ಮಿಂಚಿನ ಯುದ್ಧಕ್ಕೆ ರಶ್ಯಾ ಸಿದ್ಧತೆ: ಬ್ರಿಟನ್ ಪ್ರಧಾನಿ ಜಾನ್ಸನ್

Update: 2022-01-25 18:07 GMT
ಬ್ರಿಟನ್ ಪ್ರಧಾನಿ ಜಾನ್ಸನ್ 

ಲಂಡನ್, ಜ.25: ಉಕ್ರೇನ್ ವಶಮಾಡಿಕೊಳ್ಳಲು ರಶ್ಯಾ ಮಿಂಚಿನ ಯುದ್ಧಕ್ಕೆ ಯೋಜನೆ ರೂಪಿಸುತ್ತಿದೆ. ಆದರೆ ಇದು ವಿನಾಶಕಾರಿ ಉಪಕ್ರಮವಾಗಲಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಎಚ್ಚರಿಸಿದ್ದಾರೆ.

ಉಕ್ರೇನ್‌ನಲ್ಲಿ ರಶ್ಯಾ ಪರ ಮುಖಂಡರನ್ನು ಪ್ರತಿಷ್ಟಾಪಿಸುವ ಪಿತೂರಿ ನಡೆಯುತ್ತಿದೆ ಎಂದವರು ಹೇಳಿದ್ದಾರೆ. ಈ ಮಧ್ಯೆ, ಉಕ್ರೇನ್ ವಿರುದ್ಧದ ರಶ್ಯಾದ ಉಪಕ್ರಮವನ್ನು ತಡೆಯುವ ನಿಟ್ಟಿನಲ್ಲಿ ಯುರೋಪಿಯನ್ ಮುಖಂಡರು ನಡೆಸುವ ಜಂಟಿ ಪ್ರಯತ್ನಕ್ಕೆ ತನ್ನ ಸಹಮತವಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಉಕ್ರೇನ್ ಗಡಿಭಾಗದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಚರ್ಚಿಸಲು ಯುರೋಪಿಯನ್ ಮುಖಂಡರೊಂದಿಗೆ ವೀಡಿಯೊ ಸಂವಾದ ನಡೆಸಿದ ಬೈಡನ್, ಎಲ್ಲಾ ಯುರೋಪಿಯನ್ ಮುಖಂಡರು ಕೈಗೊಳ್ಳುವ ನಿರ್ಧಾರಕ್ಕೆ ಅಮೆರಿಕದ ಬೆಂಬಲವನ್ನು ಪುನರುಚ್ಚರಿಸಿದರು. ಪೂರ್ವ ಯುರೋಪ್‌ಗೆ ಹೆಚ್ಚುವರಿ ಪಡೆ ರವಾನಿಸಲು ನೇಟೊ ನಿರ್ಧರಿಸಿದ್ದು, ಇದೀಗ ಉದ್ವಿಗ್ನತೆಯನ್ನು ತಿಳಿಗೊಳಿಸಲು ರಶ್ಯಾ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಪಾಶ್ಚಿಮಾತ್ಯ ದೇಶಗಳ ಮುಖಂಡರು ಹೇಳಿದ್ದಾರೆ.

ಉಕ್ರೇನ್ ಗಡಿಭಾಗದಲ್ಲಿ ರಶ್ಯಾ ಭಾರೀ ಪ್ರಮಾಣದಲ್ಲಿ ಸೇನೆಯನ್ನು ಜಮಾವಣೆಗೊಳಿಸಿರುವ ಹಿನ್ನೆಲೆಯಲ್ಲಿ ನೇಟೊ ಸಂಘಟನೆಯು ಯುದ್ಧನೌಕೆ ಹಾಗೂ ಯುದ್ಧವಿಮಾನಗಳನ್ನು ಪೂರ್ವ ಯುರೋಪ್‌ನತ್ತ ರವಾನಿಸಿದೆ. ಅಮೆರಿಕದ 8,500 ತುಕಡಿಯನ್ನು ಸನ್ನದ್ದಸ್ಥಿತಿಯಲ್ಲಿರಿಸಲಾಗಿದ್ದು ಅಗತ್ಯಬಿದ್ದರೆ ತಕ್ಷಣ ರವಾನಿಸಲಾಗುವುದು ಎಂದು ಪೆಂಟಗನ್ ಹೇಳಿದೆ. ಆದರೆ ರಶ್ಯಾ ತಕ್ಷಣವೇ ಯುದ್ಧ ನಡೆಸುವ ಸಾಧ್ಯತೆಯಿಲ್ಲ ಎಂದು ಗುಪ್ತಚರ ಮಾಹಿತಿಯನ್ನು ಉಲ್ಲೇಖಿಸಿ ಪೆಂಟಗನ್ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.

ಉಕ್ರೇನ್ ಗಡಿಭಾಗದಲ್ಲಿ ರಶ್ಯಾ 1 ಲಕ್ಷ ಯೋಧರನ್ನು ನಿಯೋಜಿಸಿದೆ ಎಂದು ವರದಿಯಾಗಿದೆ. ಆದರೆ ಉಕ್ರೇನ್ ಮೇಲೆ ಆಕ್ರಮಣ ನಡೆಸುವ ಉದ್ದೇಶವಿಲ್ಲ ಎಂದು ರಶ್ಯಾದ ಅಧ್ಯಕ್ಷ ಪುಟಿನ್ ಸ್ಪಷ್ಟಪಡಿಸಿದ್ದು, ರಶ್ಯಾ ಸೇನೆಗೆ ತನ್ನ ಪ್ರದೇಶದಲ್ಲಿ ಯಾವ ಸ್ಥಳಕ್ಕೂ ಸಂಚರಿಸುವ ಅಧಿಕಾರವಿದೆ ಎಂದಿದ್ದಾರೆ. ಈ ಮಧ್ಯೆ, ಉಕ್ರೇನ್ನಿಂದ ವಾಪಸು ಬರುವಂತೆ ತನ್ನ ರಾಜತಾಂತ್ರಿಕರಿಗೆ ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಸೂಚಿಸಿದೆ. ನೇಟೊ ದೇಶಗಳು ಉನ್ಮಾದ ಮನಸ್ಥಿತಿಯಲ್ಲಿವೆ ಎಂದು ರಶ್ಯಾ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News