×
Ad

ಅಶಕ್ತರ ಕಾಳಜಿ ನಾಡಿಗೆ ಶ್ರೇಯಸ್ಸು: ಪೊಲೀಸ್ ಆಯುಕ್ತ ಶಶಿಕುಮಾರ್

Update: 2022-01-27 13:48 IST

ಮಂಗಳೂರು, ಜ.27: ಸಮಾಜಕ್ಕೆ ಹಿತವಾಗಿ ಕೆಲಸ ಮಾಡಿದರೆ ನಾಡು ಅಭಿವೃದ್ಧಿ ಹೊಂದುತ್ತದೆ. ಅಶಕ್ತರ ಬಗ್ಗೆ ಕಾಳಜಿ ವಹಿಸಿ ಮುನ್ನಡೆದಾಗ ನಾಡಿನ ಶ್ರೇಯಸ್ಸು ಜೊತೆಗೆ ಹೃದಯ ವೈಶಾಲ್ಯ ದರ್ಶನವಾಗುವುದು. ಈ ನಿಟ್ಟಿನಲ್ಲಿ ಎಂ.ಫ್ರೆಂಡ್ಸ್ ಕಾರ್ಯ ಶ್ಲಾಘನೀಯ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅವರು ಬುಧವಾರ ಮಂಗಳೂರಿನ ಓಶಿಯನ್ ಪರ್ಲ್ ಹೋಟೆಲ್ ನಲ್ಲಿ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ 9ನೇ ವರ್ಷದ ಹರ್ಷ 'ನವ ಚೈತನ್ಯ' ಹಾಗೂ ವೆನ್ಲಾಕ್ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಜೊತೆಗಾರರಿಗೆ ವಿತರಿಸುವ ರಾತ್ರಿಯ ಭೋಜನದ 'ಕಾರುಣ್ಯ' ಯೋಜನೆಯ 1,500ನೇ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸೌದಿ ಅರೇಬಿಯಾದ ಜುಬೈಲ್ ನ ಅಲ್ ಮುಝೈನ್ ಸಂಸ್ಥೆಯ ಸಿಇಒ ಝಕರಿಯಾ ಜೋಕಟ್ಟೆ, ಮಂಗಳೂರು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.

 ಎಂ.ಫ್ರೆಂಡ್ಸ್ ಅಧ್ಯಕ್ಷ ಮುಹಮ್ಮದ್ ಹನೀಫ್ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಅಡ್ವಕೇಟ್ ಅಬೂಬಕರ್ ನೋಟರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಂ.ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿದರು. ಸದಸ್ಯ ಬಿ.ಎ.ಮುಹಮ್ಮದಲಿ ಕಮ್ಮರಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಆರಿಫ್ ಪಡುಬಿದ್ರಿ ಪ್ರಾರಂಭದಲ್ಲಿ ಕಿರಾಅತ್ ಪಠಿಸಿದರು. ಉಪಾಧ್ಯಕ್ಷ ಸುಜಾಹ್ ಮಹಮ್ಮದ್ ವಂದಿಸಿದರು.

ಸಭಾ ಕಾರ್ಯಕ್ರಮದ ಮೊದಲು ಗಣರಾಜ್ಯೋತ್ಸವದ ಪ್ರಯುಕ್ತ ಶಕ್ತಿನಗರದ ಸಾನಿಧ್ಯ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಹಾಗೂ ತರಬೇತಿ ಸಂಸ್ಥೆಯ ಮಕ್ಕಳಿಂದ 'ಅಮರ್ ಜವಾನ್' ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಾನಿಧ್ಯ ಸಂಸ್ಥೆಗೆ ಸಹಾಯಧನ ವಿತರಿಸಲಾಯಿತು. ಸಂಸ್ಥೆ ಆಡಳಿತಾಧಿಕಾರಿ ವಸಂತ ಶೆಟ್ಟಿಯವರನ್ನು ಗೌರವಿಸಲಾಯಿತು. ಬಳಿಕ ಕಾರುಣ್ಯ 1,500ನೇ ದಿನದ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿ ಪ್ರದರ್ಶಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News