×
Ad

ಉಕ್ರೇನ್ ಮೇಲೆ ದಾಳಿ ನಡೆಸಿದರೆ ರಶ್ಯಾ ವಿರುದ್ಧ ಕಠಿಣ ಕ್ರಮ: ಫ್ರಾನ್ಸ್ ಎಚ್ಚರಿಕೆ

Update: 2022-01-28 22:33 IST
ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್

ಪ್ಯಾರಿಸ್, ಜ.28: ಉಕ್ರೇನ್ ಮೇಲೆ ಆಕ್ರಮಣ ಮಾಡಿದರೆ ಯುರೋಪಿಯನ್ ಯೂನಿಯನ್ ಬಲವಾದ ಪ್ರತಿಕ್ರಮ ಕೈಗೊಳ್ಳಲಿದೆ ಎಂಬುದನ್ನು ರಶ್ಯಾ ಅರಿತುಕೊಳ್ಳಬೇಕು ಎಂದು ಫ್ರಾನ್ಸ್ ನ ವಿದೇಶ ವ್ಯವಹಾರ ಸಚಿವ ಜೀನ್ ಯುವೆಸ್ ಲೆ’ಡ್ರಿಯಾನ್ ಗುರುವಾರ ಹೇಳಿದ್ದಾರೆ.

ಉಕ್ರೇನ್ ನ ಪ್ರಶ್ನೆ ಈಗ ಪ್ರಮುಖ ಸುದ್ದಿಯಾಗಿದೆ. ಉಕ್ರೇನ್ ಗಡಿಭಾಗದಲ್ಲಿ ಭಾರೀ ಪ್ರಮಾಣದಲ್ಲಿ ರಶ್ಯಾದ ಸೇನೆ ಜಮಾವಣೆಗೊಂಡಿರುವುದರಿಂದ ನಾವೆಲ್ಲಾ ಸಹಜವಾಗಿಯೇ ಆತಂಕಕ್ಕೆ ಒಳಗಾಗಿದ್ದೇವೆ. ಆದರೆ ರಶ್ಯಾ ಒಂದು ವಿಷಯವನ್ನು ತಿಳಿದುಕೊಳ್ಳಬೇಕು- ಉಕ್ರೇನ್ ನ ಸಮಗ್ರತೆ ಅಥವಾ ಸಾರ್ವಭೌಮತೆಯ ಮೇಲೆ ಯಾವುದೇ ದಾಳಿ ನಡೆದರೂ ನಾವು ಬಲವಾಗಿ ಪ್ರತಿಕ್ರಿಯಿಸಲಿದ್ದೇವೆ. ಆದರೆ ಇದೇ ಸಂದರ್ಭ, ಸಮಾಲೋಚನೆಯೇ ವಿವಾದ ಪರಿಹಾರಕ್ಕೆ ಅತ್ಯುತ್ತಮ ಮಾರ್ಗ ಎಂಬುದನ್ನೂ ಒತ್ತಿಹೇಳುತ್ತೇವೆ . 2017ರ ಕದನ ವಿರಾಮ ಒಪ್ಪಂದವನ್ನು ಎಲ್ಲಾ ಪಕ್ಷಗಳೂ ಗೌರವಿಸಬೇಕು ಮತ್ತು ಹಾಲಿ ಬಿಕ್ಕಟ್ಟಿನ ನಿವಾರಣೆಗೆ ರಾಜಕೀಯ ಉಪಕ್ರಮಗಳನ್ನು ಆರಂಭಿಸಬೇಕು ಎಂದವರು ಹೇಳಿದ್ದಾರೆ.

ಮಂಗಳವಾರ ಫ್ರಾನ್ಸ್ ನ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್ ಕೂಡಾ ಇದೇ ರೀತಿಯ ಹೇಳಿಕೆ ನೀಡಿದ್ದರು. ಫ್ರಾನ್ಸ್ ಮತ್ತು ಜರ್ಮನಿ ಸಮಾಲೋಚನೆಗೆ ಬದ್ಧವಾಗಿವೆ. ಆದರೆ ಉಕ್ರೇನ್ ಮೇಲೆ ದಾಳಿ ನಡೆಸಿದರೆ ರಶ್ಯಾ ಭಾರೀ ಬೆಲೆ ತೆರಬೇಕಾಗುತ್ತದೆ ಎಂದವರು ಎಚ್ಚರಿಸಿದ್ದರು.

ಪ್ಯಾರಿಸ್‌ನಲ್ಲಿ ಬುಧವಾರ ನಡೆದ ನಾರ್ಮಂಡಿ ವೇದಿಕೆ(ಫ್ರಾನ್ಸ್, ಜರ್ಮನಿ, ರಶ್ಯಾ ಮತ್ತು ಉಕ್ರೇನ್ ಸದಸ್ಯರಾಗಿರುವ ಸಂಘಟನೆ) ಸಭೆಯಲ್ಲಿ ರಶ್ಯಾ, ಜರ್ಮನಿ ಮತ್ತು ಉಕ್ರೇನ್ ನ ಪ್ರತಿನಿಧಿಗಳು ಪಾಲ್ಗೊಂಡಿದ್ದು ಮುಂದಿನ ತಿಂಗಳು ಬರ್ಲಿನ್‌ನಲ್ಲಿ ಮತ್ತೆ ಸಭೆ ಸೇರುವ ನಿರ್ಧಾರಕ್ಕೆ ಬರಲಾಗಿದೆ. ಈ ಮಧ್ಯೆ, ವಿದೇಶಿ ಮಿತ್ರರಾಷ್ಟ್ರಗಳು ಉಕ್ರೇನ್‌ನಿಂದ ರಾಜತಾಂತ್ರಿಕ ಸಿಬಂದಿಗಳನ್ನು ತೆರವುಗೊಳಿಸಬಾರದು ಎಂದು ಉಕ್ರೇನ್ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News