ಅಕ್ರಮ ಮರಗಳ್ಳತನ ಪತ್ತೆ ಹಚ್ಚಿದ್ದೇ ತಪ್ಪು: ಅರಣ್ಯಾಧಿಕಾರಿಯ ವರ್ಗಾವಣೆ ಮಾಡಿಸಿದ ಬೆಳ್ತಂಗಡಿ ಶಾಸಕ ?
ಬೆಳ್ತಂಗಡಿ, ಜ.29: ತನ್ನ ಆಪ್ತನ ಅಕ್ರಮ ಮರಗಳ್ಳತನ ಪತ್ತೆ ಹಚ್ಚಿದ ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮುಖ್ಯಮಂತ್ರಿಗೆ ಪತ್ರ ಬರೆದು ವರ್ಗಾವಣೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಶಾಸಕ ಹರೀಶ್ ಪೂಂಜಾ ಅವರು ಮುಖ್ಯಮಂತ್ರಿಗೆ ಬರೆದಿದ್ದೆನ್ನಲಾದ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಶಾಸಕರ ಈ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಉಡುಪಿ ಅರಣ್ಯ ಸಂಚಾರಿ ದಳದಲ್ಲಿ ವಲಯ ಅರಣ್ಯಾಧಿಕಾರಿಯಾಗಿದ್ದು ಮಂಗಳೂರು ಅರಣ್ಯ ಸಂಚಾರಿ ದಳದಲ್ಲಿ ನಿಯೋಜನೆಯ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಬೆಳ್ತಂಗಡಿ ಮೂಲದವರಾಗಿರುವ ಸಂಧ್ಯಾ ಅವರೇ ವರ್ಗಾವಣೆಯಾದ ಅಧಿಕಾರಿ. ಇವರನ್ನು ಏಕಾಏಕಿ ಮಂಗಳೂರಿನಿಂದ ಬೀದರಿನ ಅರಣ್ಯ ತರಬೇತಿ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ. ಇವರನ್ನು ವರ್ಗಾವಣೆ ಮಾಡುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಮುಖ್ಯಮಂತ್ರಿಗೆ ಬರೆದಿದ್ದೆನ್ನಲಾದ ಪತ್ರ ಇದೀಗ ಬಹಿರಂಗಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೆಲ ದಿನಗಳ ಹಿಂದೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ಆಪ್ತ ಎನ್ನಲಾಗಿರುವ ಸ್ವಜಾತಿ ಬಂಧವನಾಗಿರುವ ಪಡಂಗಡಿಯ ಮರದ ವ್ಯಾಪಾರಿಯೊಬ್ಬರಿಗೆ ಸೇರಿದ ಭಾರೀ ಪ್ರಮಾಣದ ಅಕ್ರಮ ಮರಗಳನ್ನು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದರು. ಸಂಧ್ಯಾ ಈ ದಾಳಿಯ ನೇತೃತ್ವ ವಹಿಸಿದ್ದರು. ಈ ಪ್ರಕರಣದಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಸಂಧ್ಯಾ ಪ್ರಕರಣ ದಾಖಲಿಸಿದ್ದರೆನ್ನಲಾಗಿದೆ. ಇದಾದ ಕೆಲವೇ ದಿನಗಳಲ್ಲಿ ಸಂಧ್ಯಾರನ್ನು ಯಾವುದೇ ಕಾರಣ ನೀಡದೆ ಏಕಾಏಕಿ ಬೀದರಿಗೆ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಕಲ್ಮಂಜ ಗ್ರಾಮದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಮರದ ವ್ಯಾಪಾರಿ, ಶಾಸಕರ ಆಪ್ತ ಬಾಲಕೃಷ್ಣ ಶೆಟ್ಟಿ ಎಂಬಾತ ಕೋಟ್ಯಂತರ ರೂ. ಬೆಲೆಬಾಳುವ ಮರಗಳನ್ನು ಕಡಿದು ಹಾಕಿದ್ದ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಖಚಿತ ಮಾಹಿತಿಯ ಮೇರೆಗೆ ಹಿರಿಯ ಅಧಿಕಾರಿಗಳ ಸೂಚನೆಯಂತೆ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಸಂಧ್ಯಾ ನೇತೃತ್ವದಲ್ಲಿ ಇಲ್ಲಿಗೆ ದಾಳಿ ನಡೆಸಿದ್ದರು. ಈ ಪ್ರಕರಣದಲ್ಲಿ ಬೆಳ್ತಂಗಡಿಯ ಮೂವರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕರ್ತವ್ಯ ಲೋಪಕ್ಕಾಗಿ ಕೆಲಸದಿಂದ ಅಮಾನತುಗೊಳಿಸಲಾಗಿತ್ತು ಎಂಬ ಮಾಹಿತಿಯೂ ಇದೀಗ ಲಭ್ಯವಾಗುತ್ತಿದೆ. ಮೂವರು ಅಧಿಕಾರಿಗಳ ಅಮಾನತಾಗುತ್ತಿದ್ದಂತೆಯೇ ಮುಖ್ಯಮಂತ್ರಿಗೆ ಪತ್ರ ಬರೆದ ಶಾಸಕ ಹರೀಶ್ ಪೂಂಜಾ ಅವರು ಸಂಧ್ಯಾರನ್ನು ಬೀದರಿಗೆ ವರ್ಗಾವಣೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಶಾಸಕರಿಂದ ಅಧಿಕಾರ ದುರುಪಯೋಗ, ದ್ವೇಷ ಸಾಧನೆ
ಮರಗಳ್ಳತನವನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ ಏಕೈಕ ಕಾರಣಕ್ಕಾಗಿ ಉಡುಪಿ ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿ ಸಂಧ್ಯಾರನ್ನು ಬೀದರ್ ಜಿಲ್ಲೆಗೆ ವರ್ಗಾವಣೆ ಮಾಡುವ ಮೂಲಕ ಶಾಸಕ ಹರೀಶ್ ಪೂಂಜಾ ದ್ವೇಷ ಸಾಧನೆ ಮಾಡಿದ್ದಾರೆ. ಅಧಿಕಾರವನ್ನು ದುರುಪಯೋಗಪಡಿಸಿ ಅಧಿಕಾರಿಗಳನ್ನು ಮಟ್ಟಹಾಕುವ ಕ್ರಮ ಅತ್ಯಂತ ಖಂಡನೀಯ. ಇತ್ತೀಚೆಗಷ್ಟೇ ಸಂಘ ಪರಿವಾರದ ನಾಯಕರ ದ್ವೇಷ ಭಾಷಣದ ವಿರುದ್ಧ ಕೇಸ್ ದಾಖಲಿಸಿದ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಸೌಮ್ಯಾ, ಪರಿಷತ್ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮುಖಂಡನೋರ್ವನಿಗೆ ಸೇರಿದ ಅಕ್ರಮ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ ಅಬಕಾರಿ ಇನ್ ಸ್ಪೆಕ್ಟರ್ ಸೌಮ್ಯಾರನ್ನು ವರ್ಗಾವಣೆ ಮಾಡುವ ಮೂಲಕ ದ್ವೇಷ ಸಾಧಿಸಲಾಗಿದೆ. ಇದು ಕಾರ್ಯಾಂಗದ ಮೇಲೆ ಶಾಸಕಾಂಗ ನಡೆಸುವ ದೌರ್ಜನ್ಯವಾಗಿದೆ.
-ಶೇಖರ್ ಲಾಯಿಲ,
ಸಿಪಿಎಂ ಮುಖಂಡ