ಒಂದು ಮಗವೂ ಪೊಲೀಯೋ ಲಸಿಕೆಯಿಂದ ಹೊರಗುಳಿಯದಂತೆ ಕ್ರಮ: ಎಡಿಸಿ ಅಬೀದ್ ಗದ್ಯಾಳ್
ಉಡುಪಿ, ಡಿ.21: ಜಿಲ್ಲೆಯಲ್ಲಿ 5 ವರ್ಷದೊಳಗಿನ 75395 ಮಕ್ಕಳನ್ನು ಗುರುತಿಸಲಾಗಿದ್ದು ಇದಕ್ಕಾಗಿ 657 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಪಲ್ಸ್ ಪೋಲಿಯೊ ಲಸಿಕಾದಿನದಂದು ಲಸಿಕೆಯಿಂದ ಹೊರಗುಳಿದ ಮಕ್ಕಳಿಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಲಸಿಕೆ ನೀಡಲಿದ್ದಾರೆ. ಯಾವುದೇ ಒಂದು ಮಗುವೂ ಕೂಡಾ ಲಸಿಕೆ ನೀಡುವುದ ರಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಇವರ ಸಂಯುಕ್ತ ಆಶ್ರಯದಲ್ಲಿ ರವಿವಾರ ಉಡುಪಿ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಆಯೋಜಿಸಲಾದ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭಾರತವು ಪೋಲಿಯೋ ರೋಗ ಮುಕ್ತವಾಗಿದ್ದರೂ ನೆರೆಯ ರಾಷ್ಟ್ರಗಳಲ್ಲಿ ಪೋಲಿಯೋ ಪ್ರಕರಣಗಳು ಇನ್ನೂ ಜೀವಂತವಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನವನ್ನು ದೇಶಾ ದ್ಯಂತ ವ್ಯಾಪಕವಾಗಿ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಪೋಲಿಯೊ ಲಸಿಕೆಯ ಎರಡು ಹನಿಗಳು ಒಂದು ಮಗುವಿನ ಜೀವ ಉಳಿಸಬಲ್ಲದು. ಪೋಲಿಯೊದಿಂದಾಗಿ ಮಗುವು ಅಂಗವೈಕಲ್ಯ ಹೊಂದಿದಾಗ ಆ ಮಗುವಿನ ಹೆತ್ತವರು ಮತ್ತು ಕುಟುಂಬವು ಶಾಶ್ವತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಭಾರತದಲ್ಲಿ ಶೂನ್ಯ ಪೋಲಿಯೊ ಪ್ರಕರಣಗಳು ದಾಖಲಾಗಿದ್ದರೂ ಮುಂದಿನ ದಿನಗಳಲ್ಲಿ ಯಾವುದೇ ಮಗುವೂ ಪೋಲಿಯೊ ರೋಗಕ್ಕೆ ತುತ್ತಾಗಬಾರದು ಎನ್ನುವ ಕಾರಣಕ್ಕೆ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನವಜಾತ ಶಿಶುಗಳಿಗೆ ಪೋಲಿಯೊ ಲಸಿಕೆಗಳನ್ನು ನೀಡಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಜಿಲ್ಲಾ ಸರ್ಜನ್ ಡಾ.ಅಶೋಕ್ ಕುಮಾರ್, ಬೆಂಗಳೂರು ಆರೋಗ್ಯ ಇಲಾಖೆ ಉಪನಿರ್ದೇಶಕ ಡಾ.ಸುರೇಶ್ ಶಾಸ್ತ್ರಿ, ರೋಟೇರಿಯನ್ ಸುಬ್ರಹ್ಮಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನುರಾಧಾ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜ್ಯೋತ್ಸ್ನಾ ಬಿ.ಕೆ. ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಎಚ್. ಕಾರ್ಯಕ್ರಮ ನಿರೂಪಿಸಿ, ಜೆ.ಸೂರಜ್ ಕುಮಾರ್ ವಂದಿಸಿದರು.
‘ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನವು ವಿಶ್ವದ ಯಶಸ್ವಿ ಅಭಿಯಾನವಾಗಿದ್ದು, 2011ರಲ್ಲಿ ಕಟ್ಟ ಕಡೆಯ ಪೋಲಿಯೊ ಪ್ರಕರಣ ದಾಖಲಾಗಿದ್ದು ಆ ಬಳಿಕ ಭಾರತದಲ್ಲಿ ಯಾವುದೇ ಪೋಲಿಯೊ ಪ್ರಕರಣಗಳು ದಾಖಲಾಗಿಲ್ಲ. ಸತತ ಮೂರು ವರ್ಷಗಳವರೆಗೆ ಪೋಲಿಯೊ ಪ್ರಸರಣವನ್ನು ಯಶಸ್ವಿಯಾಗಿ ತಡೆಗಟ್ಟಿದ ಕಾರಣ 2014ರಂದು ವಿಶ್ವ ಆರೋಗ್ಯ ಸಂಸ್ಥೆ ಯು ಅಧಿಕೃತವಾಗಿ ಭಾರತವನ್ನು ಪೋಲಿಯೊ ಮುಕ್ತ ರಾಷ್ಟ್ರವೆಂದು ಘೋಷಿ ಸಿದೆ. ಎಲ್ಲರ ಸಹಕಾರದಿಂದ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನವು ಯಶಸ್ವಿಯಾಗಿದ್ದು, ಮುಂದೆಯೂ ಇದೇ ರೀತಿಯಾಗಿ ಪೋಲಿಯೊ ಪ್ರಸರಣ ವನ್ನು ತಡೆಗಟ್ಟಿ ವಿಶ್ವಕ್ಕೆ ಮಾದರಿಯಾಗಬೇಕು’
-ಅಬೀದ್ ಗದ್ಯಾಳ್, ಅಪರ ಜಿಲ್ಲಾಧಿಕಾರಿ, ಉಡುಪಿ