ಯುವಜನತೆಗೆ ತಲುಪಬೇಕಾದ ‘ಗಣರಾಜ್ಯ’

Update: 2022-01-25 05:16 GMT

ಭಾಗ-2

ಯುವಕರಿಗೆ ಅಧಿಕಾರವನ್ನು ವಹಿಸುವ ನಿರ್ಧಾರವನ್ನು ವಿರೋಧಿಸುವ ಕೆಲವರು ನಮ್ಮಲ್ಲಿ ಯಾವತ್ತೂ ಇರುತ್ತಾರೆ. ಅವರು ಯುವಕರನ್ನು ‘ಅನನುಭವಿಗಳು’ ಎಂಬುದಾಗಿ ಪರಿಗಣಿಸುತ್ತಾರೆ. ಆದರೆ ಇಂತಹ ಮನೋಭಾವನೆಗೆ ನಮ್ಮ ಅಹಂ ಮತ್ತು ಅಸ್ತಿತ್ವ ಬಿಕ್ಕಟ್ಟು ಕಾರಣ. ಅದರಲ್ಲಿ ಯಾವುದೇ ವಸ್ತುನಿಷ್ಠತೆ ಇಲ್ಲ. 20 ವರ್ಷದವರ ಪರವಾಗಿ ಅಥವಾ ಅವರ ಮೇಲೆ ಪರಿಣಾಮ ಬೀರುವ ನಿರ್ಧಾರಗಳನ್ನು 60 ವರ್ಷದ ವ್ಯಕ್ತಿಯೊಬ್ಬ ತೆಗೆದುಕೊಂಡಾಗ, ಆ ನಿರ್ಧಾರದ ಸಂಭಾವ್ಯ ದುಷ್ಪರಿಣಾಮಗಳನ್ನು ತಿಳಿಯಲು ಆ ವ್ಯಕ್ತಿಯು ಇನ್ನೊಂದು ಕೇವಲ 20 ವರ್ಷಗಳವರೆಗೆ ಬದುಕಿರಬಹುದು. ಆದರೆ, ಯುವಕರು ಅದಕ್ಕಿಂತ ಮೂರು ಪಟ್ಟು ಹೆಚ್ಚು ಸಮಯ ಬದುಕಿರಬೇಕಾಗುತ್ತದೆ. ಒಂದು ವೇಳೆ ತೆಗೆದುಕೊಂಡ ನಿರ್ಧಾರವು ತಪ್ಪಾಗಿದ್ದರೆ ಅದರ ದುಷ್ಪರಿಣಾಮಗಳನ್ನು ಉದ್ದಕ್ಕೂ ಅನುಭವಿಸಬೇಕಾಗುತ್ತದೆ. ಹಿರಿಯರು ಇತಿಹಾಸದ ಆಧಾರದಲ್ಲಿ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಹಾಗೂ ಯುವಕರು ಭವಿಷ್ಯಕ್ಕಾಗಿ ತಮ್ಮ ಆಯ್ಕೆಗಳನ್ನು ಮಾಡುತ್ತಾರೆ. ನಮಗೆಲ್ಲರಿಗೂ ಗೊತ್ತಿರುವಂತೆ, ಈಗ ತೆಗೆದುಕೊಳ್ಳುವ ನಿರ್ಧಾರಗಳು ಹಿಂದಿನ ಕಾಲದ ಮೇಲೆ ಪರಿಣಾಮ ಬೀರಲಾರವು ಹಾಗೂ ಅಲ್ಲಿನ ತಪ್ಪುಗಳನ್ನು ಸರಿಪಡಿಸಲಾರವು.

