ಲೇಡಿಹಿಲ್ ವೃತ್ತಕ್ಕೆ 'ನಾರಾಯಣ ಗುರು' ನಾಮಫಲಕ ಅಳವಡಿಸಿದ ಬಜರಂಗದಳ

Update: 2022-01-27 13:25 GMT

ಮಂಗಳೂರು, ಜ.27: ಗಣರಾಜ್ಯೋತ್ಸವದ ಪರೇಡ್‌ನಲ್ಲಿ ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡದ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಬುಧವಾರ ನಗರ ಸಹಿತ ಜಿಲ್ಲಾದ್ಯಂತ ನಡೆದ ಸರಣಿ ಪ್ರತಿಭಟನೆಯ ಮಧ್ಯೆಯೇ ನಗರದ ಲೇಡಿಹಿಲ್ ವೃತ್ತಕ್ಕೆ ಬಜರಂಗದಳದ ಕಾರ್ಯಕರ್ತರು 'ಬ್ರಹ್ಮಶ್ರೀ ನಾರಾಯಣಗುರು ವೃತ್ತ' ಎಂಬ ನಾಮಫಲಕ ಅಳವಡಿಸಿದ್ದಾರೆ.

ಅನಧಿಕೃತವಾಗಿ ನಾಮಫಲಕ ಅಳವಡಿಸಿದ ಬಳಿಕ ಮಾತನಾಡಿದ ಬಜರಂಗ ದಳದ ಮುಖಂಡರು 'ನಾರಾಯಣ ಗುರುಗಳು ಮಹಾನ್ ಸಂತರು. 60ಕ್ಕೂ ಅಧಿಕ ದೇವಸ್ಥಾನಗಳನ್ನು ನಿರ್ಮಿಸಿದವರು. ಈ ವೃತ್ತಕ್ಕೆ ನಾರಾಯಣ ಗುರುಗಳ ಹೆಸರನ್ನಿಡಬೇಕು ಎಂದು ಹಿಂದೆಯೇ ಸರಕಾರವನ್ನು ಒತ್ತಾಯಿಸಿದ್ದೆವು. ಆದರೆ ಅದಕ್ಕೆ ವಿರೋಧ ವ್ಯಕ್ತವಾಗಿತ್ತು. ಈಗ ನಾವೇ ಈ ವೃತ್ತಕ್ಕೆ ನಾರಾಯಣ ಗುರು ವೃತ್ತ ಎಂಬ ನಾಮಫಲಕ ಅಳವಡಿಸುತೇವೆ' ಎಂದರು.

ಅನಧಿಕೃತವಾಗಿ ನಾಮಫಲಕ ಅಳವಡಿಸಿದ ಬಗ್ಗೆ ಮಂಗಳೂರು ನಗರ ಪಾಲಿಕೆ, ಮಂಗಳೂರು ನಗರ ಪೊಲೀಸ್ ಆಯುಕ್ತಾಲಯವು ಈವರೆಗೆ ಯಾವುದೇ ಕ್ರಮ ಕೈಗೊಳ್ಳದೆ ಮೌನ ತಾಳಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಹಲವು ವರ್ಷಗಳಿಂದ ಈ ವೃತ್ತವನ್ನು 'ಲೇಡಿಹಿಲ್ ವೃತ್ತ' ಎಂದು ಗುರುತಿಸಲಾಗುತ್ತಿದೆ. ಆದರೆ ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರು ವೃತ್ತ ಎಂದು ಮರುನಾಮಕರಣಗೊಳಿಸುವ ನಿರ್ಣಯವನ್ನು ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ಮುಖಂಡರ ವಿರೋಧದ ಮಧ್ಯೆಯೂ ಮಂಗಳೂರು ನಗರ ಪಾಲಿಕೆ ಕೈಗೊಂಡು ಅನುಮೋದನೆಗಾಗಿ ರಾಜ್ಯ ಸರಕಾರಕ್ಕೆ ಕಳುಹಿಸಿತ್ತು. ಆದರೆ, ಅಲ್ಲಿಂದ ಪ್ರತಿಕ್ರಿಯೆ ಬರುವ ಮುನ್ನವೇ ಅನಧಿಕೃತವಾಗಿ ನಾಮಫಲಕ ಅಳವಡಿಸಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಗಣರಾಜ್ಯೋತ್ಸವ ಪರೇಡಿನಲ್ಲಿನ ನಾರಾಯಣ ಗುರುಗಳ ಸ್ತಬ್ಧಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡದ ಕಾರಣ ಬಿಲ್ಲವ ಸಮುದಾಯದಿಂದ ಆಕ್ರೋಶ ವ್ಯಕ್ತವಾಗಿತ್ತು. ಬಿಜೆಪಿಗರು ಈ ಪ್ರಕರಣವನ್ನು ಬೇರೆಡೆಗೆ ಸೆಳೆಯಲು ಸಂಘಪರಿವಾರದ ಮೂಲಕ ಅನಧಿಕೃತ ನಾಮಫಲಕ ಅಳವಡಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News