ಉಡುಪಿ ಜಿಲ್ಲೆ : 948 ಮಂದಿಗೆ ಕೋವಿಡ್ ಸೋಂಕು ಪಾಸಿಟಿವ್; ಇಬ್ಬರು ಮೃತ್ಯು

Update: 2022-01-27 13:45 GMT

ಉಡುಪಿ, ಜ.27: ಗುರುವಾರ ಉಡುಪಿ ಜಿಲ್ಲೆಯಲ್ಲಿ ಕೋವಿಡ್‌ಗೆ ಇಬ್ಬರು ಪುರುಷರು ಬಲಿಯಾಗಿದ್ದಾರೆ. ದಿನದಲ್ಲಿ 948 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ದಿನದಲ್ಲಿ 901 ಮಂದಿ ಕೋವಿಡ್-19 ಸೋಂಕಿನಿಂದ ಗುಣಮುಖರಾದರೆ ಸದ್ಯ ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 6705 ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.

ಉಡುಪಿಯ 92 ವರ್ಷ ಪ್ರಾಯದ ವೃದ್ಧರು ಹಾಗೂ ಕುಂದಾಪುರದ 55 ವರ್ಷ ಪ್ರಾಯದ ಪುರುಷರು ಇಂದು ಕೋವಿಡ್‌ಗೆ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 489ಕ್ಕೇರಿದೆ. ಇಬ್ಬರಲ್ಲೂ ಕೋವಿಡ್-19ರ ಗುಣಲಕ್ಷಣದೊಂದಿಗೆ ತೀವ್ರ ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದು, ವೃದ್ಧಾಪ್ಯದ ಅನಾರೋಗ್ಯದಿಂದಲೂ ಬಳಲುತಿದ್ದರು ಎಂದು ಹೇಳಲಾಗಿದೆ.

ಇಂದು ಪಾಸಿಟಿವ್ ಬಂದ 948 ಮಂದಿಯಲ್ಲಿ 489 ಮಂದಿ ಪುರುಷರು ಹಾಗೂ 459 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 460 ಮಂದಿ ಉಡುಪಿ ತಾಲೂಕಿಗೆ ಸೇರಿದವರು. ಕುಂದಾಪುರ ತಾಲೂಕಿನ 363 ಹಾಗೂ ಕಾರ್ಕಳ ತಾಲೂಕಿನ 119 ಮಂದಿಯೊಂದಿಗೆ ಹೊರಜಿಲ್ಲೆಗಳ ಆರು ಮಂದಿ ಸಹ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ.

ಇಂದು ಪಾಸಿಟಿವ್ ಬಂದವರಲ್ಲಿ 11 ಮಂದಿಯನ್ನು ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಲಾಗಿದೆ. 16 ಮಂದಿ ಯನ್ನು ಕೋವಿಡ್ ಆಸ್ಪತ್ರೆಗೂ, 10 ಮಂದಿಯನ್ನು ಕೋವಿಡ್ ಹೆಲ್ತ್ ಆಸ್ಪತ್ರೆಗೆ ಸೇರಿಸಿದ್ದು, ಉಳಿದ 911 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಜಿಲ್ಲೆಯಲ್ಲಿ ಒಟ್ಟು 167 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದು ಇವರಲ್ಲಿ 11 ಮಂದಿ ವೆಂಟಿಲೇಟರ್, 27 ಮಂದಿ ಐಸಿಯು ಹಾಗೂ 39 ಮಂದಿ ಎಚ್‌ಡಿಯುನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಬುಧವಾರ 901 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಕೊರೋನ ದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 7114ಕ್ಕೇರಿದೆ. ನಿನ್ನೆ ಜಿಲ್ಲೆಯ ಉಡುಪಿ ತಾಲೂಕಿನಲ್ಲಿ 2399 ಮಂದಿ, ಕುಂದಾಪುರದಲ್ಲಿ 882 ಹಾಗೂ ಕಾರ್ಕಳ ತಾಲೂಕಿನ 695 ಮಂದಿ ಸೇರಿದಂತೆ ಒಟ್ಟು 3976 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 1368ಕ್ಕೇರಿದೆ.

872 ಮಂದಿಗೆ ಮುನ್ನೆಚ್ಚರಿಕೆ ಡೋಸ್: ಜಿಲ್ಲೆಯಲ್ಲಿ ಇಂದು ಒಟ್ಟು 872 ಮಂದಿಗೆ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ 60 ವರ್ಷಕ್ಕೂ ಮೇಲ್ಪಟ್ಟ 553 ಮಂದಿ ಲಸಿಕೆ ಪಡೆದರೆ, 276 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 43 ಮಂದಿ ಮುಂಚೂಣಿ ಕಾರ್ಯಕರ್ತರು ಸಹ ಸೇರಿದ್ದಾರೆ.

502 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 502 ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ 30 ಮಂದಿ 15ರಿಂದ 18 ವರ್ಷ ದೊಳಗಿನ ಮಕ್ಕಳಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ನೀಡಲಾಗಿದೆ. ಒಟ್ಟಾರೆಯಾಗಿ ದಿನದಲ್ಲಿ 128 ಮಂದಿ ಮೊದಲ ಡೋಸ್ ಹಾಗೂ 374 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಡಿಎಚ್‌ಓ ಡಾ.ಉಡುಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News