ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ

Update: 2022-01-26 16:41 GMT

ಮಂಗಳೂರು : ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಇಂದು ಗಣರಾಜ್ಯೋತ್ಸವವನ್ನು ಹೊಸದಿಂಗತ ಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್ ಪ್ರಕಾಶ್ ಧ್ವಜಾರೋಹಣ ಮಾಡುವುದರ ಮೂಲಕ ನೆರವೇರಿಸಿದರು.

ನಂತರ ಮಾತನಾಡಿದ ಅವರು ಡಾ. ಬಿ.ಆರ್ ಅಂಬೇಡ್ಕರರ ಅಧ್ಯಕ್ಷತೆಯಲ್ಲಿ ನಮ್ಮ ಸಂವಿಧಾನದ ರಚನೆಯಾಯಿತು. ಇದನ್ನು ನಾವೆಲ್ಲರೂ ಪಾಲನೆ ಮಾಡುವುದರ ಮೂಲಕ ಸಂವಿಧಾನಕ್ಕೆ ಗೌರವವನ್ನು ನೀಡಬೇಕು. ನಮ್ಮ ದೇಶದ ಸ್ವಾತಂತ್ರ್ಯವನ್ನು ಪಡೆಯಲು ಅನೇಕರು ತ್ಯಾಗ ಬಲಿದಾನವನ್ನು ಮಾಡಿದ್ದಾರೆ. ಅಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ಸದಾ ಸ್ಮರಿಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು. ಇಂತಹ ಶಿಕ್ಷಣ ಸಂಸ್ಥೆಯಲ್ಲಿ ಪಡೆದ ಶಿಕ್ಷಣವನ್ನು ವ್ಯರ್ಥ ಮಾಡದೆ ನಾವು ಬದುಕುವುದನ್ನು ಕಲಿಯಬೇಕು. ನಾವು ಶಿಕ್ಷಣದ ಜೊತೆ ಸಂಸ್ಕಾರವನ್ನು ಪಡೆಯಬೇಕು. ಆಗ ನಮ್ಮ ದೇಶ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯವಿದೆ. ನಾವು ದೇಶವನ್ನು ಪ್ರೀತಿಸಬೇಕು. ನಾವು ರಾಷ್ಟ್ರದ ಪ್ರಗತಿಗೋಸ್ಕರ ಕಾರ್ಯವನ್ನು ಮಾಡಬೇಕು. ಆಗ ನಮ್ಮ ದೇಶ ಜಗತ್ತಿನ ಸರ್ವಶ್ರೇಷ್ಠ ರಾಷ್ಟ್ರ ಆಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು. ನಾವು ಸಂವಿಧಾನವನ್ನು ಓದುವುದರ ಮೂಲಕ ದೇಶದ ಕಾನೂನಿಗೆ ಗೌರವ ನೀಡಬೇಕೆಂದು ಕರೆ ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿ ಡಾ. ಕೆ.ಸಿ ನಾಯಕ್ ವಹಿಸಿ ಶುಭಾಶಯವನ್ನು ಕೋರಿದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶೈಕ್ಷಣಿಕ ಸಂಯೋಜಕರಾದ ಪೃಥ್ವಿರಾಜ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್ ಮತ್ತು ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಯೋಜಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸ್ವಾಗತವನ್ನು ಅಧ್ಯಾಪಕಿ ಭವ್ಯಶ್ರೀ ಮಾಡಿದರು. ಸಂಸ್ಥೆಯ ಅಧ್ಯಾಪಕರಾದ ಶರಣಪ್ಪ ಹಾಗೂ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News