ಮಂಗಳೂರು : ಗುರಿ ತೋರಿದ ಗುರುವಿನ ಕಡೆಗೆ 'ಸ್ವಾಭಿಮಾನದ ಜಾಥಾ'; ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ನೇತೃತ್ವ

Update: 2022-01-26 16:10 GMT

ಮಂಗಳೂರು, ಜ. 26: ಗಣರಾಜ್ಯೋತ್ಸವ ಪರೇಡ್‌ಗೆ ಕೇರಳ ಸರಕಾರ ಕಳುಹಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ನಿರಾಕರಣೆಯನ್ನು ಖಂಡಿಸಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಗಣರಾಜ್ಯೋತ್ಸವದ ದಿನವಾದ ಇಂದು ನಾರಾಯಣಗುರುಗಳ ಅನುಯಾಯಿಗಳು ಸ್ವಾಭಿಮಾನವನ್ನು ಪ್ರದರ್ಶಿಸಿದರು.

ಬಿಲ್ಲವ ಸಂಘಗಳು, ಸಂಘಟನೆಗಳು ಹಾಗೂ ಬಿಲ್ಲವ ಸಮಾಜದ ನೇತೃತ್ವದಲ್ಲಿ ಪಕ್ಷಾತೀತ (ಬಿಜೆಪಿ ಹೊರತುಪಡಿಸಿ), ಧರ್ಮಾತೀತವಾಗಿ ನಡೆದ ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ಜಾಥಾ - ನಡಿಗೆ- ಮೆರವಣಿಗೆ ನಗರದ ಕುದ್ರೋಳಿ ಕ್ಷೇತ್ರದಲ್ಲಿ ಸಂಪನ್ನಗೊಂಡಿತು. ಸಾವಿರಾರು ಸಂಖ್ಯೆಯಲ್ಲಿ ನಾರಾಯಣಗುರು ಅನುಯಾಯಿಗಳನ್ನು ಒಟ್ಟು ಸೇರಿಸುವಲ್ಲಿ ಯಶಸ್ವಿಯಾಯಿತು.

ಕಂಕನಾಡಿ ಗರೋಡಿ ಕ್ಷೇತ್ರದ ಹೊರ ಆವರಣದಿಂದ ನಾರಾಯಣಗರುಗಳ ಬೃಹತ್ ಭಾವಚಿತ್ರ ಹಾಗೂ ಮೂರ್ತಿಯನ್ನು ಒಳಗೊಂಡ ಸ್ತಬ್ಧಚಿತ್ರಗಳೊಂದಿಗೆ ಹೊರಟ ಭಾರೀ ವಾಹನಗಳ ಜಾಥಾಕ್ಕೆ ಹಾಗೂ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.

ಜಾಥಾ ಆರಂಭಕ್ಕೆ ಮೊದಲು ನಾರಾಯಣ ಗುರುಗಳ ಅನುಯಾಯಿಗಳು ಗರೋಡಿ ಕ್ಷೇತ್ರದಲ್ಲಿರುವ ನಾರಾಯಣಗುರುಗಳ ಪ್ರತಿಮೆಗೆ ಪೂಜೆ ಸಲ್ಲಿಸಿ, ಬ್ರಹ್ಮ ಬೈದರ್ಕಳ ಗುಡಿಯಲ್ಲೂ ಪ್ರಾರ್ಥನೆ ನೆರವೇರಿಸಿ ಕ್ಷೇತ್ರಕ್ಕೆ ಪ್ರದಕ್ಷಿಣೆಗೈದರು.

ಗರೋಡಿ ಕ್ಷೇತ್ರದಿಂದ ನಗರದ ರಾಜಬೀದಿಯ ಮೂಲಕ ಕುದ್ರೋಳಿ ಕ್ಷೇತ್ರಕ್ಕೆ ಸಾಗಿದ ಜಾಥಾದಲ್ಲಿ ದ್ವಿಚಕ್ರ, ಚತುಷ್ಚಕ್ರ ಸೇರಿದಂತೆ ಸಾವಿರಾರು ವಾಹನಗಳಲ್ಲಿ ಹಳದಿ ಧ್ವಜಗಳೊದೊಂದಿಗೆ ವಾಹನಗಳು ಸರತಿ ಸಾಲಿನಲ್ಲಿ ಯಾವುದೇ ಘೋಷಣೆಗಳಿಲ್ಲದೆ ಸ್ವಾಭಿಮಾನ ಜಾಥಾ ನಡೆಯಿತು.

