ಉಳ್ಳಾಲ: ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಣೆ

Update: 2022-01-25 10:58 GMT

ಉಳ್ಳಾಲ: ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯಾಭಿವೃದ್ಧಿ  ಕಚೇರಿ, ಜಿಲ್ಲಾ ಕೌಶಲ್ಯಾ ಮಿಶನ್ ಮಂಗಳೂರು ಮತ್ತು ಸೋಮೇಶ್ವರ ಪುರಸಭೆ ಸಹಯೋಗದಲ್ಲಿ ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ (ಡೇ ನಲ್ಮ್) ಬೀದಿ ಬದಿ ವ್ಯಾಪಾರಿಗಳಿಗೆ ಬೆಂಬಲ ಉಪ ಘಟಕದಡಿ ಬೀದಿ ಬದಿ ವ್ಯಾಪಾರಿಗಳಿಗೆ ಮತ್ತು ಪಟ್ಟಣ ಮಾರಾಟ ಸಮಿತಿ ಸದಸ್ಯರಿಗೆ ಅಧಿನಿಯಮ, ನಿಯಮ ಮತ್ತು ಯೋಜನೆಗಳ ಕುರಿತು ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಗಾರ ಹಾಗೂ ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸೋಮೇಶ್ವರ ಪುರಸಭಾ ಸಭಂಗಣದಲ್ಲಿ ಮಂಗಳವಾರ ನಡೆಯಿತು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಹೇಮಚಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬೀದಿ ಬದಿಬದಿ ವ್ಯಾಪಾರ ಮಾಡುವ ಜೊತೆಗೆ ಅಲ್ಲಿ ಉಂಟಾದ  ಕಸದ ವಿಲೇವಾರಿಯಲ್ಲಿಯೂ ನಮಗೆ ಸಾಮಾಜಿಕ ಜವಾಬ್ದಾರಿ ಇದೆ, ಕಸವನ್ನು ಸಂಗ್ರಹ ಮಾಡಿ ಅದನ್ನು ಗೊಬ್ಬರವನ್ನಾಗಿ ಪರಿವರ್ತಿಸಿ, ಪರಿಸರ ಸಂರಕ್ಷಣೆಯಲ್ಲಯೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಅಭಿಯಾನದ ವ್ಯವಸ್ಥಾಪಕ ಐರಿನ್ ರೆಬೆಲ್ಲೋ ಬೀದಿ ಬದಿ ವ್ಯಾಪಾರಿಗಳಿಗೆ ಮತ್ತು ಪಟ್ಟಣ ಮಾರಾಟ ಸಮಿತಿ ಸದಸ್ಯರಿಗೆ ಅಧಿನಿಯಮ, ನಿಯಮ ಮತ್ತು ಯೋಜನೆಗಳ ಕುರಿತು ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಗಾರ ನಡೆಸಿದರು.

ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ  ವಾಣಿ.ವಿ.ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಾನೂನು ಪ್ರಾಧಿಕಾರದ ಸದಸ್ಯ ರಾಜಿ.ಸಿ. ನಾಯರ್, ಮಂಗಳೂರು ಆರ್ಥಿಕ ಸಾಕ್ಷರತಾ ಸಂಪನ್ಮೂಲ ಕೇಂದ್ರದ ಸಮಾಲೋಚಕ ಲತೇಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ  ಲಲಿತಾ,  ಉಳ್ಳಾಲ ಪೋಲೀಸ್ ಸಿಬ್ಬಂದಿ ಆನಂದ್, ಸ್ವ-ಸಹಾಯ ಗುಂಪುಗಳ ಪ್ರತಿನಿದಿ  ಶಶಿಕಲಾ  ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ವಿದ್ಯಾಧರ್ ಶೆಟ್ಟಿ, ಅಶೋಕ್ ಸೋಮೇಶ್ವರ ಮತ್ತು ನಾಟಿ ವೈದ್ಯರಾದ ಸತ್ಯನಾರಾಯಣ್ ಭಟ್ ಅವರನ್ನು ಸನ್ಮಾನಿಸಲಾಯಿತು.

ಸಮುದಾಯ ಸಂಘಟಕರಾದ ರೋಹಿನಾಥ್ ಸ್ವಾಗತಿಸಿದರು, ಸೋಮೇಶ್ವರ ಪುರಸಭಾ ಸಿಬ್ಬಂದಿ  ರೂಪಾ ಕಾರ್ಯಕ್ರಮ ನಿರೂಪಿಸಿದರು, ದ್ವಿತೀಯ ದರ್ಜೆಯ ಸಹಾಯಕ ಶ್ರೀನಾಥ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News