ಐಎಎಸ್ ಸೇವಾ ನಿಯಮಗಳಲ್ಲಿ ಬದಲಾವಣೆ ಅಸಾಂವಿಧಾನಿಕ: ಮಾಜಿ ಅಧಿಕಾರಿಗಳು

Update: 2022-01-27 18:22 GMT
photo:PIB

ಹೊಸದಿಲ್ಲಿ,ಜ.27: 109 ಮಾಜಿ ಹಿರಿಯ ಸರಕಾರಿ ಅಧಿಕಾರಿಗಳ ಗುಂಪು ಕಾನ್‌ಸ್ಟಿಟ್ಯೂಷನ್ ಕಂಡಕ್ಟ್ ಗ್ರೂಪ್ (ಸಿಸಿಜಿ) ಗುರುವಾರ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದು, ಐಎಎಸ್ (ಕೇಡರ್) ನಿಯಮಗಳನ್ನು ತಿದ್ದುಪಡಿಗೊಳಿಸುವ ಕೇಂದ್ರದ ಪ್ರಸ್ತಾವವು ಅಸಾಂವಿಧಾನಿಕವಾಗಿದೆ ಎಂದು ಟೀಕಿಸಿದೆ.

‘ಕೇಡರ್ ನಿಯಮಗಳಿಗೆ ಪ್ರಸ್ತಾವಿತ ತಿದ್ದುಪಡಿಗಳು ನಿರಂಕುಶ, ಅಸಮಂಜಸ ಮತ್ತು ಅಸಾಂವಿಧಾನಿಕವಾಗಿವೆ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಹೇಳಿಕೆಗೆ ಸಹಿ ಹಾಕಿದವರಲ್ಲಿ ಮಾಜಿ ಸರಕಾರಿ ಅಧಿಕಾರಿಗಳಾದ ಅನಿತಾ ಅಗ್ನಿಹೋತ್ರಿ, ಹರ್ಷ ಮಂದರ್, ನಜೀಬ್ ಜಂಗ್ ಮತ್ತು ಎ.ಎಸ್.ದೌಲತ್ ಮತ್ತಿತರರು ಸೇರಿದ್ದಾರೆ.

ಪ್ರಸ್ತಾವಿತ ತಿದ್ದುಪಡಿಗಳು ಸಂವಿಧಾನದ ಮೂಲ ಸ್ವರೂಪವನ್ನು ಅತಿಕ್ರಮಿಸುತ್ತವೆ ಮತ್ತು ಕೇಂದ್ರದಿಂದ ಅಧಿಕಾರ ದುರ್ಬಳಕೆಗೆ ಹೆಚ್ಚಿನ ಅವಕಾಶವನ್ನು ನೀಡುತ್ತವೆ ಎಂದಿರುವ ಸಿಸಿಜಿ,ಎಲ್ಲ ಐಎಎಸ್ ಅಧಿಕಾರಿಗಳನ್ನು ರಾಜ್ಯ ಆಧಾರಿತ ಕೇಡರ್ ಗಳಲ್ಲಿ ವಿಭಜಿಸಲಾಗುತ್ತದೆ ಮತ್ತು ಕೇಂದ್ರವು ರಾಜ್ಯಗಳಿಂದ ಅವರನ್ನು ಎರವಲು ಪಡೆದುಕೊಳ್ಳುತ್ತದೆ. ಪ್ರಾಥಮಿಕವಾಗಿ ರಾಜ್ಯ ಆಡಳಿತಗಳು ಅಧಿಕಾರಿಗಳನ್ನು ವಿಕಸನಗೊಳಿಸುತ್ತವೆ ಮತ್ತು ಅದು ಕೇಡರ್ ಗಳು ಮತ್ತು ಸರಕಾರದ ನಡುವೆ ಸದೃಢ ಸಂಬಂಧವನ್ನಂಟು ಮಾಡುತ್ತದೆ. ಕೇಡರ್ ನಿಯಮಗಳಿಗೆ ಪ್ರಸ್ತಾವಿತ ತಿದ್ದುಪಡಿಯು ಈ ಸಂಬಂಧವನ್ನು ಮೂಲಭೂತವಾಗಿ ಬದಲಿಸುತ್ತದೆ ಎಂದು ಹೇಳಿದೆ.

ತಿದ್ದುಪಡಿಗಳ ಕುರಿತು ಕೇಂದ್ರವು ಸರಿಯಾಗಿ ಚಿಂತನೆ ನಡೆಸಿಲ್ಲ ಮತ್ತು ಸಾಕಷ್ಟು ಸಮಾಲೋಚನೆಗಳನ್ನು ನಡೆಸಿಲ್ಲ ಎನ್ನುವುದು ಸ್ಪಷ್ಟವಿದೆ. ಇದು ಸರಕಾರದಿಂದ ಕೇಂದ್ರೀಕೃತ ಅಧಿಕಾರದ ನಿರಂಕುಶ ಬಳಕೆಯ ಮಾಮೂಲು ಪ್ರವೃತ್ತಿಗೆ ಇನ್ನೊಂದು ನಿದರ್ಶನವಾಗಿದೆ ಎಂದು ಈ ಮಾಜಿ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News