ಬ್ರಿಟನ್: ಮುಸ್ಲಿಮ್ ಸಂಸದೆಯ ಆರೋಪದ ಬಗ್ಗೆ ತನಿಖೆಗೆ ಪ್ರಧಾನಿ ಆದೇಶ

Update: 2022-01-24 17:55 GMT
ನುಸ್ರತ್ ಘನಿ(photo:Instagram/@nus_ghani)

ಲಂಡನ್, ಜ.24: ತನ್ನ ಮುಸ್ಲಿಮ್ ಧರ್ಮಶ್ರದ್ಧೆಯು ಸಹೋದ್ಯೋಗಿಗಳಿಗೆ ಕಿರಿಕಿರಿ ತಂದ ಕಾರಣ ತನ್ನನ್ನು ಸಚಿವ ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂಬ ಬ್ರಿಟನ್‌ನ ಸಂಸದೆ, ಮಾಜಿ ಸಚಿವೆ ನುಸ್ರತ್ ಘನಿ ಹೇಳಿಕೆಯ ಬಗ್ಗೆ ತನಿಖೆ ನಡೆಸುವಂತೆ ಸಂಪುಟ ಸಮಿತಿಗೆ ಬ್ರಿಟನ್ ಪ್ರಧಾನಿ ಸೂಚಿಸಿರುವುದಾಗಿ ಸರಕಾರದ ವಕ್ತಾರರು ಹೇಳಿದ್ದಾರೆ.

ಮಾಜಿ ಸಹಾಯಕ ಸಾರಿಗೆ ಸಚಿವೆ ನುಸ್ರತ್ ಘನಿ ಹೇಳಿಕೆ ಬ್ರಿಟನ್ ರಾಜಕೀಯದಲ್ಲಿ ಹೊಸ ವಿವಾದವನ್ನು ಹುಟ್ಟುಹಾಕಿದೆ. ಈ ಮಧ್ಯೆ, ಕಳೆದ ಡಿಸೆಂಬರ್‌ನಲ್ಲಿ ಕೋವಿಡ್ ನಿರ್ಬಂಧವನ್ನು ಉಲ್ಲಂಘಿಸಿ ಪ್ರಧಾನಿಯ ಕಚೇರಿ ಸಿಬಂದಿಗಳು ಕಚೇರಿಯಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯ ಔತಣಕೂಟ ನಡೆಸಿದ್ದರು ಎಂಬ ಆರೋಪದ ಬಗ್ಗೆ ನಡೆಸಿರುವ ತನಿಖೆಯ ವರದಿ ಶೀಘ್ರ ಕೈಸೇರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತನ್ನ ಆರೋಪದ ಬಗ್ಗೆ ಪಕ್ಷದ ಮೂಲಕ(ಕನ್ಸರ್ವೇಟಿವ್ ಪಕ್ಷ) ಅಧಿಕೃತ ದೂರು ದಾಖಲಿಸುವಂತೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆರಂಭದಲ್ಲಿ ಆಗ್ರಹಿಸಿದ್ದರು. ಆದರೆ ಇದನ್ನು ನಿರಾಕರಿಸಿದ್ದ ನುಸ್ರತ್, ತನ್ನ ಆರೋಪ ಸರಕಾರದ ವಿರುದ್ಧ, ಪಕ್ಷದ ವಿರುದ್ಧವಲ್ಲ ಎಂದಿದ್ದರು. ಈ ಹಿನ್ನೆಲೆಯಲ್ಲಿ ಏನು ನಡೆದಿದೆ ಎಂಬುದನ್ನು ತನಿಖೆ ನಡೆಸುವಂತೆ ಪ್ರಧಾನಿ ಸೂಚಿಸಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.

ತನಿಖೆಯ ಆದೇಶವನ್ನು ಸ್ವಾಗತಿಸುವುದಾಗಿ ನುಸ್ರತ್ ಘನಿ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News