ಉಕ್ರೇನ್‌ಗೆ ಹೆಚ್ಚುವರಿ ನೌಕೆ, ಯುದ್ಧವಿಮಾನ ರವಾನೆ: ನೇಟೊ‌

Update: 2022-01-24 18:20 GMT
photo:PTI

ಬ್ರಸೆಲ್ಸ್, ಜ.24: ಉಕ್ರೇನ್‌ನ ಗಡಿಭಾಗದಲ್ಲಿ ರಶ್ಯಾದ ಸೇನಾ ಜಮಾವಣೆ ಹಿನ್ನೆಲೆಯಲ್ಲಿ ಹೆಚ್ಚುವರಿ ಸೇನೆಯನ್ನು ಸನ್ನದ್ಧಸ್ಥಿತಿಯಲ್ಲಿ ಇರಿಸಿದ್ದು ಇನ್ನಷ್ಟು ಯುದ್ಧನೌಕೆ ಹಾಗೂ ಯುದ್ಧವಿಮಾನಗಳನ್ನು ಪೂರ್ವ ಯುರೋಪ್ ಪ್ರಾಂತಕ್ಕೆ ರವಾನಿಸಲಾಗುವುದು ಎಂದು ನೇಟೋ ಸೋಮವಾರ ಹೇಳಿದೆ.

ನೇಟೋದ ಈ ನಡೆ ರಶ್ಯಾವು ಉಕ್ರೇನ್ ಮೇಲೆ ಆಕ್ರಮಣ ನಡೆಸಿದರೆ ಪಾಶ್ಚಿಮಾತ್ಯ ದೇಶಗಳು ತೀವ್ರ ರೀತಿಯಲ್ಲಿ ಪ್ರತ್ಯುತ್ತರ ನೀಡಲಿವೆ ಎಂಬ ಸೂಚನೆಯಾಗಿದೆ ಎಂದು ಮಾಧ್ಯಮಗಳು ಹೇಳಿವೆ. ನೇಟೊ ಪಡೆಗೆ ಮಿತ್ರರಾಷ್ಟ್ರಗಳು ಹೆಚ್ಚುವರಿ ಯೋಧರನ್ನು ಕಳಿಸಿರುವುದು ಸ್ವಾಗತಾರ್ಹ. ತನ್ನ ಎಲ್ಲಾ ಮಿತ್ರರ ರಕ್ಷಣೆ ಮತ್ತು ಸಮರ್ಥನೆಗೆ ನೇಟೊ ಅಗತ್ಯದ ಕ್ರಮಗಳನ್ನು ಕೈಗೊಳ್ಳುವುದನ್ನು ಮುಂದುವರಿಸಲಿದೆ ಎಂದು ಪಾಶ್ಚಿಮಾತ್ಯ ಸೇನಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟನ್‌ಬರ್ಗ್ ಹೇಳಿದ್ದಾರೆ.

ಉಕ್ರೇನ್‌ನಲ್ಲಿ ರಶ್ಯಾ ಪರ ಮುಖಂಡರನ್ನು ಪ್ರತಿಷ್ಟಾಪಿಸುವ ಪಿತೂರಿ ನಡೆಯುತ್ತಿದೆ. ಉಕ್ರೇನ್‌ನ ಮಾಜಿ ಸಂಸದ ಯೆಹ್ಯೆನ್ ಮುರಾಯೆವ್ರನ್ನು ಅಧ್ಯಕ್ಷ ಹುದ್ದೆಗೆ ನೇಮಿಸುವ ಪಿತೂರಿ ಇದಾಗಿದ್ದು ಉಕ್ರೇನ್ ಸರಕಾರವನ್ನು ಬುಡಮೇಲುಗೊಳಿಸಲು ಮುಂದಾದರೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಬ್ರಿಟನ್ ರಶ್ಯಾಕ್ಕೆ ಎಚ್ಚರಿಕೆ ನೀಡಿದೆ. ಅಲ್ಲದೆ, ಉಕ್ರೇನ್‌ನಲ್ಲಿನ ರಾಯಭಾರಿ ಕಚೇರಿಯಿಂದ ಕೆಲವು ಸಿಬಂದಿಗಳನ್ನು ವಾಪಸು ಕರೆಸಿಕೊಳ್ಳುವುದಾಗಿ ಹೇಳಿದೆ.

ಯಾವುದೇ ಕ್ಷಣದಲ್ಲಿ ರಶ್ಯಾದ ಸೈನಿಕ ಕಾರ್ಯಾಚರಣೆ ನಡೆಯಬಹುದು. ಅಂತಹ ತುರ್ತುಪರಿಸ್ಥಿತಿಯಲ್ಲಿ ಉಕ್ರೇನ್ನಲ್ಲಿರುವ ಎಲ್ಲಾ ಅಮೆರಿಕ ಪ್ರಜೆಗಳನ್ನು ತೆರವುಗೊಳಿಸಲು ಸಾಧ್ಯವಾಗದು. ಆದ್ದರಿಂದ ಉಕ್ರೇನ್‌ನಲ್ಲಿರುವ ಅಮೆರಿಕನ್ ಪ್ರಜೆಗಳು ಸ್ವಯಂ ನಿರ್ಧಾರ ಕೈಗೊಳ್ಳಬೇಕು ಎಂದು ಉಕ್ರೇನ್‌ನಲ್ಲಿನ ಅಮೆರಿಕ ರಾಯಭಾರಿ ಕಚೇರಿ ಹೇಳಿದೆ. ಅಲ್ಲದೆ ರಾಯಭಾರಿ ಕಚೇರಿಯಲ್ಲಿರುವ ರಾಜತಾಂತ್ರಿಕರು ಸ್ವಯಂ ತೆರಳಲು ಅವಕಾಶ ನೀಡಲಾಗಿದೆ.

ಉಕ್ರೇನ್ ದೇಶವನ್ನು ನೇಟೊ ಗುಂಪಿಗೆ ಸೇರಿಸಿಕೊಳ್ಳುವ ವಾಗ್ದಾನವನ್ನು ಹಿಂಪಡೆಯಬೇಕು ಮತ್ತು ಈ ಹಿಂದಿನ ಸೋವಿಯತ್ ರಶ್ಯಾ ಒಕ್ಕೂಟದ ಅಂಗವಾಗಿದ್ದ ಉಕ್ರೇನ್‌ನಿಂದ ತಮ್ಮ ಸೇನೆ ಮತ್ತು ಶಸ್ತ್ರಾಸ್ತ್ರಗಳನ್ನು ವಾಪಾಸು ಪಡೆಯಬೇಕು ಎಂಬುದು ರಶ್ಯಾದ ಆಗ್ರಹವಾಗಿದೆ. ಆದರೆ ಈ ಬೇಡಿಕೆ ಕಾರ್ಯಸಾಧ್ಯವಲ್ಲ ಎಂದು ಅಮೆರಿಕ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News