ಉಕ್ರೇನ್, ಬೀಜಿಂಗ್ ಒಲಿಂಪಿಕ್ಸ್ ವಿಷಯದಲ್ಲಿ ಹಸ್ತಕ್ಷೇಪ ಬೇಡ: ಅಮೆರಿಕಕ್ಕೆ ಚೀನಾ ಎಚ್ಚರಿಕೆ

Update: 2022-01-27 16:47 GMT

ಬೀಜಿಂಗ್, ಜ.27: ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಹಸ್ತಕ್ಷೇಪ ನಡೆಸದಂತೆ ಮತ್ತು ಉಕ್ರೇನ್ ವಿಷಯಕ್ಕೆ ಸಂಬಂಧಿಸಿ ರಶ್ಯಾದ ಭದ್ರತೆಗೆ ಎದುರಾಗಿರುವ ಆತಂಕವನ್ನು ಗಂಭೀರವಾಗಿ ಪರಿಗಣಿಸುವಂತೆ ಚೀನಾ ಗುರುವಾರ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.

ಗುರುವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್‌ಗೆ ಕರೆ ಮಾಡಿದ ಚೀನಾದ ವಿದೇಶ ವ್ಯವಹಾರ ಸಚಿವ ವಾಂಗ್ ಯಿ, ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಹಸ್ತಕ್ಷೇಪ ನಡೆಸದಿರುವುದು ಈಗಿರುವ ಅತ್ಯಂತ ತುರ್ತು ಆದ್ಯತೆಯಾಗಿದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಚೀನಾದ ವಿದೇಶ ವ್ಯವಹಾರ ಇಲಾಖೆಯ ಹೇಳಿಕೆ ತಿಳಿಸಿದೆ. ಉಕ್ರೇನ್ ವಿಷಯಕ್ಕೆ ಸಂಬಂಧಿಸಿ ಯುರೋಪ್‌ನಲ್ಲಿ ಆತಂಕ ಹೆಚ್ಚುತ್ತಿರುವ ಬಗ್ಗೆ ಉಭಯ ಅಧಿಕಾರಿಗಳು ಚರ್ಚಿಸಿದರು. ರಶ್ಯಾದ ಭದ್ರತೆಗೆ ಎದುರಾಗಿರುವ ಆತಂಕವನ್ನು ಗಂಭಿರವಾಗಿ ಪರಿಗಣಿಸಬೇಕಾಗಿದೆ . 

ಎಲ್ಲಾ ದೇಶಗಳೂ ಶೀತಲ ಯುದ್ಧದ ಮನಸ್ಥಿತಿಯನ್ನು ಸಂಪೂರ್ಣ ತೊರೆದು ಸಮಾಲೋಚನೆಯ ಮೂಲಕ ಸಮತೋಲಿತ, ಪರಿಣಾಮಕಾರಿ ಮತ್ತು ಸಮರ್ಥನೀಯ ಯುರೋಪ್‌ನ ಭದ್ರತಾ ಕಾರ್ಯವಿಧಾನವನ್ನು ರೂಪಿಸಬೇಕಾಗಿದೆ ಎಂದು ವಾಂಗ್ ಯಿ ಅವರು ಬ್ಲಿಂಕೆನ್‌ಗೆ ಹೇಳಿದ್ದಾರೆ. ತೈವಾನ್ ವಿಷಯದಲ್ಲಿ ಬೆಂಕಿಯೊಂದಿಗೆ ಸರಸವನ್ನೂ ಅಮೆರಿಕ ನಿಲ್ಲಿಸಬೇಕು ಎಂದು ಅಮೆರಿಕಕ್ಕೆ ತಿಳಿಸಲಾಗಿದೆ . ಸೇನಾ ನೆಲೆಗಳನ್ನು ಬಲಪಡಿಸುವ ಮೂಲಕ ಅಥವಾ ವಿಸ್ತರಿಸುವ ಮೂಲಕ ಪ್ರಾದೇಶಿಕ ಭದ್ರತೆಯನ್ನು ಖಾತರಿಪಡಿಸಲು ಆಗುವುದಿಲ್ಲ ಎಂದು ಚೀನಾದ ವಿದೇಶ ವ್ಯವಹಾರ ಇಲಾಖೆ ಹೇಳಿದೆ.

ಮುಂದಿನ ವಾರ ಆರಂಭಗೊಳ್ಳಲಿರುವ ಒಲಿಂಪಿಕ್ಸ್ ಕ್ರೀಡಾಕೂಟ ಸಾಂಗವಾಗಿ ಸಾಗಬೇಕೆಂದು ಚೀನಾ ಆಶಿಸುತ್ತಿದೆ. ಆದರೆ ಚೀನಾದಲ್ಲಿ , ಅದರಲ್ಲೂ ವಿಶೇಷವಾಗಿ ಕ್ಸಿನ್‌ಜಿಯಾಂಗ್ ವಲಯದಲ್ಲಿ ಉಯಿಗರ್ ಮುಸ್ಲಿಮ್ ಅಲ್ಪಸಂಖ್ಯಾತರ ಮಾನವ ಹಕ್ಕುಗಳನ್ನು ನಿರ್ಬಂಧಿಸಲಾಗಿದೆ ಎಂಬ ವರದಿಯ ಹಿನ್ನೆಲೆಯಲಿ ಅಮೆರಿಕ ನೇತೃತ್ವದ ರಾಷ್ಟ್ರಗಳು ಒಲಿಂಪಿಕ್ಸ್ ಗೆ ರಾಜತಾಂತ್ರಿಕ ಬಹಿಷ್ಕಾರ ವಿಧಿಸಿವೆ. 

ಈ ಮಧ್ಯೆ, ವಾಂಗ್ ಯಿ ಮತ್ತು ಬ್ಲಿಂಕೆನ್ ಮಧ್ಯೆ ನಡೆದ ಮಾತುಕತೆಯ ಬಗ್ಗೆ ಅಮೆರಿಕದ ವಿದೇಶ ವ್ಯವಹಾರ ಇಲಾಖೆ ನೀಡಿದ ಹೇಳಿಕೆಯಲ್ಲಿ ಬೀಜಿಂಗ್ ಒಲಿಂಪಿಕ್ಸ್ ವಿಷಯವನ್ನು ಉಲ್ಲೇಖಿಸಲಾಗಿಲ್ಲ. ಉಕ್ರೇನ್ ವಿರುದ್ಧ ರಶ್ಯಾದ ಆಕ್ರಮಣಕಾರಿ ನೀತಿ ಹೆಚ್ಚುತ್ತಿರುವುದರಿಂದ ಜಾಗತಿಕ ಭದ್ರತೆ ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೆ ಆಗುತ್ತಿರುವ ಅಪಾಯಗಳನ್ನು ಬ್ಲಿಂಕೆನ್ ಪ್ರಮುಖವಾಗಿ ಪ್ರಸ್ತಾವಿಸಿದರು ಮತ್ತು ಉದ್ವಿಗ್ನತೆ ಕಡಿಮೆಗೊಳಿಸಿ ರಾಜತಾಂತ್ರಿಕ ಮಾರ್ಗದಲ್ಲಿ ಮುಂದುವರಿಯುವ ಅಗತ್ಯವನ್ನು ಒತ್ತಿಹೇಳಿದರು ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News