ವೃದ್ಧರಿಗೆ ಬದುಕುವ ಹಕ್ಕಿಲ್ಲವೇ?

Update: 2022-01-29 10:02 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಒಬ್ಬ ಅರಸನಿದ್ದನಂತೆ. ‘ತನ್ನ ಸಾಮ್ರಾಜ್ಯದಲ್ಲಿ ಎಲ್ಲರೂ ದುಡಿಯಬೇಕು. ದುಡಿಯದವರಿಗೆ ಬದುಕುವ ಹಕ್ಕೇ ಇಲ್ಲ. ಆದುದರಿಂದ, ನಿಶಕ್ತರಾಗಿರುವ ವೃದ್ಧರನ್ನೆಲ್ಲ ಸಾಯಿಸಬೇಕು’ ಎಂದು ಆದೇಶ ನೀಡಿದನಂತೆ. ಅಂತೆಯೇ ಎಲ್ಲ ವೃದ್ಧರನ್ನು ಹುಡುಕಿ ಅವರಿಗೆ ಮರಣದಂಡನೆ ನೀಡುವ ಕೆಲಸ ಆರಂಭವಾಯಿತು. ವೃದ್ಧರ ಮಾರಣ ಹೋಮವೇ ನಡೆಯಿತು. ಅಳಿದುಳಿದವರು ತಲೆಮರೆಸಿಕೊಂಡರು. ಒಂದು ದಿನ ರಾಜನ ಮಗ ಅಪ್ಪನ ಬಳಿ ‘‘ಅಪ್ಪ ನೀನು ಮುದುಕನಾದಾಗ ನಿನ್ನನ್ನು ನಾನು ನೇಣಿಗೇರಿಸಲೆ? ಅಥವಾ ಕತ್ತಿಯಿಂದ ತಲೆ ಕತ್ತರಿಸಲೇ?’’ ಎಂದು ಕೇಳಿದನಂತೆ. ಆಘಾತಗೊಂಡ ರಾಜ, ತಕ್ಷಣ ತನ್ನ ಆದೇಶವನ್ನು ಹಿಂದೆಗೆದುಕೊಂಡನಂತೆ. ಆಧುನಿಕ ಜಗತ್ತಿನ ಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ.

ಸದ್ಯದ ಸ್ಥಿತಿಯಲ್ಲಿ ವೃದ್ಧರು ಅಥವಾ ಹಿರಿಯ ನಾಗರಿಕರ ಬದುಕುವ ಹಕ್ಕು ದಿನ ದಿನಕ್ಕೆ ಸಂಕುಚಿತಗೊಳ್ಳುತ್ತಿದೆ. ‘ಒಂದೇ ಮಗು’ ಎನ್ನುವ ತನ್ನ ಜನಸಂಖ್ಯಾ ನೀತಿಯಿಂದಾಗಿ ಚೀನಾದಲ್ಲಿ ಯುವಕರು ಮತ್ತು ವೃದ್ಧರ ನಡುವೆ ಭಾರೀ ಅಂತರ ಸೃಷ್ಟಿಯಾಯಿತು. ಈ ಕಾಯ್ದೆ ಜಾರಿಗೊಂಡ ದಿನಗಳಲ್ಲಿ ಭಾರೀ ಪ್ರಮಾಣದ ಭ್ರೂಣ ಹತ್ಯೆಗಳು ನಡೆದವು. ನವಜಾತ ಶಿಶುಗಳ ಮಾರಣ ಹೋಮವಾಯಿತು. ಈ ಬಗ್ಗೆ ಹಲವು ತನಿಖಾ ವರದಿಗಳು ಹೊರ ಬಿದ್ದಿವೆ. ಹೀಗೆ ಒಂದು ಬರ್ಬರ ನೀತಿಯನ್ನು ಜಾರಿಗೊಳಿಸಿದ ಕೆಲವೇ ದಶಕಗಳಲ್ಲಿ ಅದು ತನ್ನ ಆದೇಶವನ್ನು ಹಿಂದೆಗೆಯುವಂತಹ ಸನ್ನಿವೇಶ ನಿರ್ಮಾಣವಾಯಿತು. ಯಾಕೆಂದರೆ, ಚೀನಾದಲ್ಲಿ ವೃದ್ಧರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಬೆಳೆಯಿತು. ವೃದ್ಧರು ಚೀನಾಕ್ಕೆ ಸಮಸ್ಯೆಯಾದರು. ಇದು ಕೇವಲ ಚೀನಾದ ಸಮಸ್ಯೆಯಾಗಿ ಮಾತ್ರ ಉಳಿದಿಲ್ಲ. ಒಂದು ಅಥವಾ ಎರಡು ಮಕ್ಕಳನ್ನಷ್ಟೇ ಹೊಂದಿರುವ ಎಲ್ಲ ಪಾಶ್ಚಿಮಾತ್ಯ ದೇಶಗಳಲ್ಲೂ ಸರಕಾರಕ್ಕೆ ವೃದ್ಧರನ್ನು ವಿಶೇಷವಾಗಿ ನೋಡಿಕೊಳ್ಳುವ ಹೊಣೆಗಾರಿಕೆ ಹೆಗಲಿಗೆ ಬಿದ್ದಿದೆ.

