‌ಉಕ್ರೇನ್‌ ಮೇಲೆ ಯುದ್ಧ ಬಯಸುತ್ತಿಲ್ಲ, ಆದರೆ ಹಿತಾಸಕ್ತಿಗೆ ಧಕ್ಕೆಯಾದರೆ ಸಹಿಸುವುದಿಲ್ಲ: ರಶ್ಯಾ ಕಠಿಣ ಸಂದೇಶ

Update: 2022-01-29 16:37 GMT
 ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್

ಮಾಸ್ಕೊ, ಜ.29: ಉಕ್ರೇನ್ ಮೇಲೆ ಯುದ್ಧ ಸಾರಲು ಬಯಸುತ್ತಿಲ್ಲ. ಆದರೆ ದೇಶದ ಹಿತಾಸಕ್ತಿಗೆ ಧಕ್ಕೆಯಾದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ರಶ್ಯಾ ಕಠಿಣ ಸಂದೇಶ ರವಾನಿಸಿದೆ.

ರಶ್ಯಾದ ಮಟ್ಟಿಗೆ ಹೇಳುವುದಾದರೆ, ಯುದ್ಧ ನಡೆಯದು. ನಾವು ಯುದ್ಧ ಬಯಸುತ್ತಿಲ್ಲ. ಆದರೆ ನಮ್ಮ ಹಿತಾಸಕ್ತಿಯ ವಿರುದ್ಧದ ಉದ್ಧಟತನದ ಪ್ರಕ್ರಿಯೆ, ನಿರ್ಲಕ್ಷ್ಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ರಶ್ಯಾದ ವಿದೇಶ ವ್ಯವಹಾರ ಸಚಿವ ಸೆರ್ಗೈ ಲಾವ್ರೋವ್ ರಶ್ಯಾದ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ‌

ಪಾಶ್ಚಿಮಾತ್ಯ ದೇಶಗಳು ರಶ್ಯಾದ ಹಿತಾಸಕ್ತಿಯನ್ನು ಕಡೆಗಣಿಸುತ್ತಿವೆ. ಆದರೆ ರಶ್ಯಾದ ಪ್ರಸ್ತಾವನೆಗೆ ಪ್ರತಿಯಾಗಿ ಅಮೆರಿಕ ಮತ್ತು ನೇಟೊ ಒಕ್ಕೂಟ ನೀಡಿದ ಲಿಖಿತ ಪ್ರತಿಕ್ರಿಯೆಯಲ್ಲಿ ಕನಿಷ್ಟ ಒಂದಿಷ್ಟಾದರೂ ಒಳ್ಳೆ ಅಂಶ ಇದೆ. ಅಮೆರಿಕದ ಪ್ರತಿಕ್ರಿಯೆ ನೇಟೋಗಿಂತ ಉತ್ತಮವಾಗಿದ್ದು ರಶ್ಯಾ ಇದನ್ನು ಪರಿಶೀಲಿಸುತ್ತಿದ್ದು ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸಬೇಕೆಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಿರ್ಧರಿಸಲಿದ್ದಾರೆ. ಮುಂದಿನ ಕೆಲ ವಾರಗಳಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಬ್ಲಿಂಕೆನ್‌ರನ್ನು ತಾನು ಭೇಟಿಯಾಗುವ ಸಾಧ್ಯತೆಯಿದೆ ಎಂದವರು ಹೇಳಿದ್ದಾರೆ.

ಉಕ್ರೇನ್‌ನಲ್ಲಿ ಆಕ್ರಮಣಕಾರಿ ಶಸ್ತ್ರಾಸ್ತ್ರ ವ್ಯವಸ್ಥೆ ಸೇರಿದಂತೆ ಪರಸ್ಪರ ಪಾರದರ್ಶಕ ಕ್ರಮಗಳ ಬಗ್ಗೆ ಅಮೆರಿಕ ಪ್ರಸ್ತಾವಿಸಿದೆ ಎಂದು ರಶ್ಯಾಕ್ಕೆ ಅಮೆರಿಕದ ರಾಯಭಾರಿ ಜಾನ್ ಸುಲಿವಾನ್ ಹೇಳಿದ್ದಾರೆ. ತಮ್ಮ ದೇಶಕ್ಕೆ ಯುದ್ಧದಲ್ಲಿ ಆಸಕ್ತಿಯಿಲ್ಲ ಎಂದು ರಶ್ಯಾದ ನಿಕಟ ಮಿತ್ರನಾಗಿರುವ ಬೆಲಾರೂಸ್‌ನ ಅಧ್ಯಕ್ಷ ಅಲೆಕ್ಸಾಂಡರ್ ಲುಕಶೆಂಕೊ ಹೇಳಿದ್ದು, ಬೆಲಾರೂಸ್ ಅಥವಾ ರಶ್ಯಾದ ಮೇಲೆ ನೇರ ಆಕ್ರಮಣ ನಡೆದರೆ ಆಗ ಸಂಘರ್ಷ ನಡೆಯಬಹುದು ಎಂದಿದ್ದಾರೆ.

ಚೀನಾ ಅಧ್ಯಕ್ಷರೊಂದಿಗೆ ಚರ್ಚಿಸಲಿರುವ ಪುಟಿನ್ ಈ ಮಧ್ಯೆ, ಮುಂದಿನ ವಾರ ಬೀಜಿಂಗ್‌ನಲ್ಲಿ ನಡೆಯುವ ಚಳಿಗಾಲದ ಒಲಿಂಪಿಕ್ಸ್ ಕೂಟದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸುವ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜತೆ ಯುರೋಪ್‌ನ ಭದ್ರತಾ ಸಮಸ್ಯೆಯ ವಿಷಯದಲ್ಲಿ ಸುದೀರ್ಘ ಮಾತುಕತೆ ನಡೆಸಲಿದ್ದಾರೆ ಎಂದು ರಶ್ಯಾದ ಅಧಿಕಾರಿಗಳು ಹೇಳಿದ್ದಾರೆ.

ಅಲ್ಲದೆ ಬುಧವಾರ ಇಟಲಿಯ ಪ್ರಮುಖ ಸಂಸ್ಥೆಗಳ ಸಿಇಒಗಳ ಜತೆ ಸಭೆ ನಡೆಸಿದ್ದ ಪುಟಿನ್, ಮುಂದಿನ ವಾರ ಜರ್ಮನ್ ಉದ್ಯಮಿಗಳ ಜತೆ ಮಾತುಕತೆ ನಡೆಸುವ ಕಾರ್ಯಕ್ರಮವಿದೆ. ಆದರೆ ಜರ್ಮನ್ ಉದ್ಯಮಿಗಳ ಜತೆಗಿನ ಸಭೆಗೆ ಉಕ್ರೇನ್ ಸರಕಾರ ಅಸಮಾಧಾನ ವ್ಯಕ್ತಪಡಿಸಿದೆ. ಉಕ್ರೇನ್‌ಗೆ ಶಸ್ತ್ರಾಸ್ತ್ರ ಒದಗಿಸಲು ಜರ್ಮನ್ ನಿರಾಕರಿಸಿರುವ ಹಿಂದೆ ರಶ್ಯಾದ ತಂತ್ರಗಾರಿಕೆಯಿದೆ ಎಂದು ಉಕ್ರೇನ್ ಆಕ್ಷೇಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News