ಬಂದೂಕು ವಿಮೆ ಕಡ್ಡಾಯ ಕಾಯ್ದೆಗೆ ಕ್ಯಾಲಿಫೋರ್ನಿಯಾದ ನಗರ ಅನುಮೋದನೆ
ವಾಷಿಂಗ್ಟನ್, ಜ.26: ಅಮೆರಿಕದಲ್ಲೇ ಪ್ರಥಮ ಬಾರಿಗೆ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ ನಗರವು ಬಂದೂಕು ವಿಮೆಯನ್ನು ಕಡ್ಡಾಯಗೊಳಿಸುವ ಕಾನೂನಿಗೆ ಅನುಮೋದನೆ ನೀಡಿದೆ. ಬಂದೂಕಿನಿಂದ ಏನಾದರೂ ನಷ್ಟ ಸಂಭವಿಸಿದರೆ ಪರಿಹಾರ ಪಾವತಿಸಲು ಬಂದೂಕು ವಿಮೆ ಪಡೆಯುವುದನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಜತೆಗೆ, ಬಂದೂಕು ಮಾಲಕರು ಪ್ರತೀ ವರ್ಷ ಶುಲ್ಕ ಪಾವತಿಸಬೇಕಿದ್ದು ಇದನ್ನು ಬಂದೂಕಿಗೆ ಸಂಬಂಧಿಸಿದ ಹಿಂಸಾಚಾರದ ಸಂತ್ರಸ್ತರಿಗೆ ನೆರವಾಗಲು ಸರಕಾರೇತರ ಸಂಘಟನೆಗಳಿಗೆ ನೀಡಲಾಗುವುದು . ಈ ನಿರ್ಣಯ ಕೈಗೊಂಡ ಅಮೆರಿಕದ ಪ್ರಥಮ ನಗರವಾಗಿ ಸ್ಯಾನ್ ಜೋಸ್ ಗುರುತಿಸಿಕೊಂಡಿದೆ ಎಂದು ನಗರದ ಮೇಯರ್ ಸ್ಯಾಮ್ ಲಿಕಾರ್ಡೋ ಟ್ವೀಟ್ ಮಾಡಿದ್ದಾರೆ.
ಫೆಬ್ರವರಿ 8ರಂದು 2ನೇ ಬಾರಿಗೆ ಈ ಆಧ್ಯಾದೇಶವನ್ನು ಮಂಡಿಸಲಾಗುತ್ತಿದ್ದು ಆಗ ಅನುಮೋದನೆ ದೊರೆತರೆ ಆಗಸ್ಟ್‌ನಲ್ಲಿ ಕಾನೂನಿನ ರೂಪ ಪಡೆಯಲಿದೆ. ಅಮೆರಿಕದಲ್ಲಿ ಲೈಸೆನ್ಸ್ ಪಡೆದ ಬಂದೂಕು ಹೊಂದಿರುವುದು ಸಾಮಾನ್ಯ ವಿಷಯವಾಗಿದ್ದು ದೇಶದ ಸುಮಾರು 40% ವಯಸ್ಕರು ಲೈಸೆನ್ಸ್ ಪಡೆದ ಬಂದೂಕು ಹೊಂದಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಆದರೆ ಬಂದೂಕಿಗೆ ವಿಮೆ ಕಡ್ಡಾಯಗೊಳಿಸಿರುವುದು ಸಂವಿಧಾನದ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಬಂದೂಕು ಹಕ್ಕುಗಳಿಗಾಗಿನ ರಾಷ್ಟ್ರೀಯ ಪ್ರತಿಷ್ಠಾನ ಟೀಕಿಸಿದೆ.