ಯಕ್ಷಗಾನ ಸ್ತ್ರೀ ವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನ

Update: 2022-01-24 05:42 GMT

ಕುಂದಾಪುರ, ಜ.24: ಬಡಗುತಿಟ್ಟು ಯಕ್ಷಗಾನದ ಹಿರಿಯ ತಲೆಮಾರಿನ ಪ್ರಸಿದ್ಧ ಸಾಂಪ್ರದಾಯಿಕ ಸ್ತ್ರೀ ವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ ರವಿವಾರ ರಾತ್ರಿ ನಿಧನರಾದರು. ಅವರಿಗೆ 96 ವರ್ಷ  ಪ್ರಾಯವಾಗಿತ್ತು.

ತಮ್ಮ ಕಾಲದ ಸುಪ್ರಸಿದ್ಧ ಸ್ತ್ರೀ ವೇಷಧಾರಿಯಾಗಿ ಗುರುತಿಸಿಕೊಂಡಿದ್ದ ಗೋವಿಂದ ಶೇರಿಗಾರ್, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು  ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಬಸ್ರೂರು ‌ಸಮೀಪದ ಮಾರ್ಗೋಳಿಯಲ್ಲಿ 1926ರಲ್ಲಿ ಜನಿಸಿದ್ದ ಇವರು ಕಲಿತಿದ್ದು 4ನೇ ಕ್ಲಾಸ್. ಅನಂತರದ ಅವರ ಬದುಕೆಲ್ಲಾ ಯಕ್ಷಗಾನ ಚೌಕಿ ಮತ್ತು ರಂಗಸ್ಥಳದಲ್ಲಿ. ಅಂದಿನ ಪ್ರಸಿದ್ಧ ಯಕ್ಷಗಾನ ಮೇಳವಾದ ಮಂದಾರ್ತಿ ಮೇಳದಲ್ಲಿ ಅವರ ರಂಗಪ್ರವೇಶವಾಯಿತು. ಅದೂ ಕೋಡಂಗಿ ವೇಷದೊಂದಿಗೆ.

ಅನಂತರ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. 25 ವರ್ಷ ಮಾರಣಕಟ್ಟೆ ಮೇಳವೊಂದಲ್ಲೇ ತಿರುಗಾಟ ನಡೆಸಿದ ಶೇರಿಗಾರ್, 53 ವರ್ಷಗಳ ವೃತ್ತಿ ಬದುಕಿನಲ್ಲಿ ಮಂದಾರ್ತಿ, ಮಾರಣಕಟ್ಟೆ, ಸೌಕೂರು, ಅಮೃತೇಶ್ವರಿ, ಇಡಗುಂಜಿ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು.

ಅಂದು ಪ್ರಮುಖ ಸ್ತ್ರೀ ವೇಷಧಾರಿಯಾಗಿದ್ದ ಕೊಕ್ಕರ್ಣೆ ನರಸಿಂಹ ಕಾಮತ್‌ ರಿಂದ ಪ್ರೇರಣೆ ಪಡೆದು, ಸ್ತ್ರೀ ಪಾತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಗೋವಿಂದ ಶೇರಿಗಾರ್ ಮತ್ತೆಂದೂ ಹಿಂದಿರುಗಿ ನೋಡಿದ್ದೇ ಇಲ್ಲ.

ಪ್ರಭಾವತಿ, ಶಶಿಪ್ರಭೆ, ಮೋಹಿನಿ, ಮೀನಾಕ್ಷಿ, ಸುಭದ್ರೆ, ಚಿತ್ರಾಂಗದೆ, ತಾರಾವಳಿ, ದಮಯಂತಿ ಇವರ ಪ್ರಸಿದ್ಧ ಪಾತ್ರಗಳು. ಇವರಿಗೆ 2015ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ. 2004ರಲ್ಲಿ ಯಕ್ಷಗಾನ ಅಕಾಡಮಿ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿಗಳು ಲಭಿಸಿವೆ.

ಹಿರಿಯ ಕಲಾವಿದನ ನಿಧನಕ್ಕೆ ಯಕ್ಷಗಾನ ಕಲಾರಂಗ ಸಂತಾಪ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News