×
Ad

ದೇಶದಲ್ಲಿ ಸಾಂಸ್ಕೃತಿಕ, ಭಾಷಾ ರಾಜಕಾರಣ: ಡಾ.ಮಹಾಬಲೇಶ್ವರ ರಾವ್

Update: 2022-01-24 19:49 IST

ಉಡುಪಿ, ಜ.24: ನಮ್ಮನ್ನು ಆಳುವವರು ವೈದಿಕ ಶಾಹಿಗಳಾಗಿರುವುದರಿಂದ ಸಂಸ್ಕೃತ ಭಾಷೆಗೆ ಹೆಚ್ಚಿನ ಪ್ರಚಾರ, ಪ್ರೋತ್ಸಾಹ ನೀಡಲಾಗುತ್ತಿದೆ. ಜನಗಣತಿಯಲ್ಲಿ ದಾಖಲಾಗಿರುವಂತೆ ಇಡೀ ದೇಶದಲ್ಲಿ ಸಂಸ್ಕೃತ ಮಾತೃಭಾಷೆಯನ್ನಾಗಿಸಿದವರು ಕೇವಲ 24ಸಾವಿರ ಮಂದಿ. ಅವರಿಗಾಗಿ ದೇಶದಲ್ಲಿ 16 ಸಂಸ್ಕೃತ ವಿವಿಗಳಿವೆ. ರಾಜ್ಯ ಸರಕಾರ ಸಂಸ್ಕೃತ ವಿವಿ ಸ್ಥಾಪನೆಗೆ 359ಕೋಟಿ ರೂ. ಮಂಜೂರು ಮಾಡಿದೆ. ಕನ್ನಡ ವಿವಿಗೆ ಒಂದು ಕೋಟಿ ನೀಡಲು ಇವರಲ್ಲಿ ಹಣ ಇಲ್ಲ. ಆದುದರಿಂದ ನಮ್ಮಲ್ಲಿನ ಸಾಂಸ್ಕೃತಿಕ ಹಾಗೂ ಭಾಷಾ ರಾಜಕಾರಣವನ್ನು ಅರ್ಥೆಸಿ ಕೊಳ್ಳಬೇಕಾಗಿದೆ ಎಂದು ಶಿಕ್ಷಣ ತಜ್ಞ, ಲೇಖಕ ಡಾ.ಮಹಾಬಲೇಶ್ವರ ರಾವ್ ಹೇಳಿದ್ದಾರೆ.

ಉಡುಪಿ ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಸೋಮ ವಾರ ಆಯೋಜಿಸಲಾದ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಸಂಸತ್ ಭಾಷಣಗಳು ಭಾಗ-1 ‘ತುಳು- ಕೊಡವ ಭಾಷೆಗಳ ಅಳಿವು ಉಳಿವು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಅಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟನೆ, ಚಳವಳಿ, ಆಂದೋಲನಗಳನ್ನು ತೀವ್ರಗತಿ ನಡೆಸಿ ಸರಕಾರದ ಮೇಲೆ ಒತ್ತಡ ತರುವು ದರಿಂದ ಮಾತ್ರ ತುಳು ಮತ್ತು ಕೊಡವ ಭಾಷೆಯನ್ನು ಎಂಟನೆ ಪರಿಚ್ಛೇಧಕ್ಕೆ ಸೇರಿಸಲು ಸಾಧ್ಯವಾಗುತ್ತದೆ. ಈ ದೇಶದಲ್ಲಿ ಹಿಂದಿ, ಸಂಸ್ಕೃತ, ಇಂಗ್ಲಿಷ್ ಮಾತ್ರವೇ ಭಾಷೆ ಅಲ್ಲ ಎಂಬುದನ್ನು ತೋರಿಸಿಕೊಡಬೇಕಾಗಿದೆ ಎಂದರು.

