ನಾರಾಯಣಗುರು ಹೆಸರಿನಲ್ಲಿ ಹೋರಾಟ ಮುಂದುವರಿಕೆ: ಸತ್ಯಜಿತ್ ಸುರತ್ಕಲ್

Update: 2022-01-28 10:29 GMT

ಮಂಗಳೂರು, ಜ.28: ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣಗುರುಗಳ ಸ್ತಬ್ಧಚಿತ್ರ ನಿರಾಕರಣೆ ಖಂಡಿಸಿ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ನೇತೃತ್ವದಲ್ಲಿ ನಡೆದ ಸ್ವಾಭಿಮಾನ ಜಾಥಾ ಯಶಸ್ಸು ಕಂಡಿದೆ. ನಾರಾಯಣಗುರುಗಳ ಹೆಸರಿನಲ್ಲಿ ಹೋರಾಟ ಮುಂದುವರಿಯಲಿದೆ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಹಾಗೂ ನಾರಾಯಣಗುರು ವಿಚಾರ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಜಾಥಾ ರಾಜಕೀಯ ಪ್ರೇರಿತ ಎಂದು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದರೂ ಗುರುಗಳು ಹಾಗೂ ಸಮಾಜದ ಮೇಲಿನ ಪ್ರೀತಿ, ಆತ್ಮಾಭಿಮಾನದಿಂದ ಸಾಮಾಜಿಕ ನಾಯಕರ ಮೇಲಿನ ವಿಶ್ವಾಸದಿಂದ ತಾಲೂಕುಗಳು ಹಾಗೂ ಜಿಲ್ಲಾ ಕೇಂದ್ರದಲ್ಲಿ ನಡೆದ ಜಾಥಾ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.

ಕೇವಲ ಐದು ದಿನಗಳ ಪೂರ್ವ ತಯಾರಿಯಲ್ಲಿ ನಡೆದ ಜಾಥಾದಲ್ಲಿ ಸಂಘಟಕರ ಮನವಿಯಂತೆ ಜಾತಿ, ಮತ, ಧರ್ಮದ ಭೇದ ಮರೆತು, ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರು, ಅವಿಭಜಿತ ದ.ಕ. ಜಿಲ್ಲೆಯ ಎಲ್ಲ ಬಿಲ್ಲವ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಳದಿ ಧ್ವಜದೊಂದಿಗೆ ಪಾಲ್ಗೊಂಡಿದ್ದರು. ಕೆಲವು ಸಂಘ ಸಂಸ್ಥೆಗಳು ಸಾಂಕೇತಿಕವಾಗಿ ಮಾತ್ರ ಬೆಂಬಲ ಘೋಷಿಸಿದ್ದು, ಸಂಘಟನೆಯ ಪ್ರಮುಖವರು ಭಾಗವಹಿಸಿದ್ದರು. ಬಿಲ್ಲವ ಬ್ರಿಗೇಡ್, ತುಳನಾಡ ತುಳುವೆರ್, ಯುವವಾಹಿನಿ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಜಾಥಾದಲ್ಲಿ ಪಾಲ್ಗೊಂಡಿದ್ದರು ಎಂದರು.

ಯಾವುದೇ ಸಂಘರ್ಷ ಇಲ್ಲದೆ ಜಾಥಾ ನಡೆದರೂ ಅದರ ಖುಷಿ ನೋಡಲಾಗದೆ ಕೆಲವರು ಪಕ್ಷಗಳ ಧ್ವಜ ರಾರಾಜಿಸುತ್ತಿದೆ ಎಂದು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳೇ ಅಂತಹವರಿಗೆ ಬುದ್ಧಿ ಕರುಣಿಸಲಿ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪದ್ಮರಾಜ್ ಪ್ರತಿಕ್ರಿಯಿಸಿದರು.

