ಪಾಕಿಸ್ತಾನ: ಜೀವಾವಧಿ ಶಿಕ್ಷೆಗೊಳಗಾದ ವ್ಯಕ್ತಿ ಪಿಯುಸಿ ಪರೀಕ್ಷೆಯಲ್ಲಿ ಟಾಪರ್

Update: 2022-01-25 17:57 GMT
ಸಾಂದರ್ಭಿಕ ಚಿತ್ರ

ಇಸ್ಲಮಾಬಾದ್, ಜ.25: ಕೊಲೆ ಅಪರಾಧಕ್ಕೆ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಪಾಕಿಸ್ತಾನದ 35 ವರ್ಷದ ವ್ಯಕ್ತಿ ಖಾಸಗಿ ವಿದ್ಯಾರ್ಥಿಗಳಿಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಾಧನೆ ಮಾಡಿರುವುದಾಗಿ ವರದಿಯಾಗಿದೆ.

ಸಯಿದ್ ನಸೀಮ್ ಶಾ ಎಂಬ 35 ವರ್ಷದ ವ್ಯಕ್ತಿ ಈ ಸಾಧನೆ ಮಾಡಿದ್ದು ಈತನ ವಿದ್ಯಾಭ್ಯಾಸ ಮುಂದುವರಿಸಲು ಪಾಕಿಸ್ತಾನದ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ 1 ಲಕ್ಷ ರೂ. ಸ್ಕಾಲರ್‌ಶಿಪ್ ನೀಡಿದೆ. ಇದರ ಜೊತೆಗೆ, ಕಳೆದ 5 ವರ್ಷದಿಂದ ಈತನ ಮುಖ ನೋಡಲೂ ಇಚ್ಛಿಸದ ತಾಯಿ ಮಗನೊಂದಿಗೆ ಮಾತನಾಡಲು ಸೋಮವಾರ ಜೈಲಿಗೆ ಭೇಟಿ ನೀಡಿದ್ದಾರೆ.

ಕಳೆದ ವರ್ಷ ನಡೆದ ಪಿಯುಸಿ ಪರೀಕ್ಷೆಯಲ್ಲಿ ಖಾಸಗಿ ವಿದ್ಯಾರ್ಥಿಗಳ ವಿಭಾಗದಲ್ಲಿ ಟಾಪರ್ ಆಗಿದ್ದ ಶಾ ತಾಯಿ ಮತ್ತು ಸಹೋದರಿಯನ್ನು ಭೇಟಿ ಮಾಡಬೇಕೆಂದು ವಿನಂತಿಸಿದ್ದ . ಈತನ ಶೈಕ್ಷಣಿಕ ಸಾಧನೆಯನ್ನು ಪರಿಗಣಿಸಿ ತಾಯಿಯನ್ನು ಭೇಟಿಯಾಗಲು ವಿಶೇಷ ಅನುಮತಿ ನೀಡಿದ್ದೇವೆ. ಅದೊಂದು ಅತ್ಯಂತ ಭಾವನಾತ್ಮಕ ಕ್ಷಣವಾಗಿತ್ತು ಮತ್ತು ತಾಯಿ ಮಗ ಪರಸ್ಪರ ತಬ್ಬಿಕೊಂಡು ಕಣ್ಣೀರು ಸುರಿಸಿದರು. ತಾಯಿಯ ಕಾಲಿಗೆ ಬಿದ್ದ ಶಾ, ತನ್ನನ್ನು ಕ್ಷಮಿಸುವಂತೆ ಕೋರಿಕೊಂಡ ಎಂದು ಬಂದೀಖಾನೆಯ ಡಿವೈಎಸ್ಪಿ ಸಯೀದ್ ಸೂಮ್ರೊ ಹೇಳಿದ್ದಾರೆ.

2010ರಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣದಲ್ಲಿ ಶಾಗೆ ಜೀವಾವಧಿ ಶಿಕ್ಷೆ(25 ವರ್ಷ ಜೈಲುಶಿಕ್ಷೆ)ಯನ್ನು 2018ರಲ್ಲಿ ಘೋಷಿಸಲಾಗಿದೆ. 2011ರಲ್ಲಿ ಪ್ರಕರಣದ ವಿಚಾರಣೆ ಆರಂಭವಾದಂದಿನಿಂದ ಶಾ ಜೈಲಿನಲ್ಲಿದ್ದಾನೆ. ಉತ್ತಮ ನಡತೆ, ಶೈಕ್ಷಣಿಕ ಸಾಧನೆ, ರಕ್ತದಾನ ಮಾಡಿರುವುದು ಹಾಗೂ ವಿಚಾರಣೆ ಸಂದರ್ಭ ಜೈಲಿನಲ್ಲಿ ಕಳೆದ ಅವಧಿಯನ್ನು ಪರಿಗಣಿಸಿ ಇನ್ನು 6 ವರ್ಷ ಶಿಕ್ಷೆ ಮುಗಿದ ಬಳಿಕ ಶಾನನ್ನು ಬಿಡುಗಡೆಗೊಳಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News