×
Ad

ಬಿರುವೆರ್ ಕಾಪು ಸೇವಾ ಸಮಿತಿ ಉದ್ಘಾಟನೆ

Update: 2022-01-29 20:05 IST

ಕಾಪು: ಸಾಮಾಜಿಕ ಜಾಲತಾಣಗಳ ಮೂಲಕ ಹಾದಿ ತಪ್ಪುವ ಯುವಜನಾಂಗಕ್ಕೆ ಬಿರುವೆರ್ ಕಾಪು ಸೇವಾ ಸಮಿತಿ ಮಾದರಿಯಾಗಿದೆ ಎಂದು ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದತೀರ್ಥ ಸಾಮೀಜಿ ಹೇಳಿದರು. 

ಶುಕ್ರವಾರ ಮೂಳೂರು ಬಿಲ್ಲವರ ಸಂಘದಲ್ಲಿ ಜರಗಿದ ಬಿರುವೆರ್ ಕಾಪು ಸೇವಾ ಸಮಿತಿ ಉದ್ಘಾಟನೆ, ಸಾಧಕರಿಗೆ ಸನ್ಮಾನ, ಸಹಾಯ ಹಸ್ತಾಂತರ ವಿತರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಬ್ರಹ್ಮಶ್ರೀ ನಾರಾಯಣಗುರುಗಳ ಆಶೀರ್ವಾದ, ವೀರ ಪುರುಷರಾದ ಕೋಟಿ - ಚೆನ್ನಯರು, ಕಾಂತಾಬಾರೆ - ಬೂದಾಬಾರೆಯರ ಅನುಗ್ರಹ, ಕುದ್ರೋಳಿ ಗೋಕರ್ಣನಾಥೇಶ್ವರ ಮತ್ತು ಕಟಪಾಡಿ ಶ್ರೀ ವಿಶ್ವನಾಥ ದೇವರ ಅನುಗ್ರಹದೊಂದಿಗೆ ಬಿರುವೆರ್ ಕಾಪು ಸೇವಾ ಸಮಿತಿ ಉನ್ನತಿಯ ಪಥವನ್ನು ಏರುವಂತಾಗಲಿ. ಈ ತಂಡ ಮೂರು ವರ್ಷದಲ್ಲಿ ಹತ್ತಾರು ಸೇವಾ ಕಾರ್ಯಗಳನ್ನು ನಡೆಸುವ ಮೂಲಕ ಸಮಾಜದ ಅಶಕ್ತರ ಪಾಲಿಗೆ ದಾರಿದೀಪವಾಗುವ ಪ್ರಯತ್ನ ನಡೆಸಿದೆ. ಈ ಪ್ರಯತ್ನ ನಿರಂತರವಾಗಿರಲಿ, ಸಮಾಜದ ಶ್ರೇಷ್ಠ ಸಂಸ್ಥೆಯಾಗಿ ಮೂಡಿ ಬರಲಿ ಎಂದು ಹಾರೈಸಿದರು. 

ಬಿರುವೆರ್ ಕಾಪು ಸೇವಾ ಸಮಿತಿಯ ಉಪಾಧ್ಯಕ್ಷ ಗಣೇಶ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಪೂಜಾರಿ ರಾಜಮನೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬನ್ನಂಜೆ ಬಾಬು ಅಮೀನ್, ನ್ಯಾಯವಾದಿ ಸಂಕಪ್ಪ ಅಮೀನ್, ಪೊಲೀಸ್ ವೃತ್ತ ನಿರೀಕ್ಷಕ ಪ್ರಕಾಶ್ ಅವರನ್ನು ಸಮ್ಮಾನಿಸಲಾಯಿತು. ಕಾಪು ಬಿಲ್ಲವರ ಸಹಾಯಕ ಸಂಘದ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ, ಮೂಳುರು ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಮುಂಬಯಿ ಸಮಿತಿ ಅಧ್ಯಕ್ಷ ಎನ್.ಜಿ. ಪೂಜಾರಿ ಉಪಸ್ಥಿತರಿದ್ದರು.

ಬಿರುವೆರ್ ಕಾಪು ಸೇವಾ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಪುರುಷೋತ್ತಮ ಸಾಲ್ಯಾನ್ ಸ್ವಾಗತಿಸಿ, ರಾಕೇಶ್ ಕುಂಜೂರು ಪ್ರಸ್ತಾವನೆಗೈದರು. ಅತಿಥ್ ಸುವರ್ಣ ಪಾಲಮೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಿಕ್ಕಿ ಪೂಜಾರಿ ಮಡುಂಬು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News