ಭಯೋತ್ಪಾದಕ ಸಂಘಟನೆಗೆ ಅಫ್ಘಾನ್ ನೆಲ ಅಥವಾ ಇತರ ಅಭಯಧಾಮಗಳ ನೆರವು ಲಭಿಸಬಾರದು: ವಿಶ್ವಸಂಸ್ಥೆಯಲ್ಲಿ ಭಾರತ

Update: 2022-01-27 17:02 GMT

ವಿಶ್ವಸಂಸ್ಥೆ, ಜ.27: ವಿಶ್ವಸಂಸ್ಥೆ ನಿಷೇಧಿತ ಭಯೋತ್ಪಾದಕ ಸಂಘಟನೆಗಳು ಅಫ್ಘಾನ್ ನೆಲ ಅಥವಾ ಈ ವಲಯದಲ್ಲಿನ ಇತರ ಭಯೋತ್ಪಾದಕ ಅಭಯಧಾಮಗಳಿಂದ ನೇರ ಅಥವಾ ಗುಪ್ತ ಬೆಂಬಲ ಪಡೆಯದಂತೆ ಖಾತರಿಪಡಿಸುವಲ್ಲಿ ವಾಸ್ತವಿಕ ಪ್ರಗತಿ ಸಾಧಿಸಬೇಕಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಆಗ್ರಹಿಸಿದೆ.

ಅಫ್ಘಾನಿಸ್ತಾನ ಮತ್ತು ಈ ವಲಯಕ್ಕೆ ಭಯೋತ್ಪಾದನೆಯ ಗಂಭೀರ ಬೆದರಿಕೆ ಮುಂದುವರಿದಿದೆ. ನಿರ್ಣಾಯಕ ಸಮಸ್ಯೆಗಳ ಬಗ್ಗೆ ಅಂತರಾಷ್ಟ್ರೀಯ ಸಮುದಾಯದ ನಿರೀಕ್ಷೆಗಳ ಬಗ್ಗೆ ಭದ್ರತಾ ಸಮಿತಿಯ 2593ನೇ ನಿರ್ಣಯದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿಯ ಕಾಯಂ ಪ್ರತಿನಿಧಿ ಟಿಎಸ್ ತ್ರಿಮೂರ್ತಿ ಬುಧವಾರ ಹೇಳಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಭಾರತ ಅಧ್ಯಕ್ಷನಾಗಿದ್ದ ಸಂದರ್ಭ ಕಳೆದ ಆಗಸ್ಟ್‌ನಲ್ಲಿ ಈ ನಿರ್ಣಯ(ನಿರ್ಣಯ ಸಂಖ್ಯೆ 2593) ಅಂಗೀಕರಿಸಲಾಗಿದೆ.

ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆಯ ನೆರವಿನ ಯೋಜನೆಯ ಬಗ್ಗೆ ವಿವರಣೆ ನೀಡಲು ಭದ್ರತಾ ಸಮಿತಿ ನಡೆಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ವಿಶ್ವಸಂಸ್ಥೆ ಭದ್ರತಾ ಸಮಿತಿ ನಿರ್ಣಯವು ಭಯೋತ್ಪಾದನೆ ವಿರುದ್ಧದ ಹೋರಾಟದ ಅಗತ್ಯವನ್ನು ಹೇಳಿದ್ದು, ಅಫ್ಘಾನ್ ನೆಲವನ್ನು ಭಯೋತ್ಪಾದಕ ಕೃತ್ಯಗಳಿಗೆ ಬಳಸಲು ಬಿಡುವುದಿಲ್ಲ ಎಂಬ ತಾಲಿಬಾನ್ ನ ಬದ್ಧತೆಯನ್ನು ಇಲ್ಲಿ ಒತ್ತಿಹೇಳಲಾಗಿದೆ. ಆದರೂ ವಿಶ್ವಸಂಸ್ಥೆ ನಿಷೇಧಿತ ಭಯೋತ್ಪಾದಕ ಸಂಘಟನೆಗಳು ಅಫ್ಘಾನ್ ನೆಲ ಅಥವಾ ಈ ವಲಯದಲ್ಲಿನ ಇತರ ಭಯೋತ್ಪಾದಕ ಅಭಯಧಾಮಗಳಿಂದ ನೇರ ಅಥವಾ ಗುಪ್ತ ಬೆಂಬಲ ಪಡೆಯದಂತೆ ಖಾತರಿಪಡಿಸುವಲ್ಲಿ ವಾಸ್ತವಿಕ ಪ್ರಗತಿ ಸಾಧಿಸಬೇಕಿದೆ ಎಂದು ಪಾಕಿಸ್ತಾನವನ್ನು ಪರೋಕ್ಷವಾಗಿ ಉಲ್ಲೇಖಿಸಿ ಹೇಳಿದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News