ಜಾಥಾದಲ್ಲಿ ಹಳದಿ ಶಾಲು ಹಾಗೂ ಹಳದಿ ಧ್ವಜ ಹಾಗೂ ಚೆಂಡೆವಾದನ ಕೂಡಾ ಪ್ರಮುಖ ಆಕರ್ಷಣೆಯಾಗಿದ್ದು, ಭಾಗವಹಿಸಿದ್ದ ಹೆಚ್ಚಿನವರು ಹಳದಿ ಶರ್ಟು, ಶಾಲುಗಳನ್ನು ಧರಿಸಿ ತಮ್ಮ ನಾರಾಯಣಗುರುಗಳ ಪರ ತಮ್ಮ ಸ್ವಾಭಿಮಾನವನ್ನು ಪ್ರದರ್ಶಿಸಿದರು.

ಜಾಥಾಕ್ಕೆ ಮೆರುಗು ನೀಡಿದರು. ಜಾಥಾದಲ್ಲಿ ನಾರಾಯಣ ಗುರುಗಳ ಸಂದೇಶ, ಅವರ ಕೈಕಂರ್ಯವನ್ನು ಸಾರುವ ಸ್ತಬ್ಧಚಿತ್ರಗಳು ಗಮನ ಸೆಳೆದವು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರ, ಬಿಲ್ಲವ ಸಂಘ ಮಂಗಳಾದೇವಿ, ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಬಿಲ್ಲವ ಸಂಗ ಮಂಗಳೂರು, ಪುತ್ತೂರು ಬಿಲ್ಲವ ಸಂಘ, ಬಿಲ್ಲವ ಸಂಘ ಉರ್ವಾ ಮೊದಲಾದ ಸ್ತಬ್ಧ ಚಿತ್ರಗಳು ಮೆರವಣಗೆಯಲ್ಲಿ ಭಾಗವಹಿಸಿದ್ದವು.

ಸಂಜೆ ಗರೋಡಿ ಕ್ಷೇತ್ರದಿಂದ ಹೊರಟ ಸ್ವಾಭಿಮಾನದ ಜಾಥಾ ಹಾಗೂ ಬೆಳಗ್ಗೆ ಗರೋಡಿ ಕ್ಷೇತ್ರದಿಂದ ಹೊರಟ ಸ್ತಬ್ಧಚಿತ್ರ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರದಿಂದ ಆಗಮಿಸಿದ್ದ ಸ್ತಬ್ಧಚಿತ್ರಗಳ ಮೆರವಣಿಗೆ ನಗರದ ಉರ್ವಾಸ್ಟೋರ್‌ನಿಂದ ಲೇಡಿಹಿಲ್ ವೃತ್ತದಲ್ಲಿ ವಿವಿಧ ಕಡೆಗಳಿಂದ ಆಗಮಿಸಿದ ಸ್ತಬ್ಧಚಿತ್ರಗಳ ಮೆರವಣಿಗೆ ಯೊಂದಿಗೆ ಕುದ್ರೋಳಿ ಕ್ಷೇತ್ರದಲ್ಲಿ ಸಮಾಪನಗೊಂಡಿತು.

