ಪುತ್ತೂರು: ಜೀಪ್- ಆಟೋ ರಿಕ್ಷಾ ಮುಖಾಮುಖಿ ಢಿಕ್ಕಿ; ಐವರಿಗೆ ಗಂಭೀರ ಗಾಯ
Update: 2022-01-29 13:01 IST
ಪುತ್ತೂರು, ಜ.29: ಜೀಪ್ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ಕೆಯ್ಯೂರು ಗ್ರಾಮದ ಪೊಯ್ಯೋಳೆ ಎಂಬಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ರಿಕ್ಷಾದಲ್ಲಿದ್ದ ಪೊಯ್ಯೋಳೆ ನಿವಾಸಿಗಳಾದ ಪ್ರವೀಣ್, ಗುರು, ಹರ್ಷಿತ್, ಲೀಲಾ ಹಾಗೂ ಲಕ್ಷ್ಮೀ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರೆಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ.
ಕೆಯ್ಯೂರಿನಿಂದ ದೇರ್ಲ ಕಡೆಗೆ ಹೋಗುತ್ತಿದ್ದ ಜೀಪ್ ಮತ್ತು ದೇರ್ಲ ಕಡೆಯಿಂದ ಕೆಯ್ಯೂರಿನತ್ತ ತೆರಳುತ್ತಿದ್ದ ಆಟೋ ರಿಕ್ಷಾ ಮುಖಾಮುಖಿ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರಾವಸ್ಥೆಯಲ್ಲಿದ್ದ ಪ್ರವೀಣ್ ಮತ್ತು ಗುರು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಲ್ಲಿ ಆಟೋ ರಿಕ್ಷಾ ಹಾಗೂ ಜೀಪ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.