ಎಚ್ಐಎಫ್ ಇಂಡಿಯಾ ವತಿಯಿಂದ 'ಪ್ರಾಜೆಕ್ಟ್ ಆಶಿಯಾನ'ದ 24ನೆ ಮನೆ ಹಸ್ತಾಂತರ
ಮಂಗಳೂರು : ಎಚ್ಐಎಫ್ ಇಂಡಿಯಾ ವತಿಯಿಂದ ಪ್ರಾಜೆಕ್ಟ್ ಆಶಿಯಾನದ ಅಡಿಯಲ್ಲಿ ಬಡವರಿಗೆ, ನಿರ್ಗತಿಕರಿಗೆ ಹೊಸ ಮನೆ ನಿರ್ಮಿಸಿ ಕೊಡುವ ಯೋಜನೆಯ 24ನೆ ಮನೆಯನ್ನು ನೆಲ್ಯಾಡಿ ಸಮೀಪದ ಹೊಸಮಜಲು ಎಂಬಲ್ಲಿ ವಿಧವೆ ಫಲಾನುಭವಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಇಹ್ಸಾನ್ ಮಸೀದಿಯ ಖತೀಬ್ ಮೌಲಾನಾ ತಯ್ಯಿಬ್ ಅವರು ಹೊಸಮನೆಯ ಕೀಲಿ ಕೈ ಮತ್ತು ಒಂದು ತಿಂಗಳ ಮಾಸಿಕ ರೇಷನ್ ಫಲಾನುಭವಿಗೆ ಹಸ್ತಾಂತರಿಸಿದರು.
ಮತ್ತೋರ್ವ ಮುಖ್ಯ ಅತಿಥಿ ಹೊಸಮಜಲು ಜುಮಾ ಮಸೀದಿಯ ಖತೀಬ್ ಉಮರ್ ಕುಂಞಿ ಮುಸ್ಲಿಯಾರ್ ಎಚ್ಐಎಫ್ ತಂಡ ಮಾಡಿದಂತಹ ಸಮಾಜಮುಖಿ ಕಾರ್ಯಗಳು ನಿಜವಾಗಿಯೂ ಶ್ಲಾಘನೀಯ ಎಂದು ಹೇಳಿ, ಪ್ರಶಂಸಿಸಿದರು.
ಎಚ್ಐಎಫ್ ಇಂಡಿಯಾ ಅಧ್ಯಕ್ಷ ನಾಝಿಮ್ ಎ.ಕೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಉಳ್ಳಾಲ ಅಲೇಕಲದಲ್ಲಿ 25ನೇ ಮನೆಯ ಕಾಮಗಾರಿ ಪ್ರಗತಿಯಲ್ಲಿದೆ. ಅತಿ ಶೀಘ್ರದಲ್ಲಿ ಫಲಾನುಭವಿಗೆ ಮನೆಯನ್ನು ಹಸ್ತಾಂತರಿಸಲಾಗುವುದು ಎಂದು ಪ್ರಾಜೆಕ್ಟ್ ಆಶಿಯಾನದ ಸಂಚಾಲಕ ನೌಶಾದ್ ಎ.ಕೆ. ತಿಳಿಸಿದರು.
ಸಉದ್ ಕಿರಾಅತ್ ಪಠಿಸಿದರು. ಔಸಾಫ್ ಹುಸೈನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.