ಈವರೆಗೆ ನಮ್ಮ ದೇಶ ಅಥವಾ ರಾಜ್ಯದಲ್ಲಿ ವೈಜ್ಞಾವಿಕವಾದ ಭಾಷಾ ನೀತಿ ಯನ್ನು ಆಳವಡಿಸಿಕೊಂಡಿಲ್ಲ. 60ರ ದಶಕದಲ್ಲಿ ಜಾರಿಗೆ ತಂದ ಅವೈಜ್ಞಾನಿಕ ಹಾಗೂ ನಿರುಪಯುಕ್ತವಾದ ತ್ರಿಭಾಷಾ ಸೂತ್ರವನ್ನೇ 2020ರ ರಾಷ್ಟ್ರೀಯ ಶಿಕ್ಷಣ ನೀತಿಯ ಡಾಕ್ಯುಮೆಂಟ್ ಸಾಕಷ್ಟು ಕೆಟ್ಟದಾಗಿದೆ. ಇದಕ್ಕಿಂತ 1986ರ ಶಿಕ್ಷಣ ನೀತಿಯ ಡಾಕ್ಯುಮೆಂಟ್ 100 ಪಟ್ಟು ಉತ್ತಮವಾಗಿದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತ ನಾಡಿ, ಇಂದು ಭಾರತದಲ್ಲಿ ಒಂದು ರಾಷ್ಟ್ರ, ಒಂದು ರೇಷನ್, ಚುನಾವಣೆ, ನಾಯಕನಂತೆ ಒಂದೇ ಭಾಷೆಯನ್ನಾಗಿಸುವ ಪ್ರಯತ್ನ ನಡೆಸುತ್ತಿದೆ. ಆದರೆ ಅದೆಲ್ಲ ಈ ದೇಶದಲ್ಲಿ ನಡೆಯುವುದಿಲ್ಲ. ತುಳು ಅಂದರೆ ಕೇವಲ ಭಾಷೆ ಮಾತ್ರ ಅಲ್ಲ ಅದು ಸಂಸ್ಕೃತಿ, ಕಲೆ, ಆಚಾರ ವಿಚಾರಗಳನ್ನು ಒಳಗೊಂಡಿದೆ. ಎಂಟನೇ ಪರಿಚ್ಛೇಧಕ್ಕೆ ತುಳುವನ್ನು ಸೇರಿಸಿದರೆ ಭಾಷೆ ಅಭಿವೃದ್ಧಿಯಾಗುವುದರ ಜೊತೆ ನಮ್ಮ ಸಂಸ್ಕೃತಿ, ಕಲೆಗಳು ಕೂಡ ಉಳಿಯುತ್ತದೆ ಎಂದರು.

ಪುಸ್ತಕವನ್ನು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಬಿಡುಗಡೆ ಗೊಳಿಸಿದರು. ಮುಖ್ಯ ಅತಿಥಿಯಾಗಿ ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿದ್ದರು. ತುಳುಕೂಟದ ಯಶೋಧಾ ಕೇಶವ ಸ್ವಾಗತಿಸಿ ದರು. ಅಮೃತ್ ಶೆಣೈ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

ಆರೆಸ್ಸೆಸ್ ಬಗ್ಗೆ ಟೀಕೆ: ಭಾಷಣಕ್ಕೆ ಅಡ್ಡಿ!

‘ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಜಾರಿಗೆ ತಂದ ಕರ್ನಾಟಕ ಸರಕಾರ ಪದವಿ ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯ ಮಾಡಿತು. ಇತ್ತ ಕಡೆ ಸಂಸ್ಕೃತ ಭಾರತಿ ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿತು. ಕೃಷಿ ಭಾರತಿ, ವಿದ್ಯಾ ಭಾರತಿ ಹೀಗೆ ಭಾರತಿ ಎಂಬ ಪದ ಬಂದರೆ ಸ್ವಲ್ಪ ಅನುಮಾನದಿಂದ ನೋಡ ಬೇಕಾಗುತ್ತದೆ. ಯಾಕೆಂದರೆ ಇದೆಲ್ಲವೂ ಆರೆಸ್ಸೆಸ್‌ನ ಶಾಖೆಗಳಾಗಿವೆ ಎಂದು ಮಹಾಬಲೇಶ್ವರ ರಾವ್ ಟೀಕಿಸಿದರು.

