"ಕೋವಿಡ್ ಲಸಿಕೆ ಪಡೆಯದವರಿಗೆ ಶಸ್ತ್ರಚಿಕಿತ್ಸೆ ಇಲ್ಲ": ಹೃದಯ ಕಸಿ ಶಸ್ತ್ರಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆ

Update: 2022-01-27 16:48 GMT
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್, ಜ.27: ಕೋವಿಡ್ ಲಸಿಕೆ ಪಡೆಯದ ರೋಗಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ ನಡೆಸಲು ಬಾಸ್ಟನ್ ನ ಆಸ್ಪತ್ರೆ ನಿರಾಕರಿಸಿದೆ ಎಂದು ಅಮೆರಿಕದ ಟಿವಿ ವಾಹಿನಿ ಬುಧವಾರ ವರದಿ ಮಾಡಿದೆ.

ಈ ವರದಿಯನ್ನು ದೃಢಪಡಿಸಿರುವ ‘ಬ್ರಿಘಮ್ ಆ್ಯಂಡ್ ವುಮೆನ್ಸ್’ ಆಸ್ಪತ್ರೆಯ ವಕ್ತಾರರು, ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ನಡೆಸಬೇಕಿದ್ದರೆ ರೋಗಿ ಕೋವಿಡ್ ಲಸಿಕೆ ಪಡೆದಿರಬೇಕೆಂಬ ನಿಯಮವಿದೆ ಎಂದಿದ್ದಾರೆ. 31 ವರ್ಷದ ತನ್ನ ಮಗ ಸಾವಿನ ಅಂಚಿಗೆ ತಲುಪಿದ್ದರೂ ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ತಾಸುಗಟ್ಟಲೆ ಕಾಯಬೇಕಾಯಿತು. ಕಡೆಗೂ ಸರದಿ ಬಂದಾಗ ಕೋವಿಡ್ ಲಸಿಕೆ ಪಡೆದಿರುವ ವರದಿಯಿಲ್ಲದಿದ್ದರೆ ಶಸ್ತ್ರಚಿಕಿತ್ಸೆ ನಡೆಸುವುದಿಲ್ಲ ಎಂದು ನಿರಾಕರಿಸಲಾಗಿದೆ. ಲಸಿಕೆ ಕಡ್ಡಾಯ ಎಂಬ ನೀತಿಯನ್ನು ಅವರು ಬಲವಂತದಿಂದ ಅನುಷ್ಟಾನಕ್ಕೆ ತಂದಿದ್ದಾರೆ. ಲಸಿಕೆ ಪಡೆದಿಲ್ಲ ಎಂದು ತಿಳಿದಾಗ ಮಗನ ಹೆಸರನ್ನು ಹೃದಯ ಕಸಿ ರೋಗಿಗಳ ಪಟ್ಟಿಯಿಂದ ತೆಗೆದು ಹಾಕಿದ್ದಾರೆ. ಬೇರೆ ಆಸ್ಪತ್ರೆಗೆ ಸಾಗಿಸುವಷ್ಟು ಸಮಯ ಈಗ ಉಳಿದಿಲ್ಲ ಎಂದು ರೋಗಿಯ ತಂದೆ ಡೇವಿಡ್ ಫರ್ಗ್ಯೂಸನ್ ಸಿಎನ್ಎನ್ ಮತ್ತು ಎಬಿಸಿ ಟಿವಿ ವಾಹಿನಿಯೊಂದಿಗೆ ಮಾತನಾಡಿದ ಸಂದರ್ಭ ಹೇಳಿದ್ದಾರೆ.

ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೆ ಕೆಲವೊಂದು ನಿಯಮಗಳಿವೆ. ಸಿಡಿಸಿ ಶಿಫಾರಸು ಮಾಡಿದ ಲಸಿಕೆ ಪಡೆದಿರಬೇಕು. ಅಲ್ಲದೆ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಯ ಜೀವನಶೈಲಿ, ಹವ್ಯಾಸದ ಬಗ್ಗೆಯೂ ಮಾಹಿತಿಯ ಅಗತ್ಯವಿದೆ. ಇದರಿಂದ ಅವರ ದೇಹದಲ್ಲಿನ ಪ್ರತಿರೋಧಕ ಶಕ್ತಿಯ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿ ಈ ಆಧಾರದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ಆಸ್ಪತ್ರೆಯ ಹೇಳಿಕೆ ತಿಳಿಸಿದೆ. ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೂ ಮುನ್ನ ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಕಡಿತಗೊಳಿಸಲಾಗುವುದು. ಆಗ ಲಸಿಕೆ ಪಡೆಯದವರು ಸಾಯಬಹುದು. ಅಂಗಾಂಗಗಳು ಅತ್ಯಂತ ವಿರಳವಾಗಿದೆ ಮತ್ತು ಬದುಕುವ ಸಾಧ್ಯತೆ ಕಡಿಮೆಯಾಗಿರುವವರಿಗೆ ಅದನ್ನು ನೀಡಲು ಆಗದು. ಯಾಕೆಂದರೆ ಲಸಿಕೆ ಪಡೆದವರು ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುವ ಸಾಧ್ಯತೆ ಅಧಿಕವಾಗಿದೆ ಎಂದು ನ್ಯೂಯಾರ್ಕ್ ವಿವಿಯ ವೈದ್ಯಕೀಯ ನೀತಿಶಾಸ್ತ್ರಜ್ಞ ಆರ್ಥರ್ ಕಪ್ಲಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News