ವಿಶ್ವದಲ್ಲಿ ಕೊರೋನ ವೈರಸ್ ಸೃಷ್ಟಿಯಾಗಿರುವುದೇ, ಈ ಸಮಸ್ಯೆಯನ್ನು ನಿವಾರಿಸಲು ಆಗಿರಬಹುದೆ? ಎನ್ನುವ ಪ್ರಶ್ನೆಯನ್ನು ಕೇಳದೆ ಇರಲಾಗದು. ಯಾಕೆಂದರೆ ವಿಶ್ವಾದ್ಯಂತ ಕೊರೋನ ವೈರಸ್ ಗದ್ದಲ ಎಬ್ಬಿಸಿದಾಗ ಅದಕ್ಕೆ ಮೊದಲು ಬಲಿಯಾದವರು ವೃದ್ಧರು. ಆಸ್ಪತ್ರೆಗಳಲ್ಲಿ ನೂಕು ನುಗ್ಗಲು ಸೃಷ್ಟಿಯಾದಾಗ ಇಟಲಿಯಂತೂ ‘ಮೊದಲ ಆದ್ಯತೆ ಯುವಕರಿಗೆ’ ಎಂದು ಘೋಷಿಸಿತು. ಆ ಮೂಲಕ ವೃದ್ಧರ ಬದುಕುವ ಹಕ್ಕನ್ನೇ ಕಿತ್ತುಕೊಳ್ಳಲಾಯಿತು. ಕೊರೋನದಿಂದ ವಿಶ್ವದಲ್ಲಿ ಮೃತಪಟ್ಟವರ ಅಂಕಿ-ಸಂಕಿಗಳು ಹೊರ ಬಿದ್ದಿವೆ. ಅವರಲ್ಲಿ ಬಹುತೇಕ ವೃದ್ಧರೇ ಆಗಿದ್ದಾರೆ. ‘ಕೊರೋನ ವೈರಸ್ ವೃದ್ಧರನ್ನು ಬೇಗ ಬಲಿತೆಗೆದುಕೊಳ್ಳುತ್ತದೆ’ ಎನ್ನುವ ವೈದ್ಯರ ಮಾತುಗಳನ್ನು ಗುರಾಣಿಯಾಗಿ ಬಳಸಿಕೊಂಡೇ ಲಕ್ಷಾಂತರ ವೃದ್ಧರನ್ನು ನಮ್ಮ ವೈದ್ಯಕೀಯ ವ್ಯವಸ್ಥೆ ಕೊಂದು ಹಾಕಿತು. ವೃದ್ಧರನ್ನು ಕೈ ಹಿಡಿದು ಮುನ್ನಡೆಸಬೇಕಾದ ಯುವಕರೂ ಈ ಸಂದರ್ಭದಲ್ಲಿ ಅವರ ಕೈ ಬಿಟ್ಟರು. ಕೊರೋನ ವೈರಸ್ ಹೆಸರಲ್ಲಿ ವೃದ್ಧರ ಮಾರಣ ಹೋಮ ನಡೆಯಿತು ಮತ್ತು ನಾವೆಲ್ಲರೂ ಅದರಲ್ಲಿ ನಮ್ಮ ಪಾತ್ರ ಇಲ್ಲವೇ ಇಲ್ಲ ಎನ್ನುವಷ್ಟು ಮುಗ್ಧರಂತೆ ನಟಿಸಿ ಬದುಕುತ್ತಿದ್ದೇವೆ.