ಇದಕ್ಕೆ ಸಭೆಯಲ್ಲಿ ಸಭಿಕರ ಮಧ್ಯೆ ಕುಳಿತಿದ್ದ ಬಿಜೆಪಿ ನಗರಸಭೆ ಸದಸ್ಯ ವಿಜಯ ಕೊಡವೂರು ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿ ಭಾಷಣಕ್ಕೆ ಅಡ್ಡಿ ಪಡಿಸಿದರು. ಬಳಿಕ ಸಂಘಟಕರು ಮಧ್ಯಪ್ರವೇಶಿಸಿ ಮಹಾಬಲೇಶ್ವರ ರಾವ್ ಭಾಷಣ ಮುಂದುವರೆಸಲು ಅವಕಾಶ ಮಾಡಿಕೊಟ್ಟರು.

‘ತುಳು, ಕೊಡವಗೆ ರಾಜ್ಯಭಾಷೆ ಸ್ಥಾನಮಾನ ನೀಡಲಿ’

ಕರ್ನಾಟಕದಲ್ಲಿ ಕನ್ನಡ ಮಾತ್ರ ರಾಜ್ಯಭಾಷೆಯಾಗಿದೆ. ಆದರೆ ಆಂಧ್ರದಲ್ಲಿ ತೆಲುಗು ಜೊತೆ ಉರ್ದು, ಬಿಹಾರದಲ್ಲಿ ಹಿಂದಿ ಜೊತೆಗೆ ಎರಡು ಭಾಷೆಗಳು ಮತ್ತು ಪಶ್ಚಿಮ ಬಂಗಾಳದಲ್ಲಿ ಆರು ರಾಜ್ಯಭಾಷೆಗಳಿವೆ. ಬೇರೆ ಬೇರೆ ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ರಾಜ್ಯಭಾಷೆಗಳಿರುವುದರಿಂದ ಕರ್ನಾಟಕದಲ್ಲೂ ತುಳು ಮತ್ತು ಕೊಡವ ಭಾಷೆಗೆ ರಾಜ್ಯ ಭಾಷೆಯ ಸ್ಥಾನಮಾನ ನೀಡಬೇಕು ಎಂದು ಬಿ.ಕೆ.ಹರಿಪ್ರಸಾದ್ ಒತ್ತಾಯಿಸಿದ್ದಾರೆ.

ಭಾರತದಲ್ಲಿ ಈಗಾಗಲೇ 22 ಭಾಷೆಗಳನ್ನು ಎಂಟನೇ ಪರಿಚ್ಛೇಧಕ್ಕೆ ಸೇರಿಸ ಲಾಗಿದೆ. ಇದರಲ್ಲಿ 18 ಭಾಷೆಗಳು ಉತ್ತರ ಭಾರತದ್ದಾಗಿದೆ. ದಕ್ಷಿಣ ಭಾರತದ ಕೇವಲ ನಾಲ್ಕು ಭಾಷೆಗಳು ಮಾತ್ರ ಇವೆ. ಸದ್ಯ ಎಂಟನೇ ಪರಿಚ್ಛೇಧಕ್ಕೆ ಸೇರಿಸುವುದಕ್ಕಾಗಿ ತುಳು, ಕೊಡವ ಸೇರಿದಂತೆ ಒಟ್ಟು 38 ಭಾಷೆಗಳು ಸರತಿ ಯಲ್ಲಿದೆ. ದೇಶಪ್ರೇಮ ಅಂದರೆ ಕೇವಲ ಒಂದು ಧರ್ಮದ ಪ್ರೇಮ ಅಲ್ಲ. ದೇಶದ ಭಾಷೆ, ಸಂಸ್ಕೃತಿ, ಕಲೆಯನ್ನು ನೆಚ್ಚಿ ಬೆಳೆಸುವುದೇ ನಿಜವಾದ ದೇಶಪ್ರೇಮ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News