ಮಲ್ಪೆ| ಪಾಕಿಸ್ತಾನಕ್ಕೆ ನೌಕಾಪಡೆಯ ರಹಸ್ಯ ಮಾಹಿತಿ ರವಾನೆ ಪ್ರಕರಣ: ಮತ್ತೋರ್ವ ಆರೋಪಿ ಗುಜರಾತಿನ ಹೀರೇಂದ್ರ ಕುಮಾರ್ ಬಂಧನ
ಹೀರೇಂದ್ರ ಕುಮಾರ್
ಉಡುಪಿ: ಮಲ್ಪೆ ಕೊಚ್ಚಿನ್ ಶಿಪ್‌ಯಾರ್ಡ್‌ನ ನೌಕರರು ಭಾರತದ ನೌಕಾಸೇನೆಗೆ ಸಂಬಂಧಪಟ್ಟ ವಿವಿಧ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಶೇರ್ ಮಾಡಿ, ಅಕ್ರಮ ಲಾಭ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಗುಜರಾತಿನ ಆನಂದ ತಾಲೂಕಿನ ಕೈಲಾಸ್ ನಗರಿಯ ಭರತ್ ಕುಮಾರ್ ಖಡಯಾತ ಎಂಬವರ ಪುತ್ರ ಹೀರೇಂದ್ರ ಕುಮಾರ್ (34) ಬಂಧಿತ ಆರೋಪಿ. ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೇರಿದೆ. ಕಳೆದ ನ.21ರಂದು ಇದೇ ಪ್ರಕರಣದಲ್ಲಿ ಆರೋಪಿಗಳಾದ ಉತ್ತರ ಪ್ರದೇಶದ ರೋಹಿತ್ ಮತ್ತು ಸಂತ್ರಿ ಎಂಬವರನ್ನು ಬಂಧಿಸಲಾಗಿತ್ತು. ಇದೀಗ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ರೋಹಿತ್ ಮತ್ತು ಸಂತ್ರಿ ಮಲ್ಪೆಯ ಶಿಪ್‌ಯಾರ್ಡ್‌ನ ಸಹಗುತ್ತಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಇವರು ಭಾರತದ ನೌಕಾಸೇನೆಗೆ ಸಂಬಂಧಪಟ್ಟ ಹಡಗುಗಳ ನಂಬರ್‌ಗಳ ಗೌಪ್ಯ ಪಟ್ಟಿ, ಇತರ ಗೌಪ್ಯ ಮಾಹಿತಿಯನ್ನು ವಾಟ್ಸಾಪ್ ಮೂಲಕ ಪಾಕಿಸ್ತಾನಕ್ಕೆ ಶೇರ್ ಮಾಡಿ, ಅಕ್ರಮ ಲಾಭ ಪಡೆದಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಈ ಪ್ರಕರಣದ ತನಿಖೆ ಮಂದುವರಿಸಿದ ಪ್ರಕರಣದ ತನಿಖಾಧಿಕಾರಿ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಹರ್ಷ ಪ್ರಿಯಂವದಾ ನೇತೃತ್ವದ ತಂಡ ಆರೋಪಿಗಳಿಗೆ ಮೊಬೈಲ್ ಸಿಮ್ ಒದಗಿಸಿದ ಆಧಾರದ ಮೇಲೆ ಹೀರೇಂದ್ರ ಕುಮಾರ್‌ನನ್ನು ಡಿ.21ರಂದು ಬಂಧಿಸಿದೆ. ಈತ ಹಣಕ್ಕಾಗಿ ತನ್ನ ಹೆಸರಿನಲ್ಲಿ ಮೊಬೈಲ್ ಸಿಮ್ ತೆಗೆದು ಆರೋಪಿಗೆ ನೀಡಿದ್ದನು. ಈತನನ್ನು ಕೂಡ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಪಾಕಿಸ್ತಾನಕ್ಕೆ ಮಾಹಿತಿ ರವಾನಿಸಿರುವುದು ದೃಢ: ಎಸ್ಪಿ
ಈ ಪ್ರಕರಣದ ಆರಂಭದಲ್ಲಿ ಆರೋಪಿಗಳು ಶಿಪ್ ಮತ್ತು ಇತರ ಮಾಹಿತಿ ಗಳನ್ನು ಹಣಕ್ಕಾಗಿ ಶೇರ್ ಮಾಡಿರುವುದು ಪಾಕಿಸ್ತಾನಕ್ಕೆ ಇರಬಹುದೇ ಎಂಬ ಬಗ್ಗೆ ಸಂಶಯ ಇತ್ತು. ಈ ಕುರಿತು ತೀವ್ರ ತನಿಖೆ ನಡೆಸಿದಾಗ ಆರೋಪಿ ಗಳು ಶೇರ್ ಮಾಡಿರುವ ಮಾಹಿತಿಗಳು ಪಾಕಿಸ್ತಾನ ದೇಶಕ್ಕೆ ರವಾನೆ ಆಗಿರುವುದು ದೃಢಪಟ್ಟಿದೆ. ತನಿಖೆಯಲ್ಲಿ ದೊರೆತ ತಾಂತ್ರಿಕ ಸಾಕ್ಷ್ಯಗಳಿಂದ ಅದು ಸಾಬೀತಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಇದೀಗ ಬಂಧಿತ ಆರೋಪಿ ಹೀರೇಂದ್ರ ಕುಮಾರ್, ಆರೋಪಿಗಳು ಮಾಹಿತಿಗಳನ್ನು ಪಾಕಿಸ್ತಾನದೊಂದಿಗೆ ಷೇರ್ ಮಾಡಲು ಬಳಸಿರುವ ಸಿಮ್ ನೀಡಿರುವುದಲ್ಲದೆ, ಈ ಸಿಮ್ ಮೂಲಕ ವಾಟ್ಸಾಪ್ ಆ್ಯಕ್ಯಿವ್ ಮಾಡಲು ಪಾಕಿಸ್ತಾನ ದಲ್ಲಿರುವ ವ್ಯಕ್ತಿಗಳಿಗೆ ಓಟಿಪಿ ಶೇರ್ ಮಾಡಿರುವುದು ಕೂಡ ಈತನೇ. ಈತ ಈಗಾಗಲೇ ಬಂಧಿತರಾಗಿರುವ ಇಬ್ಬರು ಆರೋಪಿಗಳಿಗೆ ತಾಂತ್ರಿಕ ಸಲಹೆಗಳನ್ನು ನೀಡಿದ್ದಾನೆ ಎಂಬುದು ಸ್ಪಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಪ್ರಕರಣ ಭಾರತದ ಆಂತರಿಕ ಭದ್ರತೆ ಸಂಬಂಧಪಟ್ಟಿರುವುದರಿಂದ ಬಂಧಿತ ಎಲ್ಲ ಆರೋಪಿಗಳ ವಿರುದ್ಧ ಯುಎಪಿಎ ಕಾಯಿದೆಯಡಿ ಸೆಕ್ಷನ್‌ಗಳನ್ನು ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
‘ನಿಮ್ಮ ಪರಿಸರದಲ್ಲಿ ಈ ರೀತಿ ಸಂಯಾಶಾಸ್ಪದ ಚಟುವಟಿಕೆಗಳಲ್ಲಿ ತೊಡಗಿ ಕೊಂಡಿರುವ ವ್ಯಕ್ತಿಗಳು ಕಂಡುಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಬೀಚ್, ಬಂದರು, ಹೋಮ್ ಸ್ಟೇ, ರೆಸಾರ್ಟ್‌ಗಳಲ್ಲಿ ವಿದೇಶಿ ಗಳು ಬಂದರೆ, ಕೆಲವರು ಕೆಲಸ ಕೇಳಿಬಂದರೇ ಕೂಡಲೇ ಮಾಹಿತಿ ನೀಡಬೇಕು’
-ಹರಿರಾಂ ಶಂಕರ್, ಎಸ್ಪಿ ಉಡುಪಿ