ಊಟಕ್ಕೆ ಬರಗಾಲವಿದ್ದ ಕಾಲವದು... ಒಂದು ಹೊತ್ತಿನ ಕೂಲಿನ ಜತೆ ಹಗಲು-ರಾತ್ರಿ ಸುರಂಗ ಕೊರೆತ!

Update: 2022-01-26 07:53 GMT

ಮಂಗಳೂರು, ಜ.26: ಅಂದು ಒಂದು ಹೊತ್ತಿನ ಊಟಕ್ಕೂ ಬರಗಾಲವಿದ್ದ ಕಾಲವದು. ಒಂದೆಡೆ ಊಟಕ್ಕಾಗಿ ಪರದಾಟ, ಇನ್ನೊಂದೆಡೆ ನೀರಿಗಾಗಿ ಕಾದಾಟ. ಹಾಗಾಗಿ ಒಂದು ಹೊತ್ತು ಕೂಲಿ ಕೆಲಸ, ಮಧ್ಯಾಹ್ನದ ಬಳಿಕ ನಡು ರಾತ್ರಿವರೆಗೆ ಸುರಂಗ ಕೊರೆತ...

ಇದು ದೇಶದ ಅತ್ಯುನ್ನತ ಪ್ರಶಸ್ತಿಗೆ ಆಯ್ಕೆಯಾದ ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ನಿವಾಸಿ ಮಹಾಲಿಂಗ ನಾಯ್ಕ ಅವರ ಮನದಾಳದ ಮಾತು.

ನಗರದ ನೆಹರೂ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಲು ಆಗಮಿಸಿದ್ದ ಅವರು, ತಮ್ಮ ಹೋರಾಟದ ಯಶೋಗಾಥೆಯನ್ನು ಬಿಚ್ಚಿಟ್ಟಿದ್ದು ಹೀಗೆ.

‘‘ಸುಮಾರು 40 ವರ್ಷಗಳ ಹಿಂದಿನ ಸಂಗತಿಯದು. ಮಹಾಬಲ ಭಟ್ಟರ ಮೂಲಕ ಎರಡು ಎಕರೆ ಗುಡ್ಡವನ್ನು ದರ್ಖಾಸ್ತು ರೂಪದಲ್ಲಿ ಪಡೆದಿದ್ದೆ. ಅಲ್ಲಿ ನೀರು ಇದೆಯೋ ಎಂದು ಗೊತ್ತಿಲ್ಲ. ನೀರೇ ಇಲ್ಲದ ಹುಲ್ಲು ಬೆಳೆದ ಗುಡ್ಡ. ಕುಡಿಯಲು ನೀರಿಲ್ಲ. ಕೆಲ ವರ್ಷಗಳ ಕಾಲ ಸುಮಾರು ಒಂದೂವರೆ ಕಿ.ಮೀ. ದೂರದಿಂದ ನೀರು ಹೊತ್ತು ತರುವ ಪರಿಸ್ಥಿತಿ. ಹಾಗಾಗಿ ಗುಡ್ಡದಲ್ಲಿ ನೀರು ಸಿಗುವುದೇನೋ ಎಂದು ಸುರಂಗ ಕೊರೆಯಲು ಆರಂಭಿಸಿದೆ. ಆ ಸ್ಥಳದಲ್ಲಿ ನೀರು ಇರುವ ಬಗ್ಗೆ ಅರಿವಿಲ್ಲದೇ, ದೇವರ ಮೇಲೆ ಭಾರ ಹಾಕಿ ನಾನು ಸುರಂಗ ತೋಡಲು ಮುಂದಾಗಿದ್ದೆ. ಮಕ್ಕಳು ಸಣ್ಣ, ಶಾಲೆಗೆ ಹೋಗುತ್ತಿದ್ದರು. ಹಾಗಾಗಿ ಏಕಾಂಗಿಯಾಗಿಯೇ ನಾನು ಸುರಂಗಗಳನ್ನು ಕೊರೆದೆ. ಗುಡ್ಡ ಕಾಡು, ಸಂಜೆಯಾಗುತ್ತಲೇ ಕತ್ತಲು ಅದಕ್ಕಾಗಿ ತೆಂಗಿನ ಎಣ್ಣೆ ದೀಪ ಬಳಸಿ ರಾತ್ರಿ ಹೊತ್ತು ಸುರಂಗಗಳನ್ನು ಕೊರೆಯುತ್ತಾ ಹೋದೆ. ಒಂದರಲ್ಲಿ ನೀರು ಸಿಗದಾಗ ಮತ್ತೊಂದು. ಹೀಗೆ ಏಳು ಸುರಂಗಗಳನ್ನು ಕೊರೆದೆ. ಅದರಲ್ಲಿ ಎರಡರಲ್ಲಿ ನೀರು ಸಿಕ್ಕಿತು. ಬಳಿಕ ಕೃಷಿ ಆರಂಭಿಸಿದೆ. ಪತ್ನಿ ಬಿಡುವಿದ್ದಾಗ ಸುರಂಗ ತೋಡಿದ ಮಣ್ಣನ್ನು ತೆರವುಗೊಳಿಸಲು ಸಹಕಾರ ನೀಡುತ್ತಿದ್ದರು. ಪಂಪ್ ಬಳಸದೆಯೇ ನನಗೆ ಹೊಳೆದ ಆಲೋಚನೆಯಂತೆ ತೋಟಕ್ಕೆ ನೀರನ್ನು ಹಾಯಿಸುವ ತಂತ್ರವನ್ನು ನನ್ನದಾಗಿಸಿಕೊಂಡಿರುವೆ.

ನೀರಿನ ಮಹತ್ವ ಚೆನ್ನಾಗಿ ತಿಳಿದಿದೆ. ಹಾಗಾಗಿ ನೀರು ಪೋಲಾಗದಂತೆ ಬೆಳೆಗಳಿಗೆ ಎಷ್ಟು ಅಗತ್ಯವೋ ಅಷ್ಟೇ ನೀರನ್ನು ಹಾಯಿಸಲಾಗುತ್ತದೆ. ಮಾತ್ರವಲ್ಲದೆ, ಇಂಗು ಗುಂಡಿಗಳನ್ನೂ ನಿರ್ಮಿಸಿಕೊಂಡಿದ್ದೇನೆ. ಅಡಿಕೆ, ತೆಂಗು, ಕಾಳುಮೆಣಸು, ಕೊಕ್ಕೋ ಬೆಳೆಯ ಜತೆಗೆ ಜೇನು ಕೃಷಿಯನ್ನೂ ಮಾಡುತ್ತಿದ್ದೇನೆ.

ಪ್ರಶಸ್ತಿ ಬರುತ್ತದೆ ಎಂದು ನಾನು ಅಂದು ಸುರಂಗ ತೋಡಲಿಲ್ಲ. ಅಂದು ನನಗೆ ನೀರಿನ ಅಗತ್ಯವಿತ್ತು. ಹಾಗಾಗಿ ಸುರಂಗ ತೋಡುವುದನ್ನು ನಾನು ನನ್ನ ಶ್ರಮವಾಗಿಸಿದೆ. ಛಲ ಬಿಡದೆ ಮುಂದುವರಿಸಿದೆ. ಆ ಶ್ರಮಕ್ಕಿಂದು ದೇಶದ ಅತ್ಯುನ್ನತ ಪ್ರಶಸ್ತಿ ಸಿಗುತ್ತಿರುವುದು ಖುಷಿ ನೀಡಿದೆ.

ನನ್ನ ಈ ಶ್ರಮವನ್ನು ಗುರುತಿಸಿದ್ದು ವಾರಣಾಸಿ ಸುಬ್ರಾಯ ಭಟ್ಟರು. 2004ರಲ್ಲಿ ಅವರು ಶಾಲೆಯೊಂದರಲ್ಲಿ ಸನ್ಮಾನ ಮಾಡಿದ್ದರು. ಬಳಿಕ ಒಂದರ ಮೇಲೊಂದರಂತೆ ಪ್ರಶಸ್ತಿಗಳು ಬಂದಿವೆ. ನಿನ್ನೆ ಮಧ್ಯಾಹ್ನ 1 ಗಂಟೆಗೆ ಫೋನ್ ಕರೆ ಬಂದಿದ್ದು, ಆಂಗ್ಲ ಹಾಗೂ ಹಿಂದಿ ಭಾಷೆಯಲ್ಲಿ ಮಾತನಾಡಿದ ಒಬ್ಬರು ಪ್ರಶಸ್ತಿ ಬಗ್ಗೆ ಹೇಳಿದ್ದರು. ಆದರೆ ನನಗದು ಅರ್ಥವಾಗಿರಲಿಲ್ಲ. ಬಳಿಕ ಕೃಷಿ ಇಲಾಖೆಯ ಮೂಲ ಪ್ರಶಸ್ತಿ ಬಂದಿರುವುದು ತಿಳಿಯಿತು’’.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News