×
Ad

ಇರಾಕ್: ವಿಮಾನ ನಿಲ್ದಾಣಕ್ಕೆ ಅಪ್ಪಳಿಸಿದ 3 ಕ್ಷಿಪಣಿ; ವಿಮಾನಕ್ಕೆ ಹಾನಿ

Update: 2022-01-28 22:51 IST
photo:twitter/@michaelh992

ಬಗ್ದಾದ್, ಜ.28: ಇರಾಕ್‌ನಲ್ಲಿನ ಅಮೆರಿಕದ ವಾಯುನೆಲೆಯ ಸಮೀಪದಲ್ಲಿರುವ ಬಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣಕ್ಕೆ ಕನಿಷ್ಟ ಮೂರು ಕ್ಷಿಪಣಿಗಳು ಅಪ್ಪಳಿಸಿದ್ದು ವಿಮಾನ ನಿಲ್ದಾಣದಲ್ಲಿ ಬಳಕೆಯಾಗದ ನಾಗರಿಕ ವಿಮಾನಕ್ಕೆ ಹಾನಿಯಾಗಿದೆ ಎಂದು ಇರಾಕ್ ಪೊಲೀಸ್ ಮೂಲಗಳು ಹೇಳಿವೆ.

ಬಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಮತ್ತು ಪಾರ್ಕಿಂಗ್ ಪ್ರದೇಶಕ್ಕೆ ಕ್ಷಿಪಣಿ ಅಪ್ಪಳಿಸಿದ್ದು ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತಿಲ್ಲ. ದಾಳಿಯಲ್ಲಿ ಬಳಕೆಯಾಗದ ನಾಗರಿಕ ವಿಮಾನಕ್ಕೆ ಹಾನಿಯಾಗಿದೆ ಎಂದು ಇರಾಕ್ ನ ಆಂತರಿಕ ಸಚಿವಾಲಯ ಹೇಳಿದೆ. ದಾಳಿಯಲ್ಲಿ ಇತರ ಸಾವುನೋವಿನ ಬಗ್ಗೆ ಮಾಹಿತಿಯಿಲ್ಲ. ದಾಳಿಯಿಂದ ವಿಮಾನ ನಿಲ್ದಾಣದ ಕಾರ್ಯನಿರ್ವಹಣೆಗೆ ತೊಡಕಾಗಿಲ್ಲ ಮತ್ತು ಯಾವುದೇ ವಿಮಾನದ ಸಂಚಾರದ ಮೇಲೆ ಪರಿಣಾಮವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಕ್ಯಾಂಪ್ ವಿಕ್ಟರಿ ಎಂದೇ ಹೆಸರಾಗಿರುವ ಅಮೆರಿಕದ ವಾಯುನೆಲೆ ಬಗ್ದಾದ್ ನಾಗರಿಕ ವಿಮಾನನಿಲ್ದಾಣದ ಪರಿಧಿಯಲ್ಲಿದೆ. ಈ ವಲಯದಲ್ಲಿ ಅಮೆರಿಕದ ಸೇನೆಯ ಉಪಸ್ಥಿತಿಯನ್ನು ವಿರೋಧಿಸುತ್ತಿರುವ ಇರಾನ್ ಮೂಲದ ಶಿಯಾ ಸಶಸ್ತ್ರ ಸಂಘಟನೆ ಈ ಕ್ಷಿಪಣಿ ದಾಳಿ ನಡೆಸುತ್ತಿದೆ ಎಂದು ಅಮೆರಿಕ ಮತ್ತು ಇರಾಕ್ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. ಜನವರಿ ಆರಂಭದಲ್ಲಿ ಇರಾಕ್‌ನ ಅತ್ಯಂತ ಬಿಗುಭದ್ರತೆಯ ಹಸಿರು ವಲಯದಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿ ನಡೆಸಿದ 4 ಕ್ಷಿಪಣಿ ದಾಳಿಯಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

2021ರ ಅಂತ್ಯದೊಳಗೆ ಇರಾಕ್‌ನಿಂದ ಅಮೆರಿಕದ ಪಡೆಗಳನ್ನು ತೆರವುಗೊಳಿಸಲು ಉಭಯ ದೇಶಗಳು ಒಪ್ಪಿಕೊಂಡಿದ್ದವು . ಆದರೆ ಸುಮಾರು 2,500 ಅಮೆರಿಕ ಸೈನಿಕರು ಇರಾಕ್ ಸೇನೆಗೆ ಸಲಹೆ ನೀಡಲು ಇರಾಕ್‌ನಲ್ಲೇ ಉಳಿದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News