ಕೇರಳ ಸರಕಾರ ಕಳುಹಿಸಿದ್ದ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ಯಾವ ಕಾರಣಕ್ಕಾಗಿ ತಿರಸ್ಕರಿಸಲಾಗಿದೆ ಎಂಬ ಬಗ್ಗೆ ಈಗಾಗಲೇ ಮಾಧ್ಯಮದ ಮೂಲಕ ತಿಳಿದುಕೊಂಡಿದ್ದೇವೆ. ಬೇರೆ ಕಾರಣಗಳಿದ್ದಲ್ಲಿ ಕೇಂದ್ರ ಸರಕಾರದ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಈಗಾಗಲೇ ಮಾಹಿತಿ ಒದಗಿಸಬೇಕಿತ್ತು. ಅದು ಬಿಟ್ಟು ದಿಕ್ಕು ತಪ್ಪಿಸುವ, ಗೊಂದಲದ ಹೇಳಿಕೆಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸತ್ಯಜಿತ್ ಸುರತ್ಕಲ್ ಪ್ರತಿಕ್ರಿಯಿಸಿದರು.

ಮುಂದಿನ ವರ್ಷ ಗಣರಾಜ್ಯೋತ್ಸವದ ಪರೇಡ್‌ಗೆ ರಾಜ್ಯದಿಂದ ನಾರಾಯಣಗುರುಗಳ ಸ್ತಬ್ಧಚಿತ್ರ ಕಳುಹಿಸಲಾಗುವುದು ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ಹೇಳಿಕೆ ನೀಡಿರುವುದು ನಿಗದಿತ ಅವಧಿಗೆ ನಿಗಮ ಮಂಡಳಿಗೆ ಆಯ್ಕೆಯಾದವರು. ಅಂತಹವರ ಹೇಳಿಕೆ ಬಗ್ಗೆ ಮಾತನಾಡುವುದಿಲ್ಲ ಎಂದು ಸತ್ಯಜಿತ್ ಸುರತ್ಕಲ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದೇವೇಂದ್ರ ಪೂಜಾರಿ, ಸೂರ್ಯಕಾಂತ್ ಉಪಸ್ಥಿತರಿದ್ದರು.


ರಾಜ್ಯದಲ್ಲಿ ಜಾತಿಗೊಂದರಂತೆ ನಿಗಮ ಮಂಡಳಿಗಳಿದ್ದರೂ ಅಧಿಕ ಸಂಖ್ಯೆಯಲ್ಲಿರುವ ಬಿಲ್ಲವ, ಈಡಿಗ ಸಮಾಜಕ್ಕೆ ಇನ್ನೂ ನಿಗಮ ಮಂಡಳಿ ಸ್ಥಾಪನೆಯಾಗಿಲ್ಲ. ಬಿಲ್ಲವರಿಗೆ ಸೂಕ್ತ ಸ್ಥಾನಮಾನಕ್ಕಾಗಿ ನ್ಯಾಯಯುತ ಹೋರಾಟಕ್ಕೆ ಇತ್ತೀಚೆಗೆ ನಡೆದ ಸ್ವಾಭಿಮಾನ ವೇದಿಕೆ ಮುನ್ನುಡಿ. ಶೈಕ್ಷಣಿಕಾಗಿ, ಆರ್ಥಿಕವಾಗಿ ಸಮಾಜವನ್ನು ಮೇಲೆತ್ತಲು ರಾಜಕೀಯ ಬೇಕೆಂದಿಲ್ಲ. ಬಿಲ್ಲವ ಸಮುದಾಯವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಹೋರಾಟದ ಆರಂಭ ಇದಷ್ಟೇ. ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡುವ ಪ್ರಸ್ತಾಪ ಕಳೆದ ಎರಡು ವರ್ಷಗಳಿಂದ ಕಡತದಲ್ಲೇ ಬಾಕಿಯಾಗಿದೆ. ಈ ವಿಷಯದ ಜತೆಗೆ ಮುಂದಿನ ದಿನಗಳಲ್ಲಿ ಬಿಲ್ಲವ ಸಮಾಜದ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸಂಘರ್ಷ ರಹಿತವಾದ ಹೋರಾಟ ನಡೆಸಲಾಗುವುದು.

- ಸತ್ಯಜಿತ್ ಸುರತ್ಕಲ್, ಅಧ್ಯಕ್ಷರು, ನಾರಾಯಣ ಗುರು ವಿಚಾರ ವೇದಿಕೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News