ಬುರ್ಕಿನಾ ಫಾಸೊ: ಸೈನಿಕರ ದಂಗೆಯಲ್ಲಿ ಅಧ್ಯಕ್ಷರ ಒತ್ತೆಸೆರೆ

Update: 2022-01-24 16:55 GMT
ರೋಚ್ ಮಾಕ್ ಕ್ರಿಶ್ಚಿಯನ್ ಕಬೋರೆ(photo:twitter/@rochkaborepf)

ವಗಡೂಗೊ, ಜ.24: ಬುರ್ಕಿನಾ ಫಾಸೊ ದೇಶದಲ್ಲಿ ಸೈನಿಕರು ದಂಗೆ ಎದ್ದಿದ್ದು ಅಧ್ಯಕ್ಷ ರೋಚ್ ಮಾಕ್ ಕ್ರಿಶ್ಚಿಯನ್ ಕಬೋರೆಯನ್ನು ಒತ್ತೆಸೆರೆಯಲ್ಲಿರಿಸಿಕೊಂಡಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ಸೋಮವಾರ ವರದಿ ಮಾಡಿದೆ.

ಇಬ್ಬರು ಸೈನಿಕರು ಕಚೇರಿಗೆ ಕರೆ ಮಾಡಿ ಅಧ್ಯಕ್ಷರನ್ನು ಒತ್ತೆಸೆರೆಯಲ್ಲಿರಿಸಿದ ಮಾಹಿತಿ ನೀಡಿದ್ದು ಅವರು ಎಲ್ಲಿದ್ದಾರೆ ಎಂದು ತಿಳಿಸಿಲ್ಲ. ಆದರೆ ಸುರಕ್ಷಿತರಾಗಿರುವುದಾಗಿ ತಿಳಿಸಿದ್ದಾರೆ ಎಂದು ಮಾಧ್ಯಮ ಸಂಸ್ಥೆ ಹೇಳಿದೆ. ಅಧ್ಯಕ್ಷರ ನಿವಾಸದ ಬಳಿ ರವಿವಾರ ರಾತ್ರಿ ಮತ್ತು ಸೋಮವಾರ ಬೆಳಿಗ್ಗೆ ಬಂದೂಕಿನ ಸದ್ದು ಕೇಳಿಸಿದೆ. ಬಳಿಕ ಗುಂಡಿನ ಚಕಮಕಿ ಹಾಗೂ ಹೆಲಿಕಾಪ್ಟರ್ ಹಾರಾಟದ ಸದ್ದು ಕೇಳಿಸಿದೆ. ರಸ್ತೆಯಲ್ಲಿ ಜನ ಅಥವಾ ವಾಹನ ಸಂಚಾರ ಇರಲಿಲ್ಲ, ರಸ್ತೆ ತಪಾಸಣಾ ಕೇಂದ್ರಗಳಲ್ಲಿ ದಂಗೆಕೋರ ಸೈನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ವರದಿಯಾಗಿದೆ.

ರಾಜಧಾನಿ ವಗಡೂಗು ಸಮೀಪದ ಲಮಿಝಾನ ಸಂಗೌಲೆ ಸೇನಾ ನೆಲೆಗಳನ್ನು ದಂಗೆಕೋರ ಸೈನಿಕರು ನಿಯಂತ್ರಣಕ್ಕೆ ಪಡೆಯುವುದರೊಂದಿಗೆ ಸಂಘರ್ಷ ಆರಂಭವಾಗಿತ್ತು. ಬಂಡುಗೋರ ಪಡೆಗೆ ಬೆಂಬಲ ಸೂಚಿಸುತ್ತಿದ್ದ ಪ್ರಜೆಗಳನ್ನು ಸರಕಾರಿ ಪಡೆ ಅಶ್ರುವಾಯು ಸಿಡಿಸಿ ಚದುರಿಸಿದೆ ಎಂದು ವರದಿಯಾಗಿದೆ. ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿ ಕೆಲ ದಿನಗಳ ಹಿಂದೆ ದೇಶದೆಲ್ಲೆಡೆ ವ್ಯಾಪಕ ಪ್ರತಿಭಟನೆ ನಡೆದಿತ್ತು.

ಈ ಮಧ್ಯೆ, ಅಧ್ಯಕ್ಷರನ್ನು ಬಂಡುಗೋರ ಸೈನಿಕರು ಸೆರೆಹಿಡಿದಿದ್ದಾರೆ ಎಂಬ ವರದಿಯನ್ನು ರಕ್ಷಣಾ ಸಚಿವ ಬಾರ್ಥೆಲೆಮಿ ಸಿಂಪೋರ್ ನಿರಾಕರಿಸಿದ್ದಾರೆ. ಸೈನಿಕರು ದಂಗೆ ಎದ್ದಿರುವುದು ನಿಜ. ಆದರೆ ಕೆಲವೇ ಸೇನಾ ನೆಲೆಗಳು ಅವರ ನಿಯಂತ್ರಣದಲ್ಲಿದೆ. ಅವರ ಸಂಖ್ಯೆಯೂ ಕಡಿಮೆಯಿದೆ ಎಂದು ಸರಕಾರಿ ಸ್ವಾಮ್ಯದ ಟಿವಿ ವಾಹಿನಿಯಲ್ಲಿ ಅವರು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News