ಕೊರೋನ ಬರುವ ಮೊದಲೂ ಈ ಜಗತ್ತು ವೃದ್ಧರಿಗೆ ಪೂರಕವಾಗಿ ಏನೂ ಇದ್ದಿರಲಿಲ್ಲ. ಭಾರತದಲ್ಲಿ ವೃದ್ಧರನ್ನು ಬೇರೆ ಬೇರೆ ನೆಪಗಳಲ್ಲಿ ಬೀದಿಗೆ ಬಿಡುವ ಮಕ್ಕಳು ಹೆಚ್ಚುತ್ತಿದ್ದಾರೆ. ಹೆಚ್ಚುತ್ತಿರುವ ವೃದ್ಧಾಶ್ರಮಗಳೇ ಇದಕ್ಕೆ ಉದಾಹರಣೆ. ಇಂದು ವೃದ್ಧಾಶ್ರಮಗಳೂ ಒಂದು ದೊಡ್ಡ ದಂಧೆಯಾಗಿ ಬೆಳೆಯುತಿವೆ ಎನ್ನುವುದನ್ನು ಗಮನಿಸಬೇಕಾಗಿದೆ. ಮಕ್ಕಳನ್ನು ಸಂರಕ್ಷಿಸಲು ತಂದೆ ತಾಯಿಗಳಿದ್ದಾರೆ. ಅದೇ ವೃದ್ಧರನ್ನು ಸಂರಕ್ಷಿಸಲು ಯಾರಿದ್ದಾರೆ?. ವೃದ್ಧರಿಗೆ ವಿಮಾ ಸೌಲಭ್ಯಗಳು ಸಿಗುವುದಿಲ್ಲ. ಡ್ರೈವಿಂಗ್ ಲೈಸನ್ಸ್‌ಗಳೂ ಸಿಗುವುದಿಲ್ಲ. ಇಎಂಐ ವ್ಯವಸ್ಥೆಯೂ ಅವರಿಗೆ ಅನ್ವಯವಾಗುವುದಿಲ್ಲ. ಆದರೆ ಅವರು ಖರೀದಿಸುವ ಪ್ರತಿ ವಸ್ತುಗಳ ಮೇಲೂ ತೆರಿಗೆಗಳನ್ನು ಹಾಕಲಾಗುತ್ತದೆ. ಕೊರೋನ ದಿನಗಳಲ್ಲಿ ವೃದ್ಧರ ಸ್ಥಿತಿ ಅತ್ಯಂತ ಆತಂಕಕಾರಿಯಾಗಿತ್ತು. ಆಸ್ಪತ್ರೆಗಳಲ್ಲಿ ಶವವಾಗಿ ಮಲಗಿದ ತಂದೆಯ ಮೃತದೇಹವನ್ನು ಕೊಂಡೊಯ್ಯಲೂ ಹಿಂದೇಟು ಹಾಕಿದ ಪ್ರಕರಣಗಳು ಸಾವಿರಾರು ಇವೆ. ವೃದ್ಧರಿಂದ ಕೊರೋನ ಹಬ್ಬುತ್ತದೆ ಎಂದು ಅವರನ್ನು ಸಮಾಜ ಒಂಟಿಯಾಗಿಸಿತು. ಕೊರೋನ ಸೋಂಕಿತರನ್ನು ಏಕಾಂಗಿಯಾಗಿ ಬಿಟ್ಟು ಅವರನ್ನು ಸಾವಿಗೆ ಒಪ್ಪಿಸಿದರು ಮತ್ತು ಇದಕ್ಕಾಗಿ ಸಣ್ಣ ಪಶ್ಚಾತ್ತಾಪವೂ ನಮ್ಮಲ್ಲಿರಲಿಲ್ಲ.

