×
Ad

ಜಮೀಯ್ಯತುಲ್ ಫಲಾಹ್ ವತಿಯಿಂದ ಡಯಾಲಿಸಿಸ್ ಯಂತ್ರ ಹಸ್ತಾಂತರ, ಸಾಧಕರಿಗೆ ಸನ್ಮಾನ

Update: 2022-01-28 23:12 IST

ಮಂಗಳೂರು, ಜ.28: ಶಿಕ್ಷಣ ಸಮಾಜದ ಆರ್ಥಿಕ ಸಾಮಾಜಿಕ ಬದಲಾವಣೆಗೆ ಕಾರಣವಾಗುತ್ತಿದೆ. ಜಮೀಯ್ಯತುಲ್ ಫಲಾಹ್ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕದ ವತಿಯಿಂದ ನಗರದ ಹೊಟೇಲ್ ಓಶಿಯನ್ ಪರ್ಲ್ ಸಭಾಂಗಣದಲ್ಲಿಂದು ಆಯೋಜಿಸಿದ್ದ ಸ್ಮರಣ ಸಂಚಿಕೆ ಬಿಡುಗಡೆ, ಎರಡು ಡಯಾಲಿಸಿಸ್ ಯಂತ್ರ ಹಸ್ತಾಂತರ ಮತ್ತು ಸನ್ಮಾನ ಸಮಾರಂಭವನ್ನುದ್ದೇಶಿ ಅವರು ಮಾತನಾಡಿದರು.

ದ.ಕ. ಮತ್ತು ಉಡುಪಿ ಜಿಲ್ಲಾ ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಅಧ್ಯಕ್ಷ ಶಬೀ ಅಹ್ಮದ್ ಖಾಝಿ, ಜಮೀಯ್ಯತುಲ್ ಫಲಾಹ್ ಸಂಸ್ಥಾಪಕ ಮುಹಮ್ಮದ್ ಇಕ್ಬಾಲ್ ಯೂಸುಫ್, ಬ್ಯಾರೀಸ್ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಎಕ್ಸ್‌ಪರ್ಟೈಸ್ ಗ್ರೂಪ್ ಉಪಾಧ್ಯಕ್ಷ ಹಾಜಿ ಅಬ್ದುಲ್ ರಹೀಂ ಕರ್ನೀರೆ, ಅಲ್ ಮುಝೈನ್ ಗ್ರೂಪ್ ಅಧ್ಯಕ್ಷ ಹಾಜಿ ಝಕರಿಯ ಬಜ್ಪೆ, ಬಾವ ಫಿಶ್‌ ಮೀಲ್‌ನ ಎಂ.ಡಿ. ಹಾಜಿ ರಿಯಾಝ್ ಬಾವ, ಆಝಾದ್ ಗ್ರೂಪ್ ಆಫ್ ಕಂಪೆನೀಸ್ ಎಂ.ಡಿ. ಮನ್ಸೂರ್ ಅಹ್ಮದ್ ಆಝಾದ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಖ್ಯಾತ ತಜ್ಞ ವೈದ್ಯ ಡಾ.ಜನಾರ್ದನ ಕಾಮತ್ ಅವರು ಕಿಡ್ನಿ ಕಾಯಿಲೆ ಬಗ್ಗೆ ಮಾಹಿತಿ ನೀಡಿದರು. ಬಿಪಿ ಹಾಗೂ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿದ್ದರೆ ಕಿಡ್ನಿ ಕಾಯಿಲೆ ಸಮಸ್ಯೆಯಿಂದ ದೂರ ಇರಬಹುದು ಎಂದರು.

ಇದೇ ವೇಳೆ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ನೀಡಲಾದ ಎರಡು ಡಯಾಲಿಸಿಸ್ ಯಂತ್ರದ ಕೊಡುಗೆಯನ್ನು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಉದಯ ಕುಮಾರ್ ಸ್ವೀಕರಿಸಿದರು.

ಸಾನ್ನಿಧ್ಯದ ನಿರ್ದೇಶಕ ಡಾ.ವಸಂತ ಕುಮಾರ್ ಶೆಟ್ಟಿ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಆಗಿ ಆಯ್ಕೆಯಾದ ಬದ್ರುನ್ನಿಶಾ, ಶಿಕ್ಷಣ ಸಾಧಕ ಡಾ.ನಿಯಾಝ್ ಪಣಕಜೆ, ಸಿ.ಎ. ಪ್ರಥಮ ರ‍್ಯಾಂಕ್ ವಿಜೇತೆ ರುತ್ ಕ್ಲೇರ್ ಡಿಸಿಲ್ವ, ಆಯುರ್ವೇದ ಶಿಕ್ಷಣದಲ್ಲಿ ರ‍್ಯಾಂಕ್ ವಿಜೇತೆ ಡಾ.ರಿಫಾಮ್ ರೋಶನರಾ, ಸಿ.ಎ. ರ‍್ಯಾಂಕ್ ವಿಜೇತ ಮುಹಮ್ಮದ್ ತಾಬಿಸ್ ಹಸನ್, ಐಐಟಿ ಆಯ್ಕೆಯಾದ ಶೇಖ್ ಮುಹಮ್ಮದ್ ಝುನೈನ್ ಸೇರಿದಂತೆ ಏಳು ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.

ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕದ ಅಧ್ಯಕ್ಷ ಹಾಜಿ ಅಬೂಬಕರ್ ಸಿದ್ದೀಕ್ ಸ್ವಾಗತಿಸಿ, ಅಧ್ಯಕ್ಷತೆ ವಹಿಸಿದ್ದರು.

ಸ್ಮರಣ ಸಂಚಿಕೆಯ ಬಿಡುಗಡೆ ಕಾರ್ಯಕ್ರಮವನ್ನು ಘಟಕದ ಕಾರ್ಯದರ್ಶಿ ನಝೀರ್ ಅಹ್ಮದ್ ನಿರ್ವಹಿಸಿದರು. ರಫೀಕ್ ಮಾಸ್ಟರ್ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News