ಕಾರ್ಕಳದಿಂದ ಹೊರಡಲಿದೆ ಬೃಹತ್ ಸ್ವಾಭಿಮಾನ ಜಾಥಾ: ಡಿ ಆರ್ ರಾಜು

Update: 2022-01-25 12:00 GMT
ಡಿ ಆರ್ ರಾಜು

ಕಾರ್ಕಳ: ರಾಜಕೀಯದ ಹೆಸರಿನಲ್ಲಿ ಛಿದ್ರವಾಗಿದ್ದ ಬಿಲ್ಲವ ಸಮಾಜ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಒಂದಾಗಲು ಮೊದಲ ಮೆಟ್ಟಿಲು ಎಂಬಂತೆ ಕಾರ್ಕಳದಿಂದ  ಬೃಹತ್ ಸ್ವಾಭಿಮಾನ ಜಾಥಾ ಹೊರಡಲಿದೆ ಎಂದು ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘ ದ ಅಧ್ಯಕ್ಷ  ಡಿ ಆರ್ ರಾಜು ತಿಳಿಸಿದ್ದಾರೆ.

ಜ.26ರಂದು ಬೆಳಗ್ಗೆ 10-30ಕ್ಕೆ ಕಾರ್ಕಳ ಶ್ರೀ ಕೃಷ್ಣ ಕ್ಷೇತ್ರ ಆನೆಕೆರೆ ಯಿಂದ ಹೊರಟು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತದ ವರೆಗೆ ಶ್ರೀ ನಾರಾಯಣ ಗುರುಗಳ ಟ್ಯಾಬ್ಲೋ ಹಾಗೂ ವಾಹನಗಳೊಂದಿಗೆ ಸಾಗಲಿರುವ ಸ್ವಾಭಿಮಾನ ಜಾಥಾವು ಬಿಲ್ಲವ ಮುಖಂಡರಾದ  ಭಾಸ್ಕರ್ ಕೋಟ್ಯಾನ್ ಮತ್ತು ಡಿ.ಆರ್. ರಾಜುರವರ ನೇತೃತ್ವದಲ್ಲಿ, ಬಿಲ್ಲವ ಜನಪ್ರತಿನಿಧಿಗಳ, ಧಾರ್ಮಿಕ , ಶೈಕ್ಷಣಿಕ ಸಾಮಾಜಿಕ, ಗರಡಿ ಸಮಸ್ತ ಪೂಜಾರಿ, ಬಿಲ್ಲವ ಸಂಘ ಹಾಗೂ ಬಿಲ್ಲವ ಸಂಘಟನೆಗಳ ಮುಖಂಡರ ಸಹಕಾರದಲ್ಲಿ ಸ್ವಾಭಿಮಾನದ ಜಾಥಾಕ್ಕೆ ಗುರುಗಳ ಸನ್ನಿಧಿಯಲ್ಲಿ ಭಜನೆ ಮತ್ತು ವಿಶೇಷ ಪ್ರಾರ್ಥನೆಯ ಮೂಲಕ ಚಾಲನೆ ನೀಡಲಾಗುವುದು  ಎಂದರು.

ಕಾರ್ಕಳ ಕೃಷ್ಣ ಕ್ಷೇತ್ರ ಆನೆಕೆರೆಯಲ್ಲಿ ಬೆಳಗ್ಗೆ 10ಗಂಟೆಗೆ ಉಪಹಾರ ಸ್ವೀಕರಿಸಿ,  ಹೊರಟು ಅನಂತಶಯನ - ಕಾರ್ಕಳ ಪೇಟೆಯ ಮುಖ್ಯರಸ್ತೆ- ಬಂಡೀಮಠ - ಅತ್ತೂರು-ನಿಟ್ಟೆ - 11-30 ಗಂಟೆಗೆ ಬೆಳ್ಮಣ್ ಬಿಲ್ಲವ ಸಂಘಕ್ಕೆ  ಬಂದು ಅಲ್ಲಿ ಉಪಹಾರ ಸ್ವೀಕರಿಸಿ- ಬೆಳ್ಮಣ್. ಸೂಡ ಪಳ್ಳಿ -ರಂಗನಪಲ್ಕೆ -ಕಣಜಾರು - ಮದ್ಯಾಹ್ನ 1-30 ಗಂಟೆಗೆ ಬೈಲೂರು ಬಿಲ್ಲವ ಸಂಘದಲ್ಲಿ ಅನ್ನಪ್ರಸಾದ ಸ್ವೀಕರಿಸಿ- ಹಿರಿಯಡ್ಕ - 3-30ಗಂಟೆಗೆ ಬನ್ನಂಜೆ ಬಿಲ್ಲವ ಸಂಘದಲ್ಲಿ ಉಡುಪಿ ಜಿಲ್ಲೆಯ ಸ್ವಾಭಿಮಾನದ  ಜಾಥಾದಲ್ಲಿ ಭಾಗವಹಿಸಿದ ಎಲ್ಲಾ ವಾಹನಗಳು -ಸಂಜೆ  4-30 ಗಂಟೆಗೆ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಗುರುಗಳಿಗೆ  ವಿಶೇಷ ಪೂಜೆ ಸಲ್ಲಿಸಿ ನಿರ್ಗಮಿಸುವುದು. ಬಿಲ್ಲವರ ಸ್ವಾಭಿಮಾನದ ಜಾಥಾ ಆಗಿರುವುದರಿಂದ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತದ ಪ್ರತೀಕವಾಗಿ ಕೇವಲ ಹಳದಿ ಬಣ್ಣದ ಧ್ವಜಗಳನ್ನ ವಾಹನಗಳಿಗೆ ಹಾಕಿ,  ಹಳದಿ ಶಾಲುಗಳನ್ನೇ ಧರಿಸಿಕೊಂಡು ಬರಬೇಕು, ಅದನ್ನು ಬಿಟ್ಟು ಬೇರೆ ಬೇರೆ ರಾಜಕೀಯ ಪಕ್ಷಗಳ ಧ್ವಜಗಳನ್ನು, ಶಾಲುಗಳನ್ನು ಹಾಕಿ ಕೊಂಡು ಬಿಲ್ಲವರಲ್ಲಿ ಒಡಕನ್ನು ಸೃಷ್ಟಿಸುವಂಥಹ ಕೆಲಸವನ್ನು ಯಾರೂ ಮಾಡಬಾರದಾಗಿ ಎಂದ ಅವರು ಬಿಲ್ಲವರು ಯಾವುದೇ ರಾಜಕೀಯ ಪಕ್ಷಗಳಲ್ಲಿಯೇ ಇರಿ, ಯಾವುದೇ ಸಂಘ- ಸಂಸ್ಥೆ, ಸಂಘಟನೆಗಳಲ್ಲಿಯೇ ಇರಿ, ಆದರೆ ಈ ಜಾಥಾಕ್ಕೆ ಬರುವಾಗ ಸ್ವಾಭಿಮಾನಿ ಬಿಲ್ಲವರಾಗಿ ಬನ್ನಿ ಎಂದು ಅವರು ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News