ಬಾಂಗ್ಲಾದೇಶದ ಆಸ್ಪತ್ರೆಗೆ ವಿಶ್ವದ ಅತ್ಯುತ್ತಮ ಹೊಸ ಕಟ್ಟಡ ಪ್ರಶಸ್ತಿ

Update: 2022-01-27 17:46 GMT
photo:twitter/@RIBA

ಲಂಡನ್, ಜ.27: ಬಾಂಗ್ಲಾದೇಶದ ವಾಸ್ತುಶಿಲ್ಪಿ ಕಶೀಫ್ ಚೌಧುರಿ ವಿನ್ಯಾಸಗೊಳಿಸಿರುವ ನೈಋತ್ಯ ಬಾಂಗ್ಲಾದೇಶದ ದೂರದ ಗ್ರಾಮೀಣ ಪ್ರದೇಶದಲ್ಲಿರುವ ಸತ್‌ಖಿರಾ ಜಿಲ್ಲೆಯ ಫ್ರೆಂಡ್‌ಶಿಪ್ ಆಸ್ಪತ್ರೆಯನ್ನು ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಬ್ರಿಟಿಷ್ ಆರ್ಕಿಟೆಕ್ಟ್ಸ್ ನೀಡುವ ಪ್ರತಿಷ್ಟಿತ ಆರ್ಐಬಿಎ ಅಂತರಾಷ್ಟ್ರೀಯ ಪುರಸ್ಕಾರ 2021ಕ್ಕೆ ಆಯ್ಕೆ ಮಾಡಲಾಗಿದೆ.

ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಿಸಲಾಗಿರುವ 80 ಹಾಸಿಗೆಗಳ ಸಾಮುದಾಯಿಕ ಆಸ್ಪತ್ರೆಯ ಕಟ್ಟಡವನ್ನು ಸುತ್ತಮುತ್ತಲಿನ ಪ್ರದೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಸಮುದ್ರದ ನೀರಿನ ಪ್ರಮಾಣ ಏರಿಕೆಯಾಗುವ ಪರಿಣಾಮಗಳನ್ನು ತಾಳಿಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಸರಣಿ ಅಂಗಳಗಳನ್ನು ನಿರ್ಮಿಸಿರುವುದರಿಂದ ಪ್ರಾಕೃತಿಕ ಬೆಳಕು ಮತ್ತು ವಾತಾಯನ ವ್ಯವಸ್ಥೆ ಧಾರಾಳವಾಗಿದೆ. ಇಲ್ಲಿನ ನೆಲದಲ್ಲಿ ಲಭಿಸುವ ನೀರು ಬಹುತೇಕ ಉದ್ದೇಶಗಳಿಗೆ ಬಳಸಲು ಸಾಧ್ಯವಿಲ್ಲದ ರೀತಿಯಲ್ಲಿ ಇರುವುದರಿಂದ ನಿವೇಶನವನ್ನು ಹಾದು ಹೋಗುವ ಕಾಲುವೆಯು ಅತ್ಯಮೂಲ್ಯ ಮಳೆನೀರನ್ನು ಸಂಗ್ರಹಿಸುತ್ತದೆ ಮತ್ತು ತಂಪಗಿನ ವಾತಾವರಣವು ರೋಗಿಗಳಿಗೆ ಹಾಗೂ ಅವರ ಬಂಧುಗಳಿಗೆ ನಿರಾಳತೆ, ನೆಮ್ಮದಿಯ ಭಾವಕ್ಕೆ ಕಾರಣವಾಗುತ್ತದೆ.

ವಿನ್ಯಾಸ ಶ್ರೇಷ್ಟತೆ, ವಾಸ್ತುಶಿಲ್ಪದ ವೈಭವವನ್ನು ಪ್ರಸ್ತುತಪಡಿಸುವ ಮತ್ತು ಅರ್ಥಪೂರ್ಣ ಸಾಮಾಜಿಕ ಪರಿಣಾಮಕ್ಕೆ ಕಾರಣವಾಗುವ ಕಟ್ಟಡಕ್ಕೆ 2 ವರ್ಷಗಳಿಗೊಮ್ಮೆ ಈ ಪುರಸ್ಕಾರವನ್ನು ನೀಡಲಾಗುವುದು. ಪಟ್ಟಿಯಲ್ಲಿರುವ ಪ್ರತೀ ಕಟ್ಟಡಗಳಿಗೆ ಅಂತರಾಷ್ಟ್ರೀಯ ತಜ್ಞರ ಸಮಿತಿ ಭೇಟಿ ನೀಡಿ, ಪರಿಶೀಲಿಸಿದ ಬಳಿಕ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ. ಅಂತಿಮ ಹಂತಕ್ಕೆ ಆಯ್ಕೆಯಾದ 3 ಕಟ್ಟಡಗಳ ಪೈಕಿ ಫ್ರೆಂಡ್ಶಿಪ್ ಆಸ್ಪತ್ರೆ ಪ್ರಶಸ್ತಿ ಪಡೆದಿದೆ ಎಂದು ಆಯ್ಕೆಗಾರರ ಸಮಿತಿ ಅಧ್ಯಕ್ಷ, ಫ್ರಾನ್ಸ್ ನ ಖ್ಯಾತ ವಾಸ್ತುಶಿಲ್ಪಿ ಒಡೈಲ್ ಡೆಕ್ ಹೇಳಿದ್ದಾರೆ. ಫ್ರೆಂಡ್‌ಶಿಪ್ ಆಸ್ಪತ್ರೆಯು ಮಾನವೀಯತೆ ಮತ್ತು ಸುರಕ್ಷತೆಯ ವಾಸ್ತುಶಿಲ್ಪವನ್ನು ಒಳಗೊಂಡಿದೆ. ಸಾಮಾಜಿಕ ಆವಿಷ್ಕಾರದ ಮೂಲಕ ಸಮುದಾಯಗಳಿಗೆ ಘನತೆ ಮತ್ತು ಭರವಸೆಯನ್ನು ಒದಗಿಸುವ ಮಾನವೀಯ ದೃಷ್ಟಿಕೋನದ ಪ್ರತೀಕವಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News