×
Ad

ಉಡುಪಿ: ಸರಕಾರಿ ನರ್ಮ್ ಬಸ್ ದರ ಏರಿಕೆ ವಿರೋಧಿಸಿ ಪ್ರತಿಭಟನೆ

Update: 2022-01-29 19:00 IST

ಉಡುಪಿ, ಜ.29: ಖಾಸಗಿ ಬಸ್ ಮಾಲಕರ ಒತ್ತಡಕ್ಕೆ ಮಣಿದು ಸರಕಾರಿ ನರ್ಮ್ ಬಸ್ ದರ ಏರಿಕೆ ಮಾಡಿರುವುದನ್ನು ವಿರೋಧಿಸಿ ಸಿಐಟಿಯು ಉಡುಪಿ ತಾಲೂಕಿನ ಸಮಿತಿ ನೇತೃತ್ವದಲ್ಲಿ ನಗರದ ನರ್ಮ್ ಬಸ್ ನಿಲ್ದಾಣದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ತಕ್ಷಣವೇ ನರ್ಮ್ ದರ ಏರಿಕೆಯನ್ನು ವಾಪಾಸು ಪಡೆಯಬೇಕು. ಉಡುಪಿ ನಗರ ಪ್ರದೇಶದ ಎಲ್ಲ ಮಾರ್ಗಗಳಲ್ಲಿ ನರ್ಮ್ ಬಸ್‌ಗಳನ್ನು ಹೆಚ್ಚಿನ ಸಂಖ್ಯೆ ಯಲ್ಲಿ ಆರಂಭಿಸಬೇಕು ಮತ್ತು ಗ್ರಾಮಾಂತರ ಎಲ್ಲಾ ರೂಟ್ಗಳಿಗೆ ಬಸ್ ಬಿಡಬೇಕು. ಎಲ್ಲಾ ಬಸ್ ನಿಲ್ದಾಣಗಳಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕರನ್ನು ಒಟ್ಟು ಸೇರಿಸಿ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.

ಬಳಿಕ ನಿಲ್ದಾಣದಾಧಿಕಾರಿ ಕೆ.ರಾಮಚಂದ್ರ ಅವರ ಮೂಲಕ ಮಂಗಳೂರು ವಿಭಾಗೀಯ ಅಧಿಕಾರಿಗೆ ಮನವಿಯನ್ನು ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸಿಐಟಿಯುನ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಖಜಾಂಚಿ ಶಶಿಧರ್ ಗೊಲ್ಲ, ಸಿಐಟಿಯು ಉಡುಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್., ಮುಖಂಡರಾದ ಉಮೇಶ್ ಕುಂದರ್, ನಳಿನಿ, ಸಂಜೀವ ಬಳ್ಕೂರು, ವಿದ್ಯಾರಾಜ್, ಸದಾಶಿವ ಬ್ರಹ್ಮಾವರ, ಸಾಮಾಜಿಕ ಕಾರ್ಯಕರ್ತ ಆನಂದ ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು.

9 ರೂಟ್‌ನಲ್ಲಿ ನರ್ಮ್ ಓಡಾಟ

ಉಡುಪಿ ನಗರದ ಗರಡಿಮಜಲು, ಪಡುಕೆರೆ, ಅಲೆವೂರು, ಹಂಪನಕಟ್ಟೆ, ಹೂಡೆ, ಮರ್ಣೆ, ಕೆಮ್ಮಣ್ಣು ಹೂಡೆ, ಸನ್ಯಾಸಿಮಠ, ಜಿಲ್ಲಾಧಿಕಾರಿ ಕಚೇರಿ ಮಾರ್ಗದಲ್ಲಿ ಒಟ್ಟು ಒಂಭತ್ತು ನರ್ಮ್ ಬಸ್‌ಗಳು 44 ಟ್ರಿಪ್‌ಗಳಲ್ಲಿ ಓಡಾಟ ನಡೆಸುತ್ತಿದೆ ಎಂದು ನರ್ಮ್ ನಿಲ್ದಾಣಾಧಿಕಾರಿ ಕೆ.ರಾಮಚಂದ್ರ ತಿಳಿಸಿದ್ದಾರೆ.ಈ ಹಿಂದೆ ನಗರದ 18 ರೂಟ್‌ಗಳಲ್ಲಿ ನರ್ಮ್ ಬಸ್‌ಗಳು ಸಂಚರಿಸುತ್ತಿದ್ದವು. ಕ್ರಮೇಣ ಬಸ್ ಸಂಖ್ಯೆ ಇಳಿಕೆ ಮಾಡಿ ಇದೀಗ 9ಕ್ಕೆ ಬಂದು ನಿಲ್ಲಿಸಲಾಗಿದೆ. ಉಳಿದ ಬಸ್‌ಗಳನ್ನು ಹಾಸನ ಸೇರಿದಂತೆ ಹೊರಜಿಲ್ಲೆಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News