ವೃದ್ಧರು ಏಕಾಏಕಿ ಆಕಾಶದಿಂದ ಉದುರಿ ಬಿದ್ದವರಲ್ಲ. ನಾವಿಂದು ಬದುಕುತ್ತಿರುವುದು ಈ ಹಿರಿಯರ ಹಂಗಿನಲ್ಲಿ. ಅವರು ತಮ್ಮ ಯೌವನಾವಸ್ಥೆಯಲ್ಲಿ ಈ ನಾಡನ್ನು ಕಟ್ಟಿದರು ಮತ್ತು ಅದನ್ನು ನಮ್ಮ ಕೈಗಿತ್ತು ಈಗ ವಿಶ್ರಾಂತಿಯನ್ನು ಬಯಸುತ್ತಿದ್ದಾರೆ. ಅವರ ಚಿಂತನೆಗಳು, ದುಡಿಮೆ, ಬೆವರು, ಹಣ ಎಲ್ಲವೂ ಇಂದು ನಾವು ಬದುಕುತ್ತಿರುವ ಸಮಾಜವನ್ನು ರೂಪಿಸಿದೆ. ಆದುದರಿಂದ ಅವರ ನಿವೃತ್ತ ಬದುಕನ್ನು ಅತ್ಯುತ್ತಮಗೊಳಿಸುವುದು ಸಮಾಜದ, ಸರಕಾರದ ಕರ್ತವ್ಯವಾಗಿದೆ. ವೃದ್ಧರು ರಾಜಕೀಯದಲ್ಲಿ ನಿರ್ಣಾಯಕ ಪಾತ್ರವಹಿಸುವುದಿಲ್ಲ ಎನ್ನುವ ಕಾರಣಕ್ಕೋ ಏನೋ, ವೃದ್ಧರಿಗಾಗಿ ಬಜೆಟ್‌ನಲ್ಲಿ ದೊಡ್ಡ ಹಣವನ್ನು ಮೀಸಲಾಗಿಡುವುದಿಲ್ಲ. ರೈಲು ಬಸ್ಸಿನಲ್ಲಿ ಫ್ರೀಪಾಸನ್ನು ಹೊರತು ಪಡಿಸಿದಂತೆ ಅವರಿಗೆ ಯಾವ ಭದ್ರತೆಯನ್ನೂ ಸರಕಾರ ನೀಡುತ್ತಿಲ್ಲ. ಆದುದರಿಂದಲೇ ಹೆಚ್ಚಿನ ವೃದ್ಧರು ತೀವ್ರ ಆಘಾತಕ್ಕೊಳಗಾಗಿ, ಕುಟುಂಬದಿಂದ ನಿರ್ಲಕ್ಷಿತರಾಗಿ ಖಿನ್ನತೆಗೆ ಒಳಗಾಗುತ್ತಾರೆ.

ಒಂಟಿಯಾಗಿ ದಿನದಿಂದ ದಿನಕ್ಕೆ ಕರಗುತ್ತಾ ಇಲ್ಲವಾಗಿ ಬಿಡುತ್ತಾರೆ. ‘ಹಳೆ ಬೇರು, ಹೊಸ ಚಿಗುರು- ಮರ ಸೊಬಗು’ ಎನ್ನುವ ಮಾತೊಂದಿಗೆ. ಹಿರಿಯರಿಲ್ಲದ ಸಮಾಜವೆಂದರೆ, ಬೇರಿಲ್ಲದ ಮರದಂತೆ. ಹಿರಿಯರ ಸಂಸರ್ಗದ ಜೊತೆಗೆ ನಮ್ಮ ಎಳೆಯ ಮಕ್ಕಳು ಬೆಳೆಯಬೇಕು. ಅವರ ಅನುಭವದ ಮೂಸೆಯಲ್ಲಿ ನಮ್ಮ ಮಕ್ಕಳ ಚಿಂತನೆಗಳು ಅರಳಬೇಕು. ಈ ನಿಟ್ಟಿನಲ್ಲಿ ಕುಟುಂಬದಲ್ಲಿ ವೃದ್ಧರಿಗೆ ಹೆಚ್ಚಿನ ಭದ್ರತೆ ನೀಡುವುದಕ್ಕಾಗಿ ಸರಕಾರ ವೃದ್ಧರಿಗಾಗಿ ವಿಶೇಷ ನೀತಿಯನ್ನು ಜಾರಿಗೊಳಿಸಬೇಕು. ಹಾಗೆಯೇ ಅವರ ಹಕ್ಕುಗಳ ರಕ್ಷಣೆಗಾಗಿ ಬಜೆಟ್‌ನಲ್ಲಿ ವಿಶೇಷ ಅನುದಾನವನ್ನು ಎತ್ತಿಡಬೇಕು. ಈ ದೇಶದಲ್ಲಿ ವೃದ್ಧರೂ ಸಹನೀಯವಾಗಿ ಬದುಕುವಂತಹ ವಾತಾವರಣ ನಿರ್ಮಾಣವಾಗಬೇಕು. ಇಂದು ವೃದ್ಧರಿಗಾಗಿ ನಾವು ಜಾರಿಗೊಳಿಸುವ ನೀತಿಗಳೇ ಮುಂದೆ ನಾವು ವೃದ್ಧರಾದಾಗ ನಮ್ಮನ್ನು ಕಾಪಾಡುತ್ತವೆ ಎನ್ನುವ ವಿವೇಕ ಯುವಕರಲ್ಲಿ ಇರಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News