ಇಲ್ಲಿ ಇನ್ನೊಂದು ಮಹತ್ವದ ವಿಷಯವನ್ನು ಪ್ರಸ್ತಾಪಿಸಬೇಕಾಗುತ್ತದೆ: ವೈಫಲ್ಯ. ವೈಫಲ್ಯವನ್ನು ಸ್ವೀಕರಿಸಲು ನಾವು ಸಿದ್ಧರಿದ್ದೇವೆಯೇ? ಮಾನವ ಚಟುವಟಿಕೆಗಳಲ್ಲಿನ ವೈಫಲ್ಯವನ್ನು ಸಂಪೂರ್ಣ ಸಾಮಾನ್ಯ ಸಂಗತಿಯಾಗಿ ಸ್ವೀಕರಿಸುವ ಹಿನ್ನೆಲೆಗಳಿಂದ ನಾವು ಬಂದಿದ್ದೇವೆಯೇ? ಹೆಚ್ಚಿನ ಸಂದರ್ಭಗಳಲ್ಲಿ ಇದಕ್ಕೆ ಉತ್ತರ: ಇಲ್ಲ ಎನ್ನುವುದೇ ಆಗಿದೆ. ಇತರರ, ಅದರಲ್ಲೂ ಮುಖ್ಯವಾಗಿ ಯುವಜನರ ವೈಫಲ್ಯವನ್ನು ಸ್ವೀಕರಿಸದಿರುವ ನಮ್ಮ ಅಸಾಮರ್ಥ್ಯವು ನಮ್ಮದೇ ಯಶಸ್ಸಿನ ಭ್ರಮೆಗಳಿಂದ ಬಂದದ್ದಾಗಿದೆ. ನಾವು ಆಯ್ಕೆ ಮಾಡಿರುವ ದಾರಿಯ ಬಗ್ಗೆ ಸ್ಪಷ್ಟತೆಯಿಲ್ಲದಿರುವುದೇ ಈ ಮಾದರಿಯ ಭ್ರಮೆಗಳಿಗೆ ಕಾರಣವಾಗಿದೆ. ಹಾಗಾಗಿ, ಯುವಕರು ತಮ್ಮ ಯಾನದ ಮಧ್ಯದಲ್ಲಿರುವಾಗಲೇ ಅವರ ದಾರಿಯನ್ನು ಸರಿಪಡಿಸಲು ಯತ್ನಿಸುತ್ತೇವೆ. ಯಾಕೆಂದರೆ ಅದು ನಮ್ಮ ಹಕ್ಕು ಎಂಬುದಾಗಿ ನಾವು ಭಾವಿಸುತ್ತೇವೆ. ಆದರೆ, ನಾವೆಲ್ಲರೂ ಜೊತೆಯಾಗಿ ಕನ್ನಡಿಯನ್ನು ನೋಡಿ ‘ನಾವು ಯಶಸ್ವಿಯಾಗಿದ್ದೇವೆ’ ಎಂದು ಹೇಳುವುದಾದರೆ, ನಾವು ಹಿಂದಕ್ಕೆ ಸರಿದು ಭಾರತದ ಪರಿಪೂರ್ಣ ಕಲ್ಪನೆಯು ಒದಗಿಸಿರುವ ಪರಿಪೂರ್ಣ ಬದುಕಿನ ಫಲಗಳನ್ನು ಅನುಭವಿಸಲು ಯಾಕೆ ಬಯಸುವುದಿಲ್ಲ? ನಾವು ಅಲ್ಲಿ-ಇಲ್ಲಿ ಕೆಲವೊಂದು ದೇಣಿಗೆಗಳನ್ನು ನೀಡಿರುವೆವಾದರೂ, ಹೆಚ್ಚಿನ ವಿಷಯಗಳಲ್ಲಿ ನಾವು ವಿಫಲವಾಗಿದ್ದೇವೆ ಎನ್ನುವುದನ್ನು ಒಪ್ಪಿಕೊಳ್ಳುವುದೇ ಸೂಕ್ತ. ಹಾಗಾಗಿ, ಬೇರೆಯವರೂ, ವಿಶೇಷವಾಗಿ ಯುವಜನರು ವಿಫಲರಾಗುತ್ತಾರೆ ಎನ್ನುವುದನ್ನು ಸ್ವೀಕರಿಸುವುದು ಜಾಣತನ. ಯಾಕೆಂದರೆ, ಅವರು ನಮ್ಮ ಗ್ರಹಿಕೆಗೆ ಮೀರದ ಅಪಾಯಗಳನ್ನು ಎದುರಿಸಲು ಸಿದ್ಧರಿದ್ದಾರೆ.

ಮನೆಯಲ್ಲಿ, ಹಾಗೂ ಅದನ್ನು ವಿಸ್ತರಿಸಿ ಹೇಳುವುದಾದರೆ ದೇಶದಲ್ಲಿ ಯುವಜನತೆಯನ್ನು ನಿಜವಾಗಿಯೂ ಸಬಲೀಕರಣಗೊಳಿಸುವುದು ನಮ್ಮ ಪ್ರಮುಖ ಸವಾಲುಗಳ ಪೈಕಿ ಒಂದಾಗಿದೆ ಹಾಗೂ ಯುವಜನತೆ ಎದುರಿಸಬೇಕಾದ ದೊಡ್ಡ ಸವಾಲೊಂದಿದೆ. ಬರಿದಾದ ಸಂಪನ್ಮೂಲಗಳನ್ನು ಒಳಗೊಂಡ ಗ್ರಹವೊಂದನ್ನು ಅವರು ನಮ್ಮಿಂದ ಪಡೆದುಕೊಂಡಿದ್ದಾರೆ. ನಾವು ಉತ್ಪಾದಿಸಿದ ತ್ಯಾಜ್ಯದ ರಾಶಿಗಳ ನಡುವೆ ಯವಜನರು ಜನಿಸಿದ್ದಾರೆ. ನಾವು ಗಾಳಿ ಎಂದು ಹೇಳುವ ವಿಷವನ್ನು ಅವರು ಉಸಿರಾಡುತ್ತಿದ್ದಾರೆ. ಅವರ ಹಾದಿಯಲ್ಲಿ ನಾವೇ ನಿರ್ಮಿಸಿರುವ ಅತಿ ದೊಡ್ಡ ತಡೆಯನ್ನು ನಾವು ನಿವಾರಿಸಿದರೆ ಅವರ ಮುಂದಿನ ಹಾದಿ ಸುಗಮವಾಗುತ್ತದೆ. ಅವರ ಹಾದಿಯಲ್ಲಿರುವ ಅತಿ ದೊಡ್ಡ ತಡೆ ನಾವೇ ಆಗಿದ್ದೇವೆ.

ಹವಾಮಾನ ಮತ್ತು ಪರಿಸರ ಕ್ಷೇತ್ರವನ್ನು ತೆಗೆದುಕೊಂಡರೆ, ನಾವು ನಿರೀಕ್ಷಿಸುವ ಅತಿ ಕೆಟ್ಟ ಫಲಿತಾಂಶವು ನಿಜವಾಗಬೇಕೆಂದೇನೂ ಇಲ್ಲ ಎಂಬುದಾಗಿ ಯಾರಾದರೂ ವಾದಿಸಬಹುದು. ಆದರೆ, ಯುವಜನರಿಗಾಗಿ ಕಾಯುತ್ತಿರುವ ಬದುಕಿನ ಗುಣಮಟ್ಟದ ಬಗ್ಗೆ ಯಾವುದೇ ವಾದವನ್ನು ಮಾಡಲು ಸಾಧ್ಯವಿಲ್ಲ. ಸಂಪನ್ಮೂಲಗಳಿಗಾಗಿ ಸ್ಪರ್ಧೆ, ಕಠಿಣ ಬದುಕು, ಕಠಿಣ ಮತ್ತು ಸಹಿಸಲಸಾಧ್ಯ ಹವಾಮಾನ ಹಾಗೂ ಅನಿರೀಕ್ಷಿತ ಮತ್ತು ಪದೇ ಪದೇ ಸಂಭವಿಸುವ ಪ್ರಾಕೃತಿಕ ವಿಕೋಪಗಳು ಅವರ ಸಾಮಾನ್ಯ ಜೀವನದ ಭಾಗವಾಗಲಿದೆ. ನಮ್ಮ ಮೇಲೆ ಹೇರಲಾದ ಸಂಕಟದ ಫಲವನ್ನು ಅನುಭವಿಸಲು ಹೆಚ್ಚು ಸಮಯ ಕಾಯಬೇಕಾಗಿಲ್ಲ. ಕಳೆದ ಒಂದು ದಶಕದಲ್ಲಿ, ಅದರಲ್ಲೂ ಮುಖ್ಯವಾಗಿ ಕಳೆದ ಕೆಲವು ವರ್ಷಗಳಲ್ಲಿ ನಾವಿದೆಲ್ಲವನ್ನೂ ನೋಡಿದ್ದೇವೆ. ಯುವಜನತೆ ಇದೆಲ್ಲವನ್ನೂ ಅರ್ಥಮಾಡಿಕೊಳ್ಳುವಷ್ಟು ಪ್ರಬುದ್ಧತೆ ಹೊಂದಿದ್ದಾರೆ ಹಾಗೂ ನಮ್ಮ ನಾಯಕತ್ವದ ವೈಫಲ್ಯ ಅಥವಾ ಸೀಮಿತತೆ ಎನ್ನುವುದು ಅವರಿಗೆ ಗೊತ್ತಿದೆ. ಈಗಿನ ಸಂಕಟದಿಂದ ಹೊರಬರುವ ದಾರಿಯನ್ನು ಹುಡುಕುವುದನ್ನು ಅವರಿಗೇ ಬಿಡುವುದು ಒಳ್ಳೆಯದು. ನಮ್ಮ ಹಿಂದಿನ ಆಯ್ಕೆಗಳಿಂದ ಪ್ರೇರಿತವಾದ ಇನ್ನೊಂದು ದಾರಿಯನ್ನು ನಾವು ಅವರಿಗಾಗಿ ಸಿದ್ಧಪಡಿಸುವುದು ಬೇಡ. ಇಂದು ಭಾರತದ ಯುವಜನತೆ, ತಮ್ಮದೇ ಭವಿಷ್ಯ ಮತ್ತು ಜಗತ್ತಿನ ಭವಿಷ್ಯವು ತಮ್ಮ ಸರಿಯಾದ ಕೃತ್ಯಗಳನ್ನು ಅವಲಂಬಿಸಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

ಇಂದಿನ ಯುವಜನತೆ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟು ಸೇರುತ್ತಿದ್ದಾರೆ. ನಗರಗಳಿಗೆ ಪ್ರಯಾಣ, ಮಾಡು-ಇಲ್ಲವೇ-ಮಡಿ ಕ್ಷಣಗಳು ಮತ್ತು ನಗರಗಳಲ್ಲಿ ಬದುಕುಳಿಯಲು ಮಾಡಬೇಕಾಗುವ ತಂತ್ರಗಾರಿಕೆಗಳು ನಮ್ಮ ಯುವಕರಲ್ಲಿ ವ್ಯವಸ್ಥೆಯು ತುಂಬಿರುವ ಸ್ಪರ್ಧಾತ್ಮಕ ಮನೋಭಾವವನ್ನು ಸಂಕೇತಿಸುತ್ತದೆ. ನಗರಗಳ ಕಿಕ್ಕಿರಿದ ಸ್ಥಳಗಳಲ್ಲಿ ಜನರ ರಾಶಿ. ಇದು ನಮ್ಮ ಅದೇ ಹಿಂದಿನ ಅನ್ಯಾಯಯುತ ವ್ಯವಸ್ಥೆಯ ಬಳುವಳಿ. ಇದು ಪರಿಸರ ಮಾಲಿನ್ಯಕ್ಕೆ ಮಾತ್ರ ಕಾರಣವಾಗುವುದಲ್ಲ, ಸಾಮಾಜಿಕ ಮತ್ತು ಮಾನಸಿಕ ಸಮಸ್ಯೆಗಳಿಗೂ ಕಾರಣವಾಗುತ್ತಿದೆ.

ಅದೇ ವೇಳೆ, ಕರೆ ನೀಡಿದಾಗಲೆಲ್ಲ ನಗರಗಳು ಮತ್ತು ಅರೆ ನಗರಗಳ ಯುವಜನರು ಪ್ರತಿಭಟನೆಗಳು ಮತ್ತು ಚಳವಳಿಗಳಲ್ಲಿ ಕೊನೆಯ ಬಿಂದು ಶಕ್ತಿ ಮತ್ತು ಧೈರ್ಯ ಇರುವವರೆಗೂ ಭಾಗವಹಿಸುತ್ತಿದ್ದಾರೆ ಎನ್ನುವುದನ್ನು ಗಮನಿಸಬೇಕಾಗಿದೆ. ಈ ನಂಬಿಕಸ್ತ ಯುವ ಶಕ್ತಿ ಪಸರಿಸುವುದು ಹಾಗೂ ಇಂದಿನದಕ್ಕಿಂತಲೂ ಹೆಚ್ಚಿನ ವ್ಯಾಪ್ತಿಯ ಭಾರತವನ್ನು ಪ್ರತಿನಿಧಿಸುವುದು ಅಗತ್ಯವಾಗಿದೆ. ದಿಲ್ಲಿ, ಮುಂಬೈ ಮತ್ತು ಬೆಂಗಳೂರುಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಗಮನವನ್ನು ಹರಿಸುವ ಮೂಲಕ ನಮ್ಮ ದೇಶದ ವಿಸ್ತಾರ, ವೈವಿಧ್ಯತೆ ಮತ್ತು ಸೌಂದರ್ಯದ ನೈಜ ಸಾಮರ್ಥ್ಯವನ್ನು ಕಡೆಗಣಿಸಲಾಗಿದೆ. ಈ ವ್ಯವಸ್ಥೆಯಿಂದಲೇ ಹೊರಬರುವುದು ಇಂದಿನ ಅಗತ್ಯವಾಗಿದೆ. ಯುವಕರು ದೇಶದ ಮೂಲೆ ಮೂಲೆಗಳಲ್ಲೂ ಸಕ್ರಿಯವಾಗಿ ವ್ಯವಹರಿಸಬಹುದಾದ, ಬದುಕಬಹುದಾದ ಮತ್ತು ಗುರಿಗಳನ್ನು ಕಂಡುಕೊಳ್ಳಬಹುದಾದ ಸಾಧ್ಯತೆಗಳನ್ನು ಅರಸುವ ಮೂಲಕ ಇದನ್ನು ಸಾಧಿಸಬಹುದಾಗಿದೆ.

ಹಿರಿಯರಿರಲಿ, ಯುವಜನತೆಯಿರಲಿ, ಈ ಕತ್ತಲ ಕಣಿವೆಯಿಂದ ಹೊರಹೋಗುವ ದಾರಿಯೊಂದನ್ನು ಕಂಡುಕೊಳ್ಳದ ಹೊರತು ಬೇರೆ ಆಯ್ಕೆಯಿಲ್ಲ. ಆದರೆ ಅದನ್ನು ಸಾಧಿಸಲು ಕೆಲವು ಆಮೂಲಾಗ್ರ ಬದಲಾವಣೆಗಳು ಮತ್ತು ಜಗತ್ತನ್ನು ನೋಡುವ ಹೊಸ ದೃಷ್ಟಿಕೋನಗಳ ಅಗತ್ಯವಿದೆ.

ಇದಕ್ಕಾಗಿ ನಾವು ಸಂವಿಧಾನಕ್ಕಿಂತಲೂ ಹಳೆಯದಾದ ಪುಸ್ತಕವೊಂದನ್ನು ಅನುಸರಿಸಿ ಸಾಕಷ್ಟು ಮಟ್ಟದ ಸ್ವ-ಪರಿವರ್ತನೆಯನ್ನು ಸಾಧಿಸಬಹುದಾಗಿದೆ. ಆ ಪುಸ್ತಕವೇ ಮಹಾತ್ಮಾ ಗಾಂಧೀಜಿಯ ‘ಹಿಂದ್ ಸ್ವರಾಜ್ಯ’. ಈ ಪುಸ್ತಕವನ್ನು ಬರೆದದ್ದು ನಾವು ಮಹಾತ್ಮಾ ಗಾಂಧಿ ಎಂಬ ಹೆಸರನ್ನು ಕೇಳುವಾಗ ನಮ್ಮ ಕಲ್ಪನೆಗೆ ಬರುವ ಮುದಿ, ಹಲ್ಲಿಲ್ಲದ, ಬೋಳು ತಲೆಯ ಹಾಗೂ ಮುಗುಳು ನಗುವ ವ್ಯಕ್ತಿಯಲ್ಲ. ಅದನ್ನು ಬರೆದದ್ದು ನಡು ಪ್ರಾಯದ ಗಾಂಧಿ. ಯಾವುದೇ ಮಾನವರಂತೆ, ಯುವ ಗಾಂಧಿ ಈಗ ನಮಗೆ ಗೊತ್ತಿರುವ ಗಾಂಧೀಜಿಯಾಗಲು ಇನ್ನೂ ಕಲಿಯುತ್ತಿದ್ದರು. ಆದರೆ, ಅವರ 15 ವರ್ಷಗಳ ಯೌವನದ ಅನ್ವೇಷಣೆಯು ಹಿಂದ್ ಸ್ವರಾಜ್‌ಗೆ ಸುರಿದ ಚೇತನ, ಉತ್ಸಾಹ ಮತ್ತು ಭರವಸೆಯ ಶ್ರೇಯವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ತನ್ನ ಮೇಲೆ ಬೀರಿದ ವಿವಿಧ ಪ್ರಭಾವಗಳು ಮತ್ತು ಪ್ರೇರಣೆಗಳಿಂದ ಅವರು ಸ್ವಪರಿವರ್ತನೆಯ ಕಲ್ಪನೆಯನ್ನು ಪಡೆದರು. ನಾವು ಇಂಥದೇ ಪ್ರೇರಣೆಯನ್ನು ಪಡೆದು ನಮ್ಮ ಸ್ವಪರಿವರ್ತನೆ ಪ್ರಕ್ರಿಯೆಯನ್ನು ಆರಂಭಿಸಬಹುದೇ? ಈ ನಿಟ್ಟಿನಲ್ಲಿ, ನಮ್ಮಲ್ಲಿ ಹೆಚ್ಚಿನವರಿಗೆ ಈಗಾಗಲೇ 73 ವರ್ಷಗಳಷ್ಟು ವಿಳಂಬವಾಗಿದೆ. ಆದರೆ, ತಡವಾಗಿ ಆರಂಭಿಸಿರುವುದಕ್ಕೆ ಗೊತ್ತಿರುವ ದಂಡಗಳಿಲ್ಲ.

ಪ್ರಶ್ನಿಸುವುದು, ತರ್ಕ, ಕೌತುಕ ಮುಂತಾದ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳದಿದ್ದರೆ ಸವಾಲುಗಳನ್ನು ಎದುರಿಸುವುದು ಸಾಧ್ಯವಿಲ್ಲ. ಅವುಗಳಿಲ್ಲದೆ ನಮ್ಮ ನಾಗರಿಕತೆಯು ನಕಲಿ ಆತ್ಮಾಭಿಮಾನವಾಗಿ ಬಿಡಬಹುದು ಹಾಗೂ ಸಾಧಾರಣವೆಂಬಂತೆ ಆಗಿಬಿಡಬಹುದು.

ನಮಗೆ ವಯಸ್ಸಾದಂತೆ, ಅತ್ಯಂತ ಭೀಕರ ದುರಂತಗಳು ಸಂಭವಿಸಿದರೂ ತಕ್ಷಣ ಹಾಗೂ ಪರಿಣಾಮಕಾರಿಯಾಗಿ ಕ್ರಮಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ನಾವು ಕಳೆದುಕೊಳ್ಳುತ್ತೇವೆ. ಆದರೆ ಇದನ್ನು ಕೆಟ್ಟ ಗುಣ ಎಂಬುದಾಗಿ ಪರಿಗಣಿಸುವಂತಿಲ್ಲ. ಯಾಕೆಂದರೆ ಬದುಕುಳಿಯುವುದಕ್ಕಾಗಿನ ಹೋರಾಟವು ಒಂದು ಪ್ರಭೇದವಾಗಿ ನಮ್ಮಲ್ಲಿ ಬೆಳೆದಿರಬೇಕು. ಆದರೆ, ಯುವಕರು ನಮ್ಮ ಅತ್ಯುತ್ತಮ ಆಯ್ಕೆ ಎನ್ನುವುದಕ್ಕೆ ಇದೇ ಉದಾಹರಣೆ. ಯುವಕರು ವಯಸ್ಸಿಗೆ ಅನುಗುಣವಾಗಿ, ವಿಶೇಷವಾಗಿ ಅನ್ಯಾಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಬಾಹ್ಯ ಪ್ರಭಾವಗಳಿಂದ ಪ್ರೇರಣೆಗೊಂಡು ಕ್ಷಿಪ್ರ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು. ನಾವು ಯುವಕರಿಗೆ ವೈಯಕ್ತಿಕ ಪರಿವರ್ತನಾ ಯಾನ ಕೈಗೊಳ್ಳಲು ಅವಕಾಶವೊಂದನ್ನು ನೀಡಬೇಕಾಗಿದೆ.

 ನಾವಿಲ್ಲಿ ಇಂದು ಆಕಾಶದಲ್ಲಿನ ಕೆಲವೊಂದು ವಿಚಿತ್ರ ನಕ್ಷತ್ರಗಳನ್ನು ದಿಟ್ಟಿಸುತ್ತಾ ದಟ್ಟ ಕತ್ತಲಿನಲ್ಲಿ ನಿಂತಿದ್ದೇವೆ. ಯಾನವನ್ನು ಮತ್ತೆ ನಾಳೆ ಮುಂದುವರಿಸಲು ನಾವು ಬಯಸಿದ್ದೇವೆ. ಆದರೆ ನಮ್ಮೆದರು ಇರುವ ದಟ್ಟ ಹಾಗೂ ಮುಳ್ಳಿನ ಪೊದೆಗಳು, ಪ್ರಯಾಣವನ್ನು ನಿಲ್ಲಿಸಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಅಥವಾ ಹಿಂದಿರುಗುವಂತೆ ನಮಗೆ ಹೇಳುತ್ತಿವೆ. ಹೌದು ನಾವು ಇಂಥ ಪ್ರಲೋಭನೆಗಳನ್ನು ಎದುರಿಸಿ ಮುಂದೆ ಸಾಗಬೇಕು. ನಮ್ಮಲ್ಲಿ ಯುವಜನತೆ ಮತ್ತು ಚೈತನ್ಯವಿದೆ. ನಾವು ಸಂಪೂರ್ಣವಾಗಿ ಪ್ರಯತ್ನಗಳನ್ನು ನಿಲ್ಲಿಸುವ ಅಥವಾ ಸವಾಲುಗಳ ಭಾರದಲ್ಲಿ ಕುಸಿಯುವ ಮೊದಲು, ಕಗ್ಗತ್ತಲ ಕಣಿವೆಯಿಂದ ಹೊರಹೋಗಲು ಸಮಯಾವಕಾಶವಿದೆಯೇ? ಈ ಬಗ್ಗೆ ನಾವು ಚಿಂತಿತರಾಗಿಲ್ಲ.

ಕೃಪೆ: countercurrents.org

Writer - ರತೀಶ್ ಪಿಶರೊಡಿ

contributor

Editor - ರತೀಶ್ ಪಿಶರೊಡಿ

contributor

Similar News