ವಲಸಿಗರಿದ್ದ ದೋಣಿ ಮುಳುಗಿ ಓರ್ವ ಮೃತ್ಯು, 38 ಮಂದಿ ನಾಪತ್ತೆ‌

Update: 2022-01-27 18:08 GMT
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್, ಜ.27: ಅಮೆರಿಕದ ಫ್ಲೋರಿಡಾ ರಾಜ್ಯದ ಮಿಯಾಮಿ ಕಡಲ ತೀರದ ಬಳಿ ವಲಸಿಗರು ಪ್ರಯಾಣಿಸುತ್ತಿದ್ದ ದೋಣಿ ಸಮುದ್ರದಲ್ಲಿ ಮುಳುಗಿದ್ದು ಓರ್ವನ ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾಗಿರುವ ಇತರ 38 ಮಂದಿ ಬದುಕುಳಿದಿರುವ ಸಾಧ್ಯತೆ ಬಹುತೇಕ ಶೂನ್ಯವಾಗಿದೆ ಎಂದು ಅಮೆರಿಕದ ತಟರಕ್ಷಣಾ ಪಡೆ ಬುಧವಾರ ಹೇಳಿದೆ.

ರವಿವಾರ ಬೆಳಿಗ್ಗೆ ಸಮುದ್ರದ ಅಲೆಗಳ ಹೊಡೆತಕ್ಕೆ ದೋಣಿ ಮುಳುಗಿರುವ ಸಾಧ್ಯತೆಯಿದೆ. ದುರಂತದ ಮಾಹಿತಿ ತಿಳಿದೊಡನೆ 2 ದಿನದಿಂದ ರಕ್ಷಣಾ ಕಾರ್ಯ ನಡೆಸಿದ್ದು ಮಗುಚಿ ಬಿದ್ದ ದೋಣಿಯ ಅಂಚನ್ನು ಹಿಡಿದು ನೇತಾಡುತ್ತಿದ್ದ ಓರ್ವ ವ್ಯಕ್ತಿಯನ್ನು ರಕ್ಷಿಸಲಾಗಿದ್ದು ಇನ್ನೊಬ್ಬನ ಮೃತದೇಹ ಪತ್ತೆಯಾಗಿದೆ. ದೋಣಿಯಲ್ಲಿ 40 ಪ್ರಯಾಣಿಕರಿದ್ದರು ಮತ್ತು ಯಾರ ಬಳಿಯೂ ಲೈಫ್ ಜಾಕೆಟ್ ಇರಲಿಲ್ಲ ಎಂದು ಆತ ಮಾಹಿತಿ ನೀಡಿದ್ದಾನೆ. ಆದ್ದರಿಂದ ಕನಿಷ್ಟ 38 ಮಂದಿ ನಾಪತ್ತೆಯಾಗಿದ್ದು ಅವರು ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಮೂಲಗಳು ಹೇಳಿವೆ.

ದೋಣಿ ಮುಳುಗಿದ ಪ್ರದೇಶದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ತಟರಕ್ಷಣಾ ಪಡೆ ವಲಸಿಗರಿದ್ದ ಮತ್ತೊಂದು ದೋಣಿಯನ್ನು ತಡೆದಿದೆ. ಬಹಾಮಾದಿಂದ ಹೊರಟ ದೋಣಿಯಲ್ಲಿ ಜನರು ಕಿಕ್ಕಿರಿದು ಸೇರಿದ್ದು ಹೈಟಿಯ ಸುಮಾರು 191 ವಲಸಿಗರಿದ್ದರು. ಇದೊಂದು ಮಾನವ ಕಳ್ಳಸಾಗಾಣಿಕೆ ಪ್ರಕರಣವಾಗಿದ್ದು ದೋಣಿಯಲ್ಲಿದ್ದವರು ಫ್ಲೋರಿಡಾದತ್ತ ಸಂಚರಿಸುತ್ತಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News