​ಭಾರತದ ಅಧಿಕೃತ ಕೋವಿಡ್ ಪ್ರಕರಣ ಈಗ ನಾಲ್ಕು ಕೋಟಿ!

Update: 2022-01-26 01:56 GMT

ಹೊಸದಿಲ್ಲಿ: ದೇಶದ ಅಧಿಕೃತ ಕೋವಿಡ್-19 ಪ್ರಕರಣಗಳ ಸಂಖ್ಯೆ ಬುಧವಾರ ನಾಲ್ಕು ಕೋಟಿಯನ್ನು ದಾಟಿದೆ. ಒಮೈಕ್ರಾನ್ ಚಾಲಿತ ಮೂರನೇ ಅಲೆಯಲ್ಲಿ ಕಳೆದ ಮೂರು ವಾರಗಳಲ್ಲಿ 50 ಲಕ್ಷಕ್ಕೂ ಅಧಿಕ ಪ್ರಕರಣಗಳು ದೇಶದಲ್ಲಿ ಸೇರ್ಪಡೆಯಾಗಿವೆ.

ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. 7.3 ಕೋಟಿ ಪ್ರಕರಣಗಳೊಂದಿಗೆ ಅಮೆರಿಕ ಮೊದಲ ಸ್ಥಾನದಲ್ಲಿದೆ. ಎರಡನೇ ಅಲೆಯ ವೇಳೆ ಅಂದರೆ 2021ರ ಜೂನ್ 22ರಂದು ಭಾರತದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಮೂರು ಕೋಟಿ ದಾಟಿತ್ತು. ಈ ಅವಧಿಯಲ್ಲಿ ಅತ್ಯಧಿಕ ವೇಗದಲ್ಲಿ ಒಂದು ಕೋಟಿ ಪ್ರಕರಣಗಳು ದಾಖಲಾಗಿದ್ದವು. ಕೇವಲ 40 ದಿನಗಳಲ್ಲಿ ಪ್ರಕರಣಗಳ ಸಂಖ್ಯೆ 2 ಕೋಟಿಯಿಂದ 3 ಕೋಟಿಗೆ ತಲುಪಿತ್ತು.

ಏತನ್ಮಧ್ಯೆ ಮಂಗಳವಾವಾರ ದಾಖಲಾದ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಹಿಂದಿನ ದಿನಕ್ಕೆ ಹೋಲಿಸಿದರೆ ಶೇಕಡ 27ರಷ್ಟು ಏರಿಕೆಯಾಗಿದೆ. ಒಟ್ಟು 571 ಸಾವಿನ ಪ್ರಕರಣಗಳು ದಾಖಲಾಗಿವೆ. ಇದು 2021ರ ಆಗಸ್ಟ್ 25ರ ಬಳಿಕ ದಾಖಲಾದ ಗರಿಷ್ಠ ಸಂಖ್ಯೆಯಾಗಿದೆ. ಸೋಮವಾರ ದೇಶದಲ್ಲಿ 449 ಮಂದಿ ಸೋಂಕಿತರು ಜೀವ ಕಳೆದುಕೊಂಡಿದ್ದರು.

ಕೇರಳದಲ್ಲಿ ಇದುವರೆಗಿನ ಗರಿಷ್ಠ ಅಂದರೆ 55475 ಪ್ರಕರಣಗಳು ದಾಖಲಾಗಿದ್ದರೂ ದೇಶಾದ್ಯಂತ ದೈನಿಕ ಪ್ರಕರಣಗಳ ಸಂಖ್ಯೆ ಮೂರು ಲಕ್ಷದ ಒಳಗಿದೆ. ಸೋಮವಾರ ಒಟ್ಟು 2.54 ಲಕ್ಷ ಪ್ರಕರಣಗಳು ವರದಿಯಾಗಿದ್ದ ದೇಶದಲ್ಲಿ ಮಂಗಳವಾರ 2.87 ಲಕ್ಷ ಪ್ರಕರಣಗಳು ವರದಿಯಾಗಿವೆ. ಕಳೆದ ವಾರ ಮೂರನೇ ಅಲೆಯ ಗರಿಷ್ಠ ಅಂದರೆ 3.47 ಲಕ್ಷ ಪ್ರಕರಣಗಳು ಗುರುವಾರ ದಾಖಲಾಗಿದ್ದವು.

ಮಹಾರಾಷ್ಟ್ರದಲ್ಲಿ ಗರಿಷ್ಠ ಸಾವಿನ ಸಂಖ್ಯೆ ದಾಖಲಾಗಿದ್ದು, 86 ಮಂದಿ ಮೃತಪಟ್ಟಿದ್ದಾರೆ. ಇದು 110 ದಿನಗಳಲ್ಲೇ ಗರಿಷ್ಠ. ಮುಂಬೈನಲ್ಲಿ 10 ಮಂದಿ ಸೋಂಕಿತರು ಮೃತರಾಗಿದ್ದಾರೆ. ಉಳಿದಂತೆ ಕೇರಳ (70), ಕರ್ನಾಟಕ (52), ತಮಿಳುನಾಡು (48), ಗುಜರಾತ್ (28), ಛತ್ತೀಸ್‌ಗಢ (23), ಅಸ್ಸಾಂ (19), ಹರ್ಯಾಣ (18), ಜಮ್ಮು ಮತ್ತು ಕಾಶ್ಮೀರ (12) ಹಾಗೂ ಆಂಧ್ರಪ್ರದೇಶ (12) ರಾಜ್ಯಗಳಲ್ಲಿ ಹೆಚ್ಚಿನ ಸಾವು ಸಂಭವಿಸಿದೆ. ಈ 12 ರಾಜ್ಯಗಳಲ್ಲಿ ಮೂರನೇ ಅಲೆಯಲ್ಲೇ ಗರಿಷ್ಠ ಸಾವು ಮಂಗಳವಾರ ಸಂಭವಿಸಿದೆ.

ಮಂಗಳವಾರ ಕೇರಳ, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಕೇರಳದಲ್ಲಿ ಧನಾತ್ಮಕತೆ ದರ ಶೇಕಡ 49.4ರಷ್ಟಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 6570 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಸಾಂಕ್ರಾಮಿಕ ಆರಂಭವಾದ ಬಳಿಕ ಇದು ಗರಿಷ್ಠ ಸಂಖ್ಯೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News