×
Ad

ಅಮೆರಿಕಕ್ಕೆ ಅಪ್ಪಳಿಸಿದ ಹಿಮ ಚಂಡಮಾರುತ: 5 ರಾಜ್ಯಗಳಲ್ಲಿ ತುರ್ತುಪರಿಸ್ಥಿತಿ ಘೋಷಣೆ

Update: 2022-01-29 22:34 IST
photo:PTI

ನ್ಯೂಯಾರ್ಕ್, ಜ.29: ಕಳೆದ 4 ವರ್ಷಗಳಲ್ಲೇ ಪ್ರಥಮ ಬಾರಿಗೆ ಅಮೆರಿಕದ ಪೂರ್ವ ಕರಾವಳಿಗೆ ಭಾರೀ ಹಿಮ ಚಂಡಮಾರುತ ಅಪ್ಪಳಿಸಿದ್ದು ಇದುವರೆಗೆ ನ್ಯೂಯಾರ್ಕ್, ನ್ಯೂಜೆರ್ಸಿ, ಮೇರಿಲ್ಯಾಂಡ್, ರೋಡ್ ಐಲ್ಯಾಂಡ್ ಮತ್ತು ವರ್ಜೀನಿಯಾ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ವರದಿಯಾಗಿದೆ.

ಫ್ಲೋರಿಡಾ ರಾಜ್ಯದಲ್ಲೂ ಅತ್ಯಂತ ಚಳಿಯ ಹವೆಯಿದೆ. ದೇಶದ ಪೂರ್ವ ಕರಾವಳಿಗೆ ಅಪ್ಪಳಿಸುತ್ತಿರುವ ಹಿಮ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿದೆ. ಜತೆಗೆ ಬಲವಾಗಿ ಗಾಳಿ ಬೀಸಲಿರುವುದರಿಂದ ಚಂಡಮಾರುತದ ಜತೆ ಸುಂಟರಗಾಳಿಯೂ ಸೇರಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಜ್ಞರ ಪ್ರಕಾರ, ಹಿಮ ಚಂಡಮಾರುತವು ಬಾಂಬ್ ಚಂಡಮಾರುತ ಅಥವಾ ಬಾಂಬೊಜೆನಿಸಿಸ್ ಆಗಿ ರೂಪಾಂತರಗೊಳ್ಳುವ ಸಾಧ್ಯತೆಯಿದೆ. ಶೀತ ಗಾಳಿಯು ಸಮುದ್ರದ ಬಿಸಿ ಗಾಳಿಯೊಂದಿಗೆ ಮಿಶ್ರಗೊಂಡು ವಾತಾವರಣದ ಒತ್ತಡ ಕುಸಿಯುವುದರಿಂದ ಬಾಂಬ್ ಚಂಡಮಾರುತ ಉಂಟಾಗುತ್ತದೆ. ತುರ್ತು ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬರುವಂತೆ ರಾಷ್ಟ್ರೀಯ ಹವಾಮಾನ ಇಲಾಖೆಯು ಜನರಿಗೆ ಸೂಚಿಸಿದ್ದು ಪ್ರಯಾಣವನ್ನು ನಿರ್ಬಂಧಿಸುವಂತೆ ತಿಳಿಸಿದೆ. ಪ್ರಯಾಣಿಸಲೇ ಬೇಕು ಎಂದಾದರೆ ಚಳಿಯಿಂದ ರಕ್ಷಣೆ ನೀಡುವ ಕಿಟ್ ನಿಮ್ಮ ಜತೆಗಿರಲಿ. ದಾರಿ ಮಧ್ಯೆ ಸಿಕ್ಕಿಬಿದ್ದರೆ ನಿಮ್ಮ ವಾಹನದೊಂದಿಗೇ ಇರಬೇಕು ಎಂದು ಇಲಾಖೆ ಸೂಚಿಸಿದೆ.

ಶನಿವಾರ ಹೊರಾಂಗಣ ಊಟವನ್ನು ರದ್ದುಗೊಳಿಸಿದ್ದು ಲಸಿಕೆ ಹಾಕುವ ಪ್ರಕ್ರಿಯೆಯೂ ರದ್ದಾಗಿದೆ ಎಂದು ನ್ಯೂಯಾರ್ಕ್ ಗವರ್ನರ್ ಎರಿಕ್ ಆ್ಯಡಮ್ಸ್ ಪ್ರಕಟಿಸಿದ್ದಾರೆ. ಬಿಯರ್ನ 6 ಪ್ಯಾಕೆಟ್‌ನೊಂದಿಗೆ ಜನತೆ ಮನೆಯೊಳಗೇ ಇರುವುದು ಕ್ಷೇಮ ಎಂದು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News