ಪಕ್ಷೀತಾತ ಸಾಭಿಮಾನದ ನಡಿಗೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್‌ಆದ್ಮಿ, ಎಡಪಕ್ಷಗಳು ಸೇರಿದಂತೆ ಹಿಂದೂಪರ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಘೋಷಿಸಿದ್ದವು. ಆದರೆ ಗರೋಡಿ ಕ್ಷೇತ್ರದಲ್ಲಿ ಜಾಥಾ ಆರಂಭದ ಸಂದರ್ಭ ಸ್ಥಳೀಯ ಬಿಜೆಪಿ ಕಾರ್ಪೊರೇಟರ್ ಸಂದೀಪ್ ಗರೋಡಿ ಹೊರತುಪಡಿಸಿ ಬಿಜೆಪಿಯ ನಾಯಕರಾರೂ ನಡಿಗೆಯಲ್ಲಿ ಕಂಡು ಬರಲಿಲ್ಲ. ಆದರೆ ಜಾಥಾದಲ್ಲಿ ವಿಎಚ್‌ಪಿ ನಾಯಕ ಎಂ.ಬಿ. ಪುರಾಣಿಕ್, ಬಜರಂಗದಳದ ಮುಖಂಡ ಶರಣ್ ಪಂಪ್‌ವೆಲ್ ಭಾಗವಹಿಸಿದ್ದರು.

ಜನಾರ್ದನ ಪೂಜಾರಿ ಮಾರ್ಗದರ್ಶನದಲ್ಲಿ ಕುದ್ರೋಳಿ ಕ್ಷೇತ್ರದ ಪದ್ಮರಾಜ್ ಹಾಗೂ ಇತರ ಪದಾಧಿಕಾರಿಗಳು, ಬಿಲ್ಲವ ಮುಖಂಡರು ಜಾಥಾದ ನೇತೃತ್ವ ವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ವಸಂತ ಬಂಗೇರ, ಜೆ.ಆರ್.ಲೋಬೊ, ಐವನ್ ಡಿಸೋಜ, ಶಕುಂತಳಾ ಶೆಟ್ಟಿ, ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಹೆಚ್.ಎಸ್. ಸಾಯಿರಾಂ, ಟ್ರಸ್ಟಿಗಳಾದ ಶೇಖರ್ ಪೂಜಾರಿ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷೃ ದೇವೇಂದ್ರ ಪೂಜಾರಿ, ಸದಸ್ಯರಾದ ಲೀಲಾಕ್ಷ ಕರ್ಕೇರಾ, ನಾರಾಯಣಗುರು ವಿಚಾರ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಮಿಥುನ್ ರೈ, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಬಿರುವೆರ್ ಕುಡ್ಲ ಸಂಘಟನೆಯ ಲಕ್ಷ್ಮೀಶ್, ದೀಪು ಶೆಟ್ಟಿಗಾರ್, ಅಕ್ಷಿತ್ ಸುವರ್ಣ ಹಾಗೂ ಇತರರು ಭಾಗವಹಿಸಿದ್ದರು.

ಜಾಥಾದುದ್ದಕ್ಕೂ ಕಾರಿನಲ್ಲಿ ಸಾಗಿದ ಜನಾರ್ದನ ಪೂಜಾರಿ

ತಮ್ಮ ಅನಾರೋಗ್ಯದ ಹೊರತಾಗಿಯೂ ಜನಾರ್ದನ ಪೂಜಾರಿಯವರು ಕಾರಿನಲ್ಲಿ ಕುಳಿತು ಗರೋಡಿ ಕ್ಷೇತ್ರದಿಂದ ಕುದ್ರೋಳಿ ಕ್ಷೇತ್ರದವರೆಗೂ ಜಾಥಾದ ಮುಂಚೂಣಿಯಲ್ಲಿದ್ದರು. ಘೋಷಣೆ ರಹಿತ ಜಾಥಾ, ಮೆರವಣಿಗೆಗೆ ಚೆಂಡೆ ವಾದನ, ನಾಸಿಕ್ ಬಾಂಡ್‌ಗಳು ಸಾಥ್ ನೀಡಿದವು. ಸಂಜೆ ಗರೋಡಿ ಕ್ಷೇತ್ರದಿಂದ ಹೊರಟ ಸ್ತಬ್ಧ ಚಿತ್ರಗಳು ಪಂಪ್‌ವೆಲ್‌ಗೆ ಬರುತ್ತಿದ್ದಂತೆಯೇ ಎರಡು ಜೆಸಿಬಿಗಳ ಮೇಲೆ ನಾಲ್ವರು ಹತ್ತಿ ನಾರಾಯಣಗುರುಗಳ ಭಾವಚಿತ್ರಕ್ಕೆ ಹೂವಿನ ಸುರಿಮಳೆಗೈದರು. ಮತ್ತೆ ಕೆಲವರು ಮೇಲ್ಸೇತುವೆಯಿಂದ ಪುಷ್ಪವೃಷ್ಟಿ ಮಾಡಿದರು.

ಕುದ್ರೋಳಿ ಕ್ಷೇತ್ರದಲ್ಲಿ ಜಾಥಾ ಸಮಾಪನಗೊಂಡ ಬಳಿಕ ನಾರಾಯಣಗುರುಗಳಿಗೆ ಗುರುವಂದನೆ ಸಲ್ಲಿಸಿದ ಬಳಿಕ ಜಾಥಾದಲ್ಲಿ ಭಾಗವಹಿಸಿದ್ದವರಿಗೆ ಧನ್ಯವಾದ ಸಲ್ಲಿಸಿದ ಜನಾರ್ದನ ಪೂಜಾರಿ, ಹೆಚ್ಚು ಮಾತನಾಡುವ ಶಕ್ತಿ ಇಲ್ಲ ಎಂದು ಹೇಳುತ್ತಾ ಭಾವುಕರಾದರು.

ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ, ಬ್ರಹ್ಮಶ್ರೀ ನಾರಾಯಣ ಗುರು ಆಶೀರ್ವಾದ ಮಾಡಲಿ ಎಂದಷ್ಟೇ ಹೇಳಿದರು.

ಅವರ ಪರವಾಗಿ ಮಾತು ಮುಂದುವರಿಸಿದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಕೋಶಾಧಿಕಾರಿ ಪದ್ಮರಾಜ್, ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ನಾವು ಪೂಜಾರಿಯವರಲ್ಲಿ ನೋಡುತ್ತಿದ್ದೇವೆ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣಗುರುಗಳ ಸ್ತಬ್ಧಚಿತ್ರ ನಿರಾಕರಣೆ ಮಾಡಿರುವುದು ಅವರ ಅನುಯಾಯಿಗಳಾದ ನಮಗೆ ನೋವಾಗಿದೆ. ಸಂಘರ್ಷ ರಹಿತವಾಗಿ ಅವರು ಮಾಡಿದ ಕಾರ್ಯಗಳು ವಿಶ್ವಕ್ಕೆ ಮಾದರಿ. ನಾರಾಯಣಗುರುಗಳ ಬಗ್ಗೆ ವೇದಿಕೆಯಲ್ಲಿ ಮಾತನಾಡುವವರು ಅವರ ತತ್ವ ಸಿದ್ಧಾಂತಗಳನ್ನು ಎಷ್ಟು ಅಳವಡಿಸಿಕೊಂಡಿದ್ದಾರೆಂಬುದು ಹಲವಾರು ಬಾರಿ ಸಾಬೀತಾಗುತ್ತಿದೆ. ಹಿಂದುಳಿದ ವರ್ಗವನ್ನು ಯಾವ ರೀತಿಯಲ್ಲಿ ತುಳಿಯಲಾಗುತ್ತಿದೆ ಎಂಬುದಕ್ಕೆ ಇದೂ ಒಂದು ನಿದರ್ಶನವಾಗಿದ್ದು, ಅದನ್ನು ವಿರೋಧಿಸಿ ಈ ಜಾಥಾ ನಡೆಸಲಾಯಿತು. ಇದಕ್ಕೆ ಧರ್ಮ, ಪಕ್ಷ ಬೇಧವಿಲ್ಲದೆ ಎಲ್ಲರೂ ಸಹಕಾರ ನೀಡಿರುವುದು ನಾರಾಯಣ ಗುರುಗಳ ಮೇಲಿನ ಅಭಿಮಾನವನ್ನು ತೋರ್ಪಡಿಸಿದೆ ಎಂದು ಧನ್ಯವಾದ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News