ಕೋವಿಡ್ ಬಿಕ್ಕಟ್ಟು ಭಾರತೀಯರ ಮನಸ್ಸನ್ನು ಬೆಸೆದಿದೆ: ರಾಷ್ಟ್ರಪತಿ ರಾಮನಾಥ ಕೋವಿಂದ್ ಗಣರಾಜ್ಯೋತ್ಸವ ಭಾಷಣ

Update: 2022-01-25 17:44 GMT
ರಾಷ್ಟ್ರಪತಿ ರಾಮನಾಥ ಕೋವಿಂದ್(photo:PTI)

ಹೊಸದಿಲ್ಲಿ,ಜ.25: ದೇಶದಲ್ಲಿ ಕೊರೋನ ವೈರಸ್ ಸೋಂಕಿನ ಹಾವಳಿ ಇನ್ನೂ ವ್ಯಾಪಕವಾಗಿದೆ. ಆದರೂ ಈ ಸಂದಿಗ್ಧ ಸಮಯದಲ್ಲಿ ಭಾರತೀಯರ ಒಂದೇ ಕುಟುಂಬದಂತೆ ಬೆಸೆದುಕೊಂಡಿದ್ದರು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಹೇಳಿದ್ದಾರೆ. ಗಣರಾಜ್ಯೋತ್ಸವದ ಮುನ್ನಾ ದಿನವಾದ ಮಂಗಳವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು ‘‘ ಸಾಮಾಜಿಕ ಅಂತರಕಾಯ್ದುಕೊಳ್ಳುವಿಕೆಯ ಈ ಕಾಲವು ನಮ್ಮೆಲ್ಲರನ್ನೂ ಪರಸ್ಪರ ಸನಿಹಕ್ಕೆ ತಂದಿದೆ’’ಯೆಂದು ತಿಳಿಸಿದ್ದಾರೆ.

ಕೋವಿಡ್-19 ರೋಗಿಗಳ ಆರೈಕೆಗಾಗಿ ವೈದ್ಯರುಗಳು ಹಾಗೂ ಇತರ ವೈದ್ಯಕೀಯ ಕಾರ್ಯಕರ್ತರು ದೀರ್ಘ ತಾಸುಗಳ ಕಾಲ ಕೆಲಸ ಮಾಡಿದ್ದರು. ವೈದ್ಯಕೀಯ ಹಾಗೂ ಅವಶ್ಯಕ ಸೇವೆ ಮತ್ತು ವಸ್ತುಗಳ ಪೂರೈಕೆಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ದೇಶವು ಸುಗಮವಾಗಿ ಸಾಗುವಂತೆ ಮಾಡಿದರು. ಆಡಳಿತಗಾರರ ಮಧ್ಯಪ್ರವೇಶದಿಂದಾಗಿ ದೇಶದ ಆರ್ಥಿಕತೆಯು ಚಲನಶೀಲತೆಯನ್ನು ಪಡೆಯಿತು ಎಂದವರು ಶ್ಲಾಘಿಸ.

‘‘ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ದೇಶದ ಜನತೆಗೆ ಉದ್ಯೋಗವನ್ನು ಒದಗಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದವು ಹಾಗೂ ದೇಶದ ಆರ್ಥಿಕತೆಗೆ ಉತ್ತೇಜನವನ್ನು ನೀಡಿದವು. ‘‘ ನಮ್ಮ ಅನ್ವೇಷಣಾಶೀಲ ಯುವ ಉದ್ಯಮಿಗಳು ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಯಶಸ್ಸಿನ ಹೊಸ ಹೆಗ್ಗುರುತನ್ನು ಸ್ಥಾಪಿಸಿದರು’’ ಎಂದವರು ಹೇಳಿದರು.

ಕೊರೋನ ವೈರಸ್ ಸೋಂಕಿನ ವಿರುದ್ಧ ಕಟ್ಟೆಚ್ಚರ ವಹಿಸಲು ಹಾಗೂ ಎಲ್ಲಾ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆಯೂ ರಾಷ್ಟ್ರಪತಿ ದೇಶದ ಜನತೆಗೆ ಕರೆ ನೀಡಿದರು.

‘‘ಕೋವಿಡ್-19 ಸಾಂಕ್ರಾಮಿಕದ ವಿರುದ್ಧದ ಸಮರದಲ್ಲಿ ನಮ್ಮ ವಿಜ್ಞಾನಿಗಳು ಹಾಗೂ ತಜ್ಞರು ಸೂಚಿಸಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಪ್ರತಿಯೊಬ್ಬ ಪೌರನ ಪರಮಪವಿತ್ರವಾದ ರಾಷ್ಟ್ರೀಯ ಕರ್ತವ್ಯವಾಗಿದೆ. ಕೋವಿಡ್-19 ಬಿಕ್ಕಟ್ಟು ನಮ್ಮ ಹಿಂದೆ ಇರುವ ತನಕ ನಾವು ಈ ಕರ್ತವ್ಯವನ್ನು ಪಾಲಿಸಬೇಕಾಗುತ್ತದೆ’’ ಎಂದವರು ಹೇಳಿದ್ದಾರೆ.

ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ದಿಟ್ಟತನದಿಂದ ಕರ್ತವ್ಯನಿರ್ವಹಿಸುತ್ತಿರುವ ಭದ್ರತಾಪಡೆಗಳು ಹಾಗೂ ಪೊಲೀಸ್ ಸಿಬ್ಬಂದಿಯನ್ನು ರಾಷ್ಟ್ರಪತಿಯವರು ತನ್ನ ಭಾಷಣದಲ್ಲಿ ಅಭಿನಂದಿಸಿದರು.

‘‘ನಮ್ಮ ಭದ್ರತಾಪಡೆಗಳ ನಿರಂತರವಾದ ಕಾವಲಿನಿಂದಾಗಿ ನಮ್ಮ ಗಡಿಗಳು ಸುಭದ್ರವಾಗಿವೆ ಹಾಗೂ ಪೊಲೀಸರು ದೇಶದೊಳಗಿನ ಭದ್ರತೆಯನ್ನು ಕಾಪಾಡುತ್ತಿದ್ದಾರೆ. ಇದರಿಂದಾಗಿ ಜನರು ನೆಮ್ಮದಿಯ ಬದುಕನ್ನು ಸಾಗಿಸುತ್ತಿದ್ದಾರೆ’’ ಎಂದವರು ಹೇಳಿದರು.

ಕಳೆದ ವರ್ಷ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ರಕ್ಷಣಾ ಪಡೆಗಳ ವರಿಷ್ಠ ಬಿಪಿನ್‌ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಹಾಗೂ ಇತರ ಸೈನಿಕರ ದುರಂತದ ಸಾವು ಇಡೀ ದೇಶವು ಶೋಕಸಾಗರದಲ್ಲಿ ಮುಳುಗಿತೆಂದವರು ಹೇಳಿದರು.

ಸಂವಿಧಾನದ ಮಾರ್ಗದರ್ಶಿ ತತ್ವಗಳಾದ ಪ್ರಜಾತಂತ್ರ, ನ್ಯಾಯ, ಸ್ವಾತಂತ್ರ, ಸಮಾನತೆ ಹಾಗೂ ಭ್ರಾತೃತ್ವವು ತಳಹದಿಯಲ್ಲಿ ದೇಶವು ನಿಂತಿರುವುದಾಗಿ ಹೇಳಿದರು. ಕೋಟ್ಯಂತರು ಜನರು ಸ್ವಚ್ಛ ಭಾರತ  ಹಾಗೂ ಕೋವಿಡ್19 ಲಸಿಕೀಕರಣ ಅಭಿಯಾನಗಳನ್ನು ಸಾಮೂಹಿಕ ಚಳವಳಿಯನ್ನಾಗಿ ಪರಿವರ್ತಿಸಿದ್ದಾರೆಂದು ಅವರು ಹೇಳಿದರು. ದೇಶದ ಸ್ವಾತಂತ್ರಕ್ಕಾಗಿ ಹೋರಾಡಲು ಜನರನ್ನು ಪ್ರೇರೇಪಿಸಿದ ಸ್ವಾತಂತ್ರ ಹೋರಾಟಗಾರರನ್ನು ಸ್ಮರಿಸುವಂತೆಯೂ ಅವರು ಪ್ರಜೆಗಳಿಗೆ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News