ನು ಮಣಿಪಾಲ ಆಸ್ಪತ್ರೆಯ ಶವಗಾರದಲ್ಲಿ ಇರಿಸಿದ್ದು, ಒರಿಸ್ಸಾ ಪೊಲೀಸರು ಬಂದು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಬಿಟ್ಟುಕೊಡುವುದಾಗಿ ಕಾರ್ತಿಕ್ ಮನೆಯವರು ನಂಬಿದ್ದರು. ಆದರೆ ಕಾರ್ಕಳ ನಗರ ಪೊಲೀಸರು ಮಾಹಿತಿ ನೀಡಿದ ನಂತರವೂ ಅಲ್ಲಿನ ಪೊಲೀಸರು ಸ್ಪಂದಿಸಿಲ್ಲ ಎಂದು ದೂರಲಾಗಿದೆ.

ಕಾರ್ತಿಕ್ ಮೃತಪಟ್ಟು ಈಗಾಗಲೆ ಮೂರು ದಿನಗಳು ಕಳೆದಿದ್ದು ಆತನ ತಾಯಿ ಆಹಾರ ಸೇವಿಸದೆ ಅಸ್ವಸ್ಥರಾಗಿದ್ದಾರೆ ಎಂದು ಮೃತರ ಸಂಬಂಧಿ ಧರ್ಮೇಂದ್ರ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತದೇಹವನ್ನು ಜ.22ರಂದು ಕುಟುಂಬದವರಿಗೆ ಬಿಟ್ಟುಕೊಟ